ನಿರ್ದೇಶಕನೋರ್ವನ ಕನಸು ಮತ್ತು ಕಲ್ಪನೆಯನ್ನು ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ಹಿಡಿದಿಡುವ ಸವಾಲಿನ ಕಸುಬು ಸಿನಿಮಾಟೋಗ್ರಫಿ. ಅಂಥಾ ಕೆಲಸವನ್ನು ದಶಕಗಳಿಂದೀಚೆಗೆ ಮಾಡಿಕೊಂಡು ಬರುತ್ತಾ, ಮೂಲತಃ ಪರಭಾಷಿಕರಾಗಿದ್ದರೂ ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ನಂಟು ಹೊಂದಿರುವವರು ಛಾಯಾಗ್ರಾಹಕ ವಡ್ಡೆ ದೇವೇಂದ್ರ ರೆಡ್ಡಿ. ಈ ಹಿಂದೆ ಒಂದಷ್ಟು ಕನ್ನಡ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ದೇವೇಂದ್ರ ರೆಡ್ಡಿ ನಾಳೆ ಅಂದರೆ, ಸೆಪ್ಟೆಂಬರ್ ೪ರಂದು ಬಿಡುಗಡೆಗೊಳ್ಳಲಿರುವ `ಅ ಡೇಟ್’ ಚಿತ್ರಕ್ಕೆ ಕ್ಯಾಮೆರಾ ಕಣ್ಣಾಗಿದ್ದಾರೆ. ಹೈದ್ರಾಬಾದಿನಲ್ಲಿ ಘಟಾನುಘಟಿಗಳ ಜೊತೆ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ದೇವೇಂದ್ರ ರೆಡ್ಡಿಯವರಿಗೆ `ಅ ಡೇಟ್’ ಬೇರೆಯದ್ದೇ ತೆರನಾದ ಅನುಭೂತಿಯನ್ನು ಕೊಡಮಾಡಿದೆ!
`ಅ ಡೇಟ್’ ವಿಮಲ್ ರಾಜ್ ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಚಿತ್ರ. ಕಿರುಚಿತ್ರಗಳ ಮೂಲಕವೇ ಅನುಭವ ದಕ್ಕಿಸಿಕೊಂಡು, ಪ್ರೇಕ್ಷಕರ ಗಮನ ಸೆಳೆದಿದ್ದ ವಿಮಲ್ ರಾಜ್ ಸಿನಿಮಾವ್ಯಾಮೋಹಿಗಳದ್ದೇ ಒಂದು ಪುಟ್ಟ ತಂಡ ಕಟ್ಟಿಕೊಂಡು ಈ ಚಿತ್ರವನ್ನು ರೂಪಿಸಿದ್ದಾರೆ. ಹಾಗೆ ಛಾಯಾಗ್ರಾಹಕರಾಗಿ ಈ ತಂಡ ಸೇರಿಕೊಂಡವರು ವಡ್ಡೆ ದೇವೇಂದ್ರ ರೆಡ್ಡಿ. ಈ ಹಿಂದೆ ಔಟ್ ಆಫ್ ಸಿಲೆಬಸ್ ಎಂಬ ಸಿನಿಮಾ ಸಂದರ್ಭದಲ್ಲಿ ನಿರ್ದೇಶಕ ವಿಮಲ್ ರಾಜ್ ದೇವೇಂದ್ರ ರೆಡ್ಡಿಗೆ ಪರಿಚಯವಾಗಿದ್ದರಂತೆ. ಆ ನಂತರ ತಾನು ಅ ಡೇಟ್ ಚಿತ್ರ ರೂಪಿಸಲು ಮುಂದಾದಾಗ ಛಾಯಾಗ್ರಹಣದ ಅವಕಾಶವನ್ನು ದೇವೇಂದ್ರ ರೆಡ್ಡಿಯವರಿಗೇ ನೀಡಿದ್ದರಂತೆ.
ಪ್ರತೀ ಸಿನಿಮಾಗಳಲ್ಲಿಯೂ ಪ್ರಯೋಗಾತ್ಮಕ ಅಂಶಗಳನ್ನು ಬಯಸುವ ದೇವೇಂದ್ರ ರೆಡಿ ಪಾಲಿಗೆ ಅ ಡೇಟ್ ಚಿತ್ರೀಕರಣ ಹೊಸಾ ಅನುಭವವನ್ನು ಕಟ್ಟಿಕೊಟ್ಟಿದೆ. ಈ ಸಿನಿಮಾ ಬೇರೆ ಸಿನಿಮಾಗಳಿಗಿಂತಲೂ ಭಿನ್ನ. ಯಾಕೆಂದರೆ, ಒಟ್ಟಾರೆ ಸಿನಿಮಾದ ಶೇಖಡಾ ಎಂಬತ್ತರಷ್ಟು ಭಾಗ ಲೈವ್ ಲೊಕೇಷನ್ನುಗಳಲ್ಲಿಯೇ ಚಿತ್ರೀಕರಿಸಿಕೊಂಡಿದೆ. ಬೆಂಗಳೂರಿನಂಥಾ ನಗರದ ಜನನಿಬಿಢ ವಾತಾವರಣದಲ್ಲಿ ಕಥೆಯ ಸಂದರ್ಭಕ್ಕೆ ತಕ್ಕಂತೆ ಚಿತ್ರೀಕರಿಸೋದು ದೇವೇಂದ್ರ ರೆಡ್ಡಿ ಪಾಲಿಗೆ ಸವಾಲಿನ ವಿಚಾರವಾಗಿತ್ತು. ಅದೆಲ್ಲದಕ್ಕೂ ನಿರ್ದೇಶಕರು ಸಂಪೂರ್ಣ ಸಹಕಾರ ನೀಡಿದ್ದರಿಂದ ಇಡೀ ಸಿನಿಮಾ ಅಂದುಕೊಂಡಂತೆಯೇ ಮೂಡಿ ಬಂದಿದೆ ಎಂಬ ತೃಪ್ತಿ ದೇವೇಂದ್ರ ರೆಡ್ಡಿಯದ್ದು.
ದೇವೇಂದ್ರ ರೆಡ್ಡಿ ಮೂಲತಃ ಹೈದರಾಬಾದ್ ಸಮೀಪದ ಹಳ್ಳಿಯವರು. ಎಳವೆಯಿಂದಲೂ ಅತೀವ ಸಿನಿಮಾ ಪ್ರೇಮ ಮತ್ತು ಕ್ಯಾಮೆರಾದತ್ತ ಅನೂಹ್ಯ ಸೆಳೆತ ಹೊಂದಿದ್ದ ಅವರು, ಕಡೆಗೂ ಛಾಯಾಗ್ರಾಹಕರಾಗಿಯೇ ವೃತ್ತಿ ಆರಂಭಿಸಿದ್ದು ವಿಶೇಷ. ನಟ ಸುಮನ್ ಅವರನ್ನು ಆರಾಧಿಸುತ್ತಲೇ ಬೆಳೆದು ಬಂದಿದ್ದ ದೇವೇಂದ್ರ ರೆಡ್ಡಿ, ಡಿಗ್ರಿ ವ್ಯಾಸಂಗ ಮುಗಿಯುತ್ತಲೇ ಸೀದಾ ಹೈದ್ರಾಬಾದ್ ಪಟ್ಟಣಕ್ಕೆ ತೆರಳಿದ್ದವರೇ ರಾಮೋಜಿ ಫಿಲಂ ಸಿಟಿಯಲ್ಲಿ ಕ್ಯಾಮೆರಾ ಅಸಿಸ್ಟೆಂಟ್ ಆಗಿ ಕಲಿಕೆ ಆರಂಭಿಸಿದ್ದರು. ಮಲೆಯಾಳಂ ಮೂಲಕ ಖ್ಯಾತ ಛಾಯಾಗ್ರಾಹಕ ಅಜಯ್ ವಿನ್ಸೆಂಟ್ ಅವರ ಬಳಿ ಛಾಯಾಗ್ರಹಣದ ನಾನಾ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು. ಆರೇಳು ವರ್ಷಗಳ ಕಾಲ ಅಸಿಸ್ಟೆಂಟ್ ಕ್ಯಾಮೆರಾಮನ್ ಆಗಿ ಅಗಾಧ ಅನುಭವ ತುಂಬಿಕೊಂಡಿದ್ದರು.
ರಾಧಿಕಾ ಕುಮಾರಸ್ವಾಮಿ ನಟಿಸಿದ್ದ ಸಿನಿಮಾಗೂ ಅಜಯ್ ವಿನ್ಸಂಟ್ ಅಸಿಟೆಂಟ್ ಆಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದ ದೇವೇಂದ್ರ ರೆಡ್ಡಿ ಆ ಬಳಿಕ ಅಚ್ಯುತ್ ಕುಮಾರ್ ನಟಿಸಿದ್ದ ಫೋರ್ ವಾಲ್ಸ್ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿದ್ದರು. ಅ ಡೇಟ್ ಅವರ ಪಾಲಿಗೆ ಕನ್ನಡದಲ್ಲಿ ಮೂರನೇ ಚಿತ್ರ. ಕನ್ನಡವನ್ನು ಅಚ್ಚುಕಟ್ಟಾಗಿ ಕಲಿತು, ಕನ್ನಡದಲ್ಲಿಯೇ ಮಾತುಕತೆ ನಡೆಸುವಷ್ಟು ಕನ್ನಡ ಪ್ರೇಮ ಹೊಂದಿರುವ ದೇವೇಂದ್ರ ರೆಡ್ಡಿಗೆ ಅ ಡೇಟ್ ಪ್ರಭೆಯಲ್ಲಿ ಮತ್ತೊಂದಷ್ಟು ಕನ್ನಡ ಚಿತ್ರಗಳಲ್ಲಿ ಅವಕಾಶಗಳು ಅರಸಿ ಬರುವ ಸಾಧ್ಯತೆರಗಳಿದ್ದಾವೆ. ಈ ಸಿನಿಮಾ ಪ್ರೇಕ್ಷಕರಿಗೆ ಹೊಸಾ ಅನುಭವ ನೀಡುತ್ತಲೇ, ಎಲ್ಲರಿಗೂ ಇಷ್ಟವಾಗುತ್ತದೆಂಬ ಗಾಢ ನಂಬಿಕೆ ದೇವೇಂದ್ರ ರೆಡ್ಡಿಗಿದೆ.
keywords: a date movie, vadde devendra reddy, sandalwood

