ಒರಟ ಶ್ರೀ ನಿರ್ದೇಶನದ `ಶಬರಿ’ ಚಿತ್ರವೀಗ ಸಿನಿಮಾ ಪ್ರೇಮಿಗಳ ವಲಯದಲ್ಲಿ ಗಾಢ ನಿರೀಕ್ಷೆಯೊಂದನ್ನು ಹುಟ್ಟುಹಾಕಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟೀಸರ್ ಒಂದಷ್ಟು ಸಕಾರಾತ್ಮಕ ಅಲೆ ಸೃಷ್ಟಿಸಿರುವಾಗಲೇ ಚಿತ್ರತಂಡ ಒಂದಿಡೀ ಸಿನಿಮಾದ ಆತ್ಮವನ್ನೇ ಅವುಸಿಟ್ಟುಕೊಂಡಂತೆ ಭಾಸವಾಗೋ ಹಾಡೊಂದನ್ನು ಬಿಡುಗಡೆಗೊಳಿಸಿದೆ. ತಂದಾನಿ ತಾನಾನೋ ಎಂಬ ಶೀರ್ಷಿಕೆ ಹೊಂದಿರೋ ಈ ವೀಡಿಯೋ ಸಾಂಗನ್ನು ನಿರ್ದೇಶಕ ಓಂಪ್ರಕಾಶ್ ರಾವ್, ರಘು ರಾಮ್, ಬಾಲಾಜಿ ವೀರಾಸ್ವಾಮಿ ಮತ್ತು ಉದ್ಯಮಿ ವಿ. ಬಾಬು ಬಿಡುಗಡೆಗೊಳಿಸಿದ್ದಾರೆ. ಈ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಬರಿಯ ಬಗೆಗಿನ ಬೆರಗಿನ ಅಂಶಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ಈ ವೀಡಿಯೋ ಸಾಂಗ್ ಅದ್ಭುತವಾಗಿ ಮೂಡಿ ಬಂದಿದೆ. ಹೇಮಂತ್ ಕುಮಾರ್ ಅವರ ಸಂಗೀತ ಸಂಯೋಜನೆ ಮನಮುಟ್ಟುವಂತಿದೆ. ಸರೆಗಮಪ ಖ್ಯಾತಿಯ ಅಶ್ವಿನ್ ಶರ್ಮಾ ಕೂಡಾ ಚೆಂದಗೆ ಹಾಡಿದ್ದಾರೆ. ಈ ಹಾಡಿನಲ್ಲಿ ಸಮರ್ಥ್ ಹಾಗೂ ಧನ್ವಿ ಎಲ್ಲಿಯೂ ಹೊಸಬರೆನ್ನಿಸದಂತೆ ಆ ಪಾತ್ರಗಳಿಗೆ ಜೀವ ತುಂಬಿದ್ದಾರೆಂಬ ಮೆಚ್ಚುಗೆಯ ಮಾತುಗಳು ಓಂಪ್ರಕಾಶ್ ರಾವ್ ಮತ್ತು ಬಾಲಾಜಿ ವೀರಾಸ್ವಾಮಿ ಕಡೆಯಿಂದ ಚಿತ್ರತಂಡಕ್ಕೆ ಲಭಿಸಿದೆ. ಇದೇ ಸಂದರ್ಭದಲ್ಲಿ ರಘುರಾಮ್ ಕೂಡಾ ಈ ಹಾಡನ್ನು ಮೆಚ್ಚಿಕೊಳ್ಳುತ್ತಾ, ದೊಡ್ಡ ಮಟ್ಟದ ಗೆಲುವು ಲಭಿಸಲೆಂದು ಹಾರೈಸಿದ್ದಾರೆ.
ನಿರ್ದೇಶಕ ಒರಟ ಶ್ರೀ ಸದರಿ ಹಾಡು ಸೃಷ್ಟಿಯಾದ ಬಗೆಗಿನ ಒಂದಷ್ಟು ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಕಥೆಯ ಸಾರವನ್ನು ಧ್ವನಿಸುವ ಈ ಹಾಡಿಗೆ ಸ್ಥಳದಲ್ಲಿಯೇ ಶ್ರೀ ಸಾಹಿತ್ಯ ಬರೆದಿದ್ದರಂತೆ. ಇದೇ ಸಂದರ್ಭದಲ್ಲಿ ಕಥೆಯ ಸೂಕ್ಷ್ಮ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಶಬರಿಯ ಬಗೆಗಿನ ಕೌತುಕ ತೀವ್ರಗೊಳ್ಳುವಂತೆ ಮಾಡಿದ್ದಾರೆ. ಹೀಗೆ ಬಿಡುಗಡೆಗೊಂಡಿರೋ ತಂದಾನಿ ತಾನಾನೋ ಹಾಡಿಗೀಗ ಕೇಳುಗರ ಕಡೆಯಿಂದ ಮೆಚ್ಚುಗೆ ಲಭಿಸುತ್ತಿದೆ. ಅದೀಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ.
ಸಿವಿಲ್ ಇಂಜಿನಿಯರ್ ಆಗಿರುವ ರಮೇಶ್, ಸುಧಾಕರ್ ರೆಡ್ಡಿ ಮತ್ತು ವಿಷ್ಣುಕಾಂತ್ ಎ ಜೊತೆಗೂಡಿ ಬರವಿ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒರಟ ಶ್ರೀ ನಿರ್ದೇಶನವಿರುವ ಈ ಚಿತ್ರದಲ್ಲಿ ಸಮರ್ಥ್ ಮತ್ತು ಕೃತಿಕಾ ಗೌಡ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಧನ್ವಿ, ಎಂ.ಕೆ ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ಬಿ.ಆರ್ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.
keywords: shabari movie, tandani tanano, sandalwood

