ತಂತ್ರಜ್ಞಾನಗಳ ಮೂಲಕ ಒಂದೆಡೆಯಿಂದ ಒಳಿತಿನ ಕೆಲಸಗಳಿಗಾಗಿ ಶ್ರಮ ವಹಿಸಲಾಗುತ್ತಿದೆ. ಅದನ್ನೆ ಮೀರಿಸುವಂತೆ ಕೆಲ ದುಷ್ಟ ಜಂತುಗಳು ತಂತ್ರಜ್ಞಾನವನ್ನು ಸಮಾಜಘಾತುಕ ಕೆಲಸಗಳಿಗೆ, ವಿಕೃತಿಗಳಿಗೆ ಬಳಸಿಕೊಳ್ಳೋದನ್ನೇ ಕಸುಬಾಗಿಸಿಕೊಂಡಿವೆ. ಅಂಥಾ ವಿಕೃತಿಗಳ ಸಾಲಿಗೆ ಇತ್ತೀಚಿನ ದಿನಮಾನದ ಅನಾಹುತಕಾರಿ ಸೇರ್ಪಡೆ ಡೀಪ್ ಫೇಕ್. ಅಸಲಿಯ ತಲೆಗೆ ಹೊಡೆದಂತೆ ಕಾಣಿಸುವ ಫೋಟೋ, ಅಶ್ಲೀಲ ವೀಡಿಯೋಗಳ ಮೂಲಕ ನಟಿಯರನ್ನು ಸಂದಿಗ್ಧಕ್ಕೀಡುಮಾಡುವ ಈ ದಂಧೆಯೀಗ ವ್ಯಾಪಕವಾಗಿ ಹಬ್ಬಿಕೊಂಡಿದೆ. ಮುಖ್ಯವಾಹಿನಿಯಲ್ಲಿರುವ ಬಹುತೇಕ ನಟಿಯರು ಇಂಥಾ ಡೀಪ್ ಫೇಕ್ ಪ್ರಹಾರಕ್ಕೀಡಾಗುತ್ತಿದ್ದಾರೆ. ಅರ್ಜುನ್ ರೆಡ್ಡಿ ಚಿತ್ರದ ನಾಯಕಿಯಾಗಿದ್ದ ಶಾಲಿನಿ ಪಾಂಡೆಗೂ ಈಗ ಅದರ ಬಿಸಿ ಬಾಧಿಸಿದೆ!
ಎಐ ಮೂಲಕ ಹೊಸಾ ಸಾಧ್ಯತೆಯತ್ತ ಜಗತ್ತು ಹೊರಳಿಕೊಳ್ಳುತ್ತಿದೆ. ಆದರೆ, ಕೆಲ ಅವಿವೇಕಿಗಳು ಮಾತ್ರ ನಟಿಯರ ಅಶ್ಲೀಲ ವೀಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ಆತಂಕ ಸೃಷ್ಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಏಕಾಏಕಿ ಶಾಲಿನಿ ಪಾಂಡೆಯ ವೀಡಿಯೋ ಕೂಡಾ ಅದೇ ರೀತಿ ಹರಿದಾಡಿತ್ತು. ಈ ಬಗ್ಗೆ ಖುದ್ದು ಶಾಲಿನಿಯೇ ಸ್ಪಷ್ಟೀಕರಣ ಕೊಟ್ಟು ಕಿಡಿ ಕಾರಿದರೂ ಕೂಡಾ ಆವೀಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ. ಇದೀಗ ಇಂಥಾ ಕಿಡಿಗೇಡಿತನವನ್ನು ತಡೆಯುವ ಬಗ್ಗೆ ಗಂಭೀರವಾದ ಚರ್ಚೆಗಳು ಶುರುವಾಗಿವೆ. ಈ ದೇಶದ ನಾನಾ ರಾಜ್ಯಗಳಲ್ಲಿ ಸೈಬರ್ ಕ್ರೈಂ ವಿಭಾಗ ಇದ್ದರೂ ಕೂಡಾ, ಅದು ನಿಷ್ಪ್ರಯೋಜಕವಾಗಿದೆ ಎಂಬಂಥಾ ಆಕ್ರೋಶವೂ ಮೂಡಿಕೊಂಡಿದೆ.
ಈವತ್ತಿಗೆ ಸೆಲೆಬ್ರಿಟಿ ನಟಿಯರನ್ನು ಮಾತ್ರವೇ ಇಂಥಾ ಎಐ ಪ್ರಣೀತ ಡೀಪ್ ಫೇಕ್ ವೀಡಿಯೋಗಳು ಬಾಧಿಸುತ್ತಿವೆ ಎಂಬಂತೆ ಅನೇಕರು ಅಂದುಕೊಂಡಿದ್ದಾರೆ. ಕೆಲ ವಿಕೃತರು ನಕಲಿ ಎಂದು ಗೊತ್ತಿದ್ದರೂ ಅಂಥಾ ವೀಡಿಯೋಗಳನ್ನು ನೋಡಿ ಚಪ್ಪರಿಸುತ್ತಾ, ತಾವೇ ಹರಿಯ ಬಿಟ್ಟು ವಿಕೃತ ಖುಷಿ ಅನುಭವಿಸುತ್ತಿದ್ದಾರೆ. ಆದರೆ, ಈ ಡೀಪ್ ಫೇಕ್ ಕಂಟಕ ತಮ್ಮ ಮನೆಯ ಹೆಣ್ಣುಮಕ್ಕಳನ್ನೂ ಬಲಿ ಹಾಕಲು ಸನ್ನದ್ಧಗೊಂಡಿದೆ ಎಂಬ ಕ್ರೂರ ವಾಸ್ತವ ಹೆಚ್ಚಿನವರಿಗೆ ಅರಿವಾಗುತ್ತಲೇ ಇಲ್ಲ. ಶಾಲಾ ಕಾಲೇಜು ಹುಡುಗೀರನ್ನು ಡೀಪ್ ಫೇಕ್ ಮೂಲಕ ಕ್ರಿಮಿಗಳು ಬೆತ್ತಲಾಗಿಸಿದರೆ, ಅದರಿಂದ ಮಾನ ಮಾತ್ರವಲ್ಲ; ಹಲವು ನಿಷ್ಪಾಪಿಗಳ ಜೀವವೇ ಹೋಗುವ ಅಪಾಯಗಳಿದ್ದಾವೆ.
ದುರಂತವೆಂದರೆ, ಇತ್ತೀಚಿನ ದಿನಗಳಲ್ಲಿ ಡೀಪ್ ಫೇಕ್ ಹಾವಳಿ ಹೆಚ್ಚಾಗಿದ್ದರೂ ಸಹ ಸೈಬರ್ ಕ್ರೈಂ ವಿಭಾಗದ ಮಂದಿ ಅದರತ್ತ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗೆ ನೋಡಿದರೆ, ಸೈಬರ್ ಕ್ರೈಂ ವಿಭಾಗ ಎಂಬುಸದು ಕೂಳು ದಂಡದ ಸಂ ಸ್ಥೆ ಎಂಬಂಥಾ ಅಪಖ್ಯಾತಿಗೀಡಾಗಿದೆ. ಈ ಸಂಸ್ಥೆಗೆ ಬೇಕಾದ ಸಿಬ್ಬಂದಿ ಮತ್ತು ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರಗಳೂ ವಿಫಲವಾಗುತ್ತಿವೆ. ಇದ್ದುದರಲ್ಲಿಯೇ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವ ದರ್ದು ಇಲ್ಲಿನ ಅಧಿಕಾರಿ ವರ್ಗಕ್ಕೂ ಇಲ್ಲವೆಂಬಂತೆ ಕಾಣಿಸುತ್ತಿದೆ. ಕ್ರಿಮಿನಲ್ಲುಗಳು ತಾಂತ್ರಿಕವಾಗಿ ಪಾತಾಳ ಗರಡಿ ಹಾಕಿರುವಾಗ, ಸೈಬರ್ ಕ್ರೈಂ ವಿಭಾಗಕ್ಕೂ ಅಂಥಾ ನುರಿತ ತಾಂತ್ರಿಕ ಪಡೆಯನ್ನು ಸೇರಿಸಿಕೊಳ್ಳೋ ತುರ್ತಿದೆ. ಆದರೆ, ಆಳೋ ಮಂದಿ ಕೆಲಸಕ್ಕೆ ಬಾರದ ಡೌಲುಗಳಲ್ಲಿ ಕಳೆದು ಹೋಗಿದ್ದಾರೆ. ಈವತ್ತಿಗೆ ಶಾಲಿನಿ ಪಾಂಡೆಯಂಥವರ ಫೇಕ್ ವೀಡಿಯೋಗಳನ್ನು ಸಂಭ್ರಮಿಸುತ್ತಿರುವವರೇ ಮುಂದೊಂದು ದಿನ ತಮ್ಮದೇ ಮನೆ ಹೆಣ್ಣುಮಕ್ಕಳು ಆ ದಂಧೆಗೀಡಾಗುವ ಸನ್ನಿವೇಶ ಕಂಡು ಅಸಹಾಯಕರಾಗಿ ಅಳುವ ಸಂದರ್ಭ ಸೃಷ್ಟಿಯಾಗೋದು ಖಚಿತ. ಈ ಹೊತ್ತಿನಲ್ಲಾದರೂ ಸರ್ಕಾರಗಳು ಸೈಬರ್ ಕ್ರೈಂ ವಿಭಾಗವನ್ನು ಕಟ್ಟುಮಸ್ತಾಗಿ ರೂಪಿಸದೇ ಹೋದರೆ, ತಂತ್ರಜ್ಞಾನವೂ ಈ ಸಮಾಜವನ್ನು ಪಿಡುಗಾಗಿ ಕಾಡುವ ದಿನ ದೂರವೇನಿಲ್ಲ!

