ಸಾದಾಸೀದ ವ್ಯಕ್ತಿತ್ವ ಹಾಗೂ ನಟನಾ ಚಾತುರ್ಯದ ಮೂಲಕವೇ ಗಮನ ಸೆಳೆದಿರುವಾಕೆ ಸಾಯಿಪಲ್ಲವಿ. ಬಾಲಿವುಡ್ಡಿನ ಬಹುನಿರೀಕ್ಷಿತ ಚಿತ್ರ ರಾಮಾಯಣದಲ್ಲಿ ಸೀತೆಯಾಗಿ ನಟಿಸುತ್ತಿರೋ ಸಾಯಿಪಲ್ಲವಿಯೀಗ ಪ್ಯಾನಿಂಡಿಯಾ ಮಟ್ಟದಲ್ಲಿಯೂ ಬಹುಬೇಡಿಕೆ ಹೊಂದಿರುವ ನಟಿಯಾಗಿ ಹೊರಹೊಮ್ಮಿದ್ದಾರೆ. ಪಾತ್ರಗಳ ಆಯ್ಕೆಯೂ ಸೇರಿದಂತೆ ಪ್ರತಿಯೊಂದರಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳುವ ಸಾಯಿಪಲ್ಲವಿ ಮಣಿರತ್ನಂ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಲು ಒಪ್ಪಿಕೊಂಡಿದ್ದರ ಬಗ್ಗೆ ಬಹು ಹಿಂದಿನಿಂದಲೇ ಸುದ್ದಿ ಹರಿದಾಡುತ್ತಿತ್ತು. ಇದೀಗ ಆ ಸಿನಿಮಾದ ಚಿತ್ರೀಕರಣ ಸದ್ದುಗದ್ದಲವಿಲ್ಲದೆ ಶುರುವಾಗಿದೆ!
ವಿಜಯ್ ಸೇತುಪತಿ ಮತ್ತು ಸಾಯಿಪಲ್ಲವಿ ಬ್ರಿಡ್ಜ್ಒಂದರ ಮೇಲೆ ರೊಮ್ಯಾಂಟಿಕ್ ಮೂಡಿನಲ್ಲಿ ಸಾಗುತ್ತಿರೋ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದವು. ವಿಶೇಷವಾಗಿ, ವಿಜಯ್ ಸೇತುಪತಿಯ ಲುಕ್ಕು ಮಾತ್ರ ಪ್ರೇಕ್ಷಕರಲ್ಲೊಂದು ಕುತೂಹಲ ಮೂಡಿಸಿತ್ತು. ಸ್ಲಿಮ್ ಆಗಿ, ಕಾಲೇಜ್ ವಿದ್ಯಾರ್ಥಿಯ ಲುಕ್ಕಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಮೇಲು ನೋಟಕ್ಕೆ ಸಾಯಿಪಲ್ಲವಿ ತಮ್ಮ ಮಾಮೂಲಿ ಲುಕ್ಕಿನಲ್ಲಿಯೇ ಇದ್ದಾರಾದರೂ ವಿಜಯ್ ಸೇತುಪತಿ ಮಾತ್ರ ತಕ್ಷಣಕ್ಕೆ ಗುರುತಾಗದಷ್ಟು ಭಿನ್ನ ಗೆಟಪ್ಪಿನಲ್ಲಿರೋದು ಕುತೂಹಲ ಮೂಡಿಸಿತ್ತು. ಈ ಮೂಲಕವೇಧ ಮಣಿರತ್ನಂ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾವೀಗ ಚರ್ಚೆ ಹುಟ್ಟುಹಾಕಿದೆ!
ಮಣಿತ್ನಂ ಒಂದು ದೊಡ್ಡ ಮಟ್ಟದ ಹಿನ್ನಡೆಯ ನಂತರ ಮತ್ತೆ ಈ ಸಿನಿಮಾ ಮೂಲಕ ಪ್ರೇಮಕಥನದ ಚುಂಗು ಹಿಡಿದಿರೋದು ಸ್ಪಷ್ಟವಾಗಿದೆ. ಕೊಲ್ಕತ್ತಾದ ಹೌರಾ ಬ್ರಿಡ್ಜ್ ಮೇಲೆ ರಾತ್ರಿ ಹೊತ್ತಿನಲ್ಲಿ ಮಣಿರತ್ನಂ ಚಿತ್ರೀಕರಣ ನಡೆಸಿದ್ದಾರೆ. ಭಾರೀ ನಿರೀಕ್ಷೆ ಮೂಟಿಸಿದ್ದ ಥಗ್ ಲೈಫ್ ಚಿತ್ರದ ಮೂಲಕ ಹೀನಾಯ ಸೋಲು ಕಂಡಿದ್ದವರು ಮಣಿರತ್ನಂ. ಆದರೆ, ಈ ಬಾರಿ ಒಂದು ಸುದೀರ್ಘ ಮೌನದ ನಂತರ ಸದರಿ ಚಿತ್ರದ ಮೂಲಕ ಮಣಿರತ್ನಂ ಮತ್ತೆ ಬಂದಿದ್ದಾರೆ. ಆಗಾಗ ಒಂದಷ್ಟು ಕಳಪೆ ಸಿನಿಮಾಗಳ ಮೂಲಕ ನಿರಾಸೆ ಮೂಡಿಸುವ ವಿಜಯ್ ಸೇತುಪತಿಗೆ ಈ ಸಿನಿಮಾ ಮೂಲಕ ಮತ್ತೆ ಗೆಲುವು ದಕ್ಕುವ ಸಾಧ್ಯತೆಗಳೂ ಇದ್ದಾವೆ. ಆದರೆ, ಒಟ್ಟಾರೆ ಸಿನಿಮಾದ ಬಗ್ಗೆ ಯಾವ ವಿಚಾರವನ್ನು ಹಂಚಿಕೊಳ್ಳದ ಮಣಿರತ್ನಂ ತಣ್ಣಗೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ!
keywords: maniratnam, saipallavi, vijay sethupathi

