ಬಹುಕಾಲದ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಾಗಿ ನಟಿಸಿರುವ ಚಿತ್ರವೊಂದು ತೆರೆಗಾಣಲು ಸಜ್ಜಾಗಿದೆ. ಗೀತ ಗೋವಿಂದಂ ಎಂಬ ಚಿತ್ರದ ಮೂಲಕವೇ ರಶ್ಮಿಕಾ ಟಾಲಿವುಡ್ಡಿಗೆ ಎಂಟ್ರಿ ಕೊಟ್ಟು, ದೊಡ್ಡ ಮಟ್ಟದ ಗೆಲುವು ದಕ್ಕಿಸಿಕೊಂಡಿದ್ದೀಗ ಇತಿಹಾಸ. ಆ ಸಿನಿಮಾ ಮೂಲಕ ಜೋಡಿಯಾಗಿ ಕ್ರೇಜ್ ಸೃಷ್ಟಿಸಿದ್ದ ರಶ್ಮಿಕಾ ಮತ್ತು ದೇವರಕೊಂಡ ಇದೀಗ ನಿಜಜೀವನದಲ್ಲಿಯೂ ಜೊತೆಯಾಗಿದ್ದಾರೆ. ಆದರೆ, ವೃತ್ತಿ ಬದುಕಿನಲ್ಲಿ ಇಬ್ಬರೂ ಬೇರೆ ಬೇರೆ ಪಥಗಳಲ್ಲಿ ಹೆಜ್ಜೆಯಿಟ್ಟಿದ್ದರಿಂದಾಗಿ ಒಂದಾಗಿ ನಟಿಸದೆ ಬಹಳಷು ವರ್ಷವೇ ಆಗಿತ್ತು. ಈ ಜೋಡಿಯನ್ನು ಒಟ್ಟಿಗೆ ನೋಡಬೇಕೆಂಬ ಅಭಿಮಾನಿಗಳ ಆಕಾಂಕ್ಷೆ ರಣಬಾಲಿ ಚಿತ್ರದ ಮೂಲಕ ಕೈಗೂಡಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ (ranabaali movie) ರಣಬಾಲಿ ಅಕ್ಟೋಬರ್ ತಿಂಗಳು ಪ್ರೇಕ್ಷಕರ ಮುಂದೆ ಬರಲಿದೆ.
ರಶ್ಮಿಕಾ ಮಂದಣ್ಣ ಮದುವೆಗೆ ಮುಂಚೆಯೇ ಒಂದಷ್ಟು ಪ್ಯಾನಿಂಡಿಯಾ ಮಟ್ಟದ ಸಿನಿಮಾಗಳನ್ನು ಒಪ್ಪಿಕೊಂಡಿದ್ದಳು. ರಶ್ಮಿಕಾ ಕೈಲಿರೋ ಅಷ್ಟೂ ಚಿತ್ರಗಳಿಗಿಂತಲೂ ಮೊದಲು ರಣಬಾಲಿ ಚಿತ್ರ ಚಾಲೂ ಆಗುತ್ತದೆ ಎಂಬಂತೆ ಸುದ್ದಿಗಳು ಹಬ್ಬಿಕೊಂಡಿದ್ದವು. ಆದರೆ, ಮದುವೆ ನಂತರದಲ್ಲಿ ರಶ್ಮಿಕಾ ತಿಂಗಳುಗಟ್ಟಲೆ ಚಿತ್ರೀಕರಣದತ್ತ ಮುಖ ಹಾಕೋದು ಡೌಟು ಅಂತಲೇ ಬಹುತೇಕರು ಅಂದುಕೊಂಡಿದ್ದರು. ಅಚ್ಚರಿಯೆಂಬಂತೆ, ರಶ್ಮಿಕಾ ಬಹುಬೇಗನೆ ಚಿತ್ರೀಕರಣದ ಅಖಾಡಕ್ಕಿಳಿದು ಚಿತ್ರೀಕರಣ ಮುಗಿಸಿದ್ದಾಗಿತ್ತು. ಐಸಾ ಚಿತ್ರದ ಒಟ್ಟೊಟ್ಟಿಗೇ ರಣಬಾಲಿ ಕೂಡಾ ಅಂತಿಮ ಘಟ್ಟ ತಲುಪಿಕೊಂಡಿದೆ.
ಶತಮಾನಗಳ ಹಿಂದೆ ಅಂದರೆ ಬ್ರಿಟೀಷ್ ಆಡಳಿತ ಕಾರದ ರಣ ರೋಚಕ ಕಥನ ಹೊಂದಿರೋ ಈ ಸಿನಿಮಾದ ಪೋಸ್ಟರುಗಳನ್ನು ನೋಡಿಯೇ ಸಿನಿಮಾಸಕ್ತರು ಖುಷಿಗೊಂಡಿದ್ದಾರೆ. ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈ ಮೂಲಕ ಗೀತಾಗೋವಿಂದಂ ಚಿತ್ರವನ್ನೆ ಮೀರಿಸುವಂಥಾ ಮತ್ತೊಂದು ಗೆಲುವು ಕಾಣಲಿದ್ದಾರೆಂಬ ಮಾತುಗಳೂ ಕೂಡಾ ವ್ಯಾಪಕವಾಗಿಯೇ ಕೇಳಿ ಬರಲಾರಂಭಿಸಿದೆ. ನಿರ್ದೇಶಕ ರಾಹುಲ್ ಬಲು ಆಸ್ಥೆಯಿಂದಲೇ ಈ ಸಿನಿಮಾವನ್ನು ಶತಮಾನಗಳಷ್ಟು ಹಿಂದೆ ಘಟಿಸಿದಂಥಾದ್ದೇ ರೀತಿಯಲ್ಲಿ ದೃಶ್ಯಕ್ಕೆ ಒಗ್ಗಿಸಿದ್ದಾರಂತೆ. ಬಾಲಿವುಡ್, ಹಾಲಿವುಡ್ಡಿನ ಹೆಸರಾಂತ ತಂತ್ರಜ್ಞರು ರಣಬಾಲಿಗೆ ಸಾಥ್ ಕೊಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ರಣ ಬಾಲಿ ಚಿತ್ರವೀಗ ಪ್ಯಾನಿಂಡಿಯಾ ಮಟ್ಟದಲ್ಲೆ ಪ್ರೇಕ್ಷಕರನ್ನು ಬಹುವಾಗಿ ಸೆಳೆದುಕೊಂಡಿದೆ!
keywords: vijay devarakonda, rashmika mandanna, ranabaali

