ಗಂಟುಮೂಟೆಯೆಂಬ ಚಿತ್ರದ ಮೂಲಕ ಹೊಸಾ ಕಥನವೊಂದನ್ನು ತನ್ನದೇ ಪಥದಲ್ಲಿ ಪ್ರೇಕ್ಷಕರ ಮುಂದಿಟ್ಟು ಗೆಲುವು ಕಂಡಿದ್ದವರು, ನಿರ್ದೇಶಕಿಯಾಗಿ ಗಮನ ಸೆಳೆದಿದ್ದವರು ರೂಪಾ ರಾವ್. ಅದಾದ ಬಳಿಕ ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಾಪಕಿಯಾಗಿ ಅಚ್ಚರಿ ಮೂಡಿಸಿದ್ದ ರೂಪಾ ರಾವ್, ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆಂಬ ಬಗ್ಗೆ ಒಂದಷ್ಟು ತಿಂಗಳ ಹಿಂದೆ ಸುದ್ದಿ ಹಬ್ಬಿತ್ತು. ಇದೀಗ ಅದನ್ನು ಖುದ್ದು ಅವರೇ ನಿಜವೆಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಮುಂದಿನ ಚಿತ್ರ ಭಯಂಕರ ಪ್ರೀತಿಯ ಟೈಟಲ್ ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸುವ ಮೂಲಕ!
ಪ್ರೀತಿ ಎಂಬುದು ಸಿನಿಮಾ ಪಾಲಿಗೆ ಯಾವತ್ತಿಗೂ ತಾಜಾತನದಿಂದ ಕಂಗೊಳಿಸೋ ಮಾಯೆ. ಅವರವರ ಕ್ರಿಯಾಶೀಲತೆ, ಗ್ರಹಿಕೆಗೆ ತಕ್ಕಂತೆ ಪ್ರೇಮದ ಕಥಾ ಹಂದರ ಬೆರಗು ಮೂಡಿಸೋದಿದೆ. ಇದೀಗ ಭಯಂಕರ ಪ್ರೀತಿ ಚಿತ್ರದ ಮೂಲಕ ಮತ್ತೊಂದು ಬಗೆಯ ಪ್ರೇಮ ಕಥನವನ್ನು ರೂಪಾ ರಾವ್ ದೃಶ್ಯಕ್ಕೆ ಒಗ್ಗಿಸಲಿದ್ದಾರಾ? ಅಂಥಾದ್ದೊಂದು ಕುತೂಹಲ ಸಿನಿಮಾಸಕ್ತರಿಗಿದೆ. ಈಗಾಗಲೇ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿರುವ ರೂಪಾ ರಾವ್ ಸದ್ಯದ ಮಟ್ಟಿಗೆ ಬೇರ್ಯಾವ ವಿಚಾರಗಳನ್ನೂ ಬಿಟ್ಟು ಕೊಡದೆ, ಆಕರ್ಷಕವಾಗಿರೋ ಟೈಟಲ್ ಮೋಷನ್ ಪೋಸ್ಟರ್ ಮೂಲಕ ಕುತೂಹಲವನ್ನು ಕಾಯ್ದಿಟ್ಟುಕೊಳ್ಳಲು ಮುಂದಾದಂತಿದೆ.
ಗಂಟುಮೂಟೆ ಎಂಬ ಚಿತ್ರವನ್ನು ಕಟ್ಟಿ ಕೊಟ್ಟ ಶೈಲಿಯ ಮೂಲಕವೇ ರೂಪಾ ರಾವ್ ನಿರ್ದೇಶಕಿಯಾಗಿ ಗಮನ ಸೆಳೆದಿದ್ದರು. ಈ ಕಾರಣದಿಂದಲೇ ಭಯಂಕರ ಪ್ರೀತಿಯ ಸುತ್ತ ಒಂದಷ್ಟು ಚರ್ಚೆ ಮೂಡಿಕೊಂಡಿದೆ. ಈ ಶೀರ್ಷಿಕೆಯ ಮೂಲಕವೇ ಇದೊಂದು ವಿಶಿಷ್ಠ ಪ್ರೇಮ ಕಥನವೆಂಬ ಸುಳಿವು ಹೊಮ್ಮಿಕೊಂಡಿದೆ. ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರದಲ್ಲಿ ಆಶಿತ್, ಅನನ್ಯಾ ಮೋಹನ್, ವಿನಯ್ ಭಾರದ್ವಾಜ್, ಶೀತಲ್ ರಾವ್, ಸುಧಾ ಪ್ರಸಾದ್, ಅನಘ, ಚಂದ್ರಶೇಖರ್, ಪೃಥ್ವಿ ಬನವಾಸಿ, ರಾಮ್ ಮಂಜೊನಾಥ್, ವಿಶಾಲ್, ವೈಭವ್ ಶೆಟ್ಟಿ, ಚೇತನ್, ನಿತಿನ್, ಗಗನಶ್ರೀ ಮುಂತಾವರ ತಾರಾಗಣವಿರಲಿದೆ. ಪ್ರದೀಪ್ ನಾಯಕ್ ಸಂಕಲನ, ಶಿಬಿ ಶ್ರೀನಿವಾಸನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸಹದೇವ್ ಕೆಲವಡಿ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ. ಇಷ್ಟರಲ್ಲಿಯೇ ಭಯಂಕರ ಪ್ರೀತಿಯ ಬಗೆಗಿನ ಮತ್ತೊಂದಷ್ಟು ಬೆರಗಿನ ಸಂಗತಿಗಳು ಪ್ರೇಕ್ಷಕರನ್ನು ಮುಖಾಮುಖಿಯಾಗಲಿವೆ!
keywords: bhayankara preethi movie, roopa rao, sandalwood, kfi

