ಈ ಸಮಾಜದಲ್ಲಿ ಅದೆಂಥಾದ್ದೇ ಬೆಳವಣಿಗೆಗಳು ಘಟಿಸಿದರೂ, ಆಳೋ ಸರ್ಕಾರಗಳು ಅದೆಷ್ಟೇ ಜನವಿರೋಧಿ ನಡೆ ಅನುಸರಿಸಿದರೂ ಸೋಕಾಲ್ಡ್ ಸೆಲೆಬ್ರಿಟಿಗಳು ತಣ್ಣಗೆ ಬಿಲ ಸೇರಿಕೊಳ್ಳುತ್ತಾರೆ. ಸರ್ಕಾರ ಯಾವ ಪಕ್ಷದ್ದೇ ಆಗಿರಲಿ; ಅದರ ತಪ್ಪು ನಡೆಗಳನ್ನು ಪ್ರಶ್ನಿಸಬೇಕೆಂಬ ಪ್ರಜಾಸತ್ತಾತ್ಮಕ ಕರ್ತವ್ಯದ ಬಗ್ಗೆ ಈ ಅವಿವೇಕಿಗಳಿಗೆ ಅರಿವಿಲ್ಲ; ಅರಿವಿದ್ದರೂ ಆಳೋ ಮಂದಿಯನ್ನು ಪ್ರಶ್ನಿಸುವ ತಾಕತ್ತೂ ಇಲ್ಲ. ಆದರೆ, ನಿಯಮಿತವಾಗಿ ಆಳೋ ಮಂದಿಯ ಬೂಟಿನ ಮೇಲೆ ನಯವಾಗಿ ನಾಲಿಗೆಯಾಡಿಕಸೋದರಲ್ಲಿ ಮಾತ್ರ ಈ ಮಂದಿ ನಿಷ್ಣಾತರು. ಅಂಥಾ ಕಲೆಯಲ್ಲಿ ಭಲೇ ಚಾಲಾಕಿಯಾಗಿರುವ, ಆ ಅರ್ಹತೆಗಾಗಿಯೇ ಟಿಕೇಟು ಗಿಟ್ಟಿಸಿಕೊಂಡು ಸಂಸದೆಯಾಗಿರುವ ಕಂಗನಾ ರಾಣೌತ್ ಇದೀಗ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು, ವಿಶ್ವದ ಗಮನ ಸೆಳೆದಿರುವ ಜೆನ್ ಜಿಗಳ ಬಗ್ಗೆ ವಿಷ ಕಾರಿಕೊಂಡಿದ್ದಾರೆ!
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಜೆನ್ ಜಿ ಪಡೆ ನಡೆಸಿರುವ ಹೋರಾಟವೀಗ ವಿಶ್ವಾದ್ಯಂತ ಗಮನ ಸೆಳೆದಿದೆ. ಆಳೋ ಸರ್ಕಾರ ಒಂದು ಹಂತದ ವರೆಗೂ ಈ ಹೋರಾಟವನ್ನು ನಾನಾ ಬಗೆಯಲ್ಲಿ ಹತ್ತಿಕ್ಕಲು ನೊಡಿ ವಿಫಲವಾಗಿತ್ತು. ನ್ಯಾಯ ಕೇಳಲು ಬಂದ ವಿದ್ಯಾರ್ಥಿಗಳ ಮೇಲೆಯೇ ಲಾಠಿ ಪ್ರಹಾರ ನಡೆಸುವ, ಗೂಂಡಾಗಳನ್ನು ಬಿಟ್ಟು ಬಡಿಸುವಂಥಾ ಸರ್ವಾಧಿಕಾರಿ ಧೋರಣೆ ಕೂಡಾ ಕೇಂದ್ರ ಸರ್ಕಾರದ ಕಡೆಯಿಂದ ಪ್ರದರ್ಶನಗೊಂಡಿತ್ತು. ಸರ್ಕಾರವನ್ನು ಪ್ರಶ್ನಿಸೋದೇ ದೇಶದ್ರೋಹ ಎಂಬಂತೆ ಬಿಂಬಿಸುವ, ಹೋರಾಟಗಾರರನ್ನು ಹೀನಾಯವಾಗಿ ನಿಂದಿಸುವ ಕೆಲಸವನ್ನು ಕಂಗನಾಳ ಪಟಾಲಮ್ಮಿನವರೇ ಅವ್ಯಾಹತವಗಿ ನಡೆಸಿದ್ದರು. ಅದರೂ ಈಕೆ ಅದ್ಯಾವುದರ ವಿರುದ್ಧವೂ ತುಟಿ ಬಿಚ್ಚಿರಲಿಲ್ಲ.
ಆದರೀಗ ಕಾಕ್ರೋಚುಗಳ ಪ್ರತಿಭಟನೆಯಿಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಎಗರಿಕೊಳ್ಳುವ ಪರಿಸ್ಥಿತಿ ಬಂದಿದೆ. ಖುದ್ದು ಮೋದಿಯೇ ನಾನಾ ಅವತಾರಗಳಲ್ಲಿ ವೀಡಿಯೋ ಬಿಡುವ ಮೂಲಕ ಡ್ಯಾಮೇಜ್ ಕಂಟ್ರೋಲಿಗೆ ಹರಸಾಹಸ ಪಡುವಂತಾಗಿದೆ. ಈ ಹೊತ್ತಿನಲ್ಲಿ ಮತ್ತದೇ ಹಳಸಲು ವಿಚಾರಗಳೊಂದಿಗೆ ಕಂಗನಾ ವರಾತ ಶುರುವಿಟ್ಟಿದ್ದಾಳೆ. ಜೆನ್ಜಿಗಳ ಹೋರಟ, ರೀಲ್ಸ್ಗಳನ್ನು ಕಂಡರೆ ವಾಂತಿ ಬರುತ್ತದೆ, ಸಂಸೃತಿಯಲ್ಲಿ ಶ್ರೀಮಂತವಾದ ದೇಶದ ಮಾನವನ್ನು ಜೆನ್ ಜಿಗಳು ವಿಶ್ವದ ಮುಂದೆ ಹರಾಜು ಹಾಕಿದ್ದಾರೆ ಅಂತೆಲ್ಲ ಹಲುಬಿಕೊಂಡಿದ್ದಾರೆ.

ಅಸಲಿಗೆ ಮಾನ ಹರಾಜಾಗಿರೋದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ, ಕೇಂದ್ರ ಸರ್ಕಾರದ ಬೇಜವಾಬ್ದಾರಿ ನಿಲುವಿನಿಂದ. ರಾಮನಾನ ಸ್ಮರಿಸುತ್ತಲೇ ಅಧಿಕಾರಕ್ಕೇರಿದವರ ನೆರಳಲ್ಲಿಯೇ ನಡೆದ ರಾಮನ ಹುಂಡಿಯ ಹಣ ಕಳುವಿನಿಂದ. ಆದರೆ, ಕಂಗನಾರಂಥವರು ಯಾರ ಬದುಕು ನೋವಲ್ಲಿದ್ದರೂ ಅಂಥವರಿಗೆ ನ್ಯಾಯ ಕೊಡಿಸುವ ಬದಲು ಕಲೆ ಸಂಸ್ಕೃತಿ ಅಂತೆಲ್ಲ ಪುಂಗಲಾರಂಭಿಸುತ್ತಾರೆ. ಇದು ಬೌಧಿಕ ದಿವಾಳಿತನವಲ್ಲದೆ ಮತ್ತಿನ್ನೇನು?
keywords: kangana ranaut, cockroach protest, bjp, modi

