ಕಳೆದೆರಡು ದಿನಗಳಿಂದೀಚೆಗೆ ಸ್ಯಾಂಡಲ್ವುಡ್ಡಿನ ಸ್ವಘೋಶಿತ ಶೋಕ್ದಾರ್ ಧನ್ವೀರ್ ಸುದ್ದಿ ಕೇಂದ್ರದಲ್ಲಿದ್ದಾನೆ. ದರ್ಶನ್ ಪಾಳೆಯದಲ್ಲಿ ಲಾಗಾಯ್ತಿನಿಂದಲೂ ಗುರುತಿಸಿಕೊಂಡಿದ್ದ ನಾಗನಿಗೆ ಆವಾಜು ಹಾಕೋ ವಾಯ್ಸ್ ರೆಕಾರ್ಡ್ ಮೂಲಕ ಆರಂಭವಾಗಿದ್ದ ಈ ವಿವಾದವೀಗ ನಾನಾ ಸ್ವರೂಪಗಳಲ್ಲಿ ಆಸ್ಫೋಟಗೊಳ್ಳಲಾರಂಭಿಸಿದೆ. ವಿಜಯಲಕ್ಷ್ಮಿ ಮತ್ತು ಧನ್ವೀರ ಪರಸ್ಪರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸೋ ಮೂಲಕ ದರ್ಶನ್ ಪಾಳೆಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಅಷ್ಟಕ್ಕೂ ಧನ್ವೀರನಿಗೆ ದರ್ಶನ್ ಹಚಾ ಅಂದು ಅಟ್ಟಿಸಿರುವ ಬಗ್ಗೆ ಒಂದಷ್ಟು ರೂಮರುಗಳು ಹಬ್ಬಿಕೊಂಡಿದ್ದವು. ವಾರಗಳ ಹಿಂದಷ್ಟೇ `ಸಿನಿ ಶೋಧ’ ದರ್ಶನ್ ಪಾಳೆಯದಿಂದ ಧನ್ವೀರ ಹೊರದಬ್ಬಿಸಿಕೊಂಡಿದ್ದರ ಹಿಂದಿರುವ ಅಸಲೀ ವಿಚಾರವನ್ನು ತೆರೆದಿಟ್ಟಿತ್ತು. ಈಗ ಗರಿ ಬಿಚ್ಚಿಕೊಂಡಿರೋದು ಅದರ ಕೊಂಡಿಯಿಂದಲೇ ಮುಂದುವರೆದ ರಣರೋಚಕ ಅಧ್ಯಾಯ!
ದಗಲ್ಬಾಜಿ ಧನ್ವೀರ್
ಧನ್ವೀರ್ ಎಂಬಾತ ತಾನು ನಟಿಸಿರುವ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಮೈಲೇಜು ಪಡೆದುಕೊಂಡಿದ್ದದ್ದು ದರ್ಶನ್ ಜೊತೆಗಿನ ಸಖ್ಯದಿಂದ. ಸಿಂಪಲ್ ಸುನಿ ಅದ್ಯಾವ ಘಳಿಗೆಯಲ್ಲಿ, ಅದ್ಯಾವ ಸೌಭಾಗ್ಯಕ್ಕೆ ಈತನನ್ನು ನಾಯಕನನ್ನಾಗಿಸಿದನೋ… ಆ ಸಿನಿಮಾ ಪ್ರಭೆಯಲ್ಲಿಯೇ ಧನ್ವೀರ ತಾನು ದರ್ಶನ್ ಅಭಿಮಾನಿ ಅಂತೆಲ್ಲ ಪ್ರಚಾರ ಪಡೆದುಕೊಂಡವನೇ, ನೋಡ ನೋಡುತ್ತಲೇ ದಾಸನ ಖಾಸಾ ದರ್ಬಾರಿನ ಖಾಯಂ ಸದಸ್ಯನಂತಾಗಿದ್ದ. ಮೊದಲ ಸಿನಿಮಾ ಸಮಯದಲ್ಲಿ ಪ್ಯಾದೆಯಂತಿದ್ದ ಧನ್ವೀರ ಬರಬರುತ್ತಾ ಥೇಟು ದರ್ಶನ್ ಥರದ್ದೇ ಹಾವಭಾವಗಳನ್ನು ಧರಿಸಿಕೊಂಡು ಅಡ್ಡಾಡಲಾರಂಭಿಸಿದ್ದ. ಹಾಗೆ ಒಂದಷ್ಟು ಕಾಲ ದರ್ಶನ್ ಜೊತೆ ಬೆರೆತು ಅದ್ಯಾವ ಪರಿಯಾಗಿ ಜಲಗಾರ ಯೂನಿವರ್ಸಿಟಿಯ ಹೈಜೆನಿಕ್ ಭಾಷೆ, ಪದ ಪುಂಜಗಳನ್ನು ಉರುಹೊಡೆದಿದ್ದನೆಂಬ ವಿಚಾರವೀಗ ವಾಯ್ಸ್ ರೆಕಾರ್ಡ್ ಮೂಲಕ ಒಂದೊಂದಾಗಿ ಜಾಹೀರಾಗಲಾರಂಭಿಸಿದೆ. ಈ ಮೂಲಕ ಈತನ ದಗಲ್ಬಾಜಿ ವೃತ್ತಾಂತಗಳು ಒಂದೊಂದಾಗಿ ಬಯಲಾಗಲಾರಂಭಿಸಿವೆ!
ಸದ್ಯಕ್ಕೀಗ ರೂಮರಿನಂತೆ ಹಬ್ಬಿಕೊಂಡಿದ್ದ ದರ್ಶನ್ ಹಾಗೂ ಧನ್ವೀರ್ ನಡುವಿನ ಬಂಧ ಕಳಚಿಕೊಂಡ ಸುದ್ದಿ ನಿಜವಾಗಿದೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಆಪ್ತನಾಗಿರೋ ನಾಗನಿಗೆ ಹೀನಾಮಾನ ನಿಂದಿಸಿದ್ದ ಧನ್ವೀರನ ವಾಯ್ಸ್ ರೆಕಾರ್ಡ್ ಆರಂಭದಲ್ಲಿ ಬಿಡುಗಡೆಯಾಗಿತ್ತು. ಅದಾದ ಬಳಿಕೆ ಕೆಲ ಮಾಧ್ಯಮಗಳಲ್ಲಿ ಧನ್ವೀರ ವೀರಾಗ್ರಣಿಯಂತೆ ಮಾತಾಡಿದ್ದ. ಎಲ್ಲರ ಮುಖವಾಡಗಳನ್ನೂ ಕಳಚ್ತೀನಿ ಎಂಬರ್ಥದಲ್ಲಿ ಅಬ್ಬರಿಸಿದ್ದ. ಅದರ ಬೆನ್ನಲ್ಲೆಯೇ ಧನ್ವೀರನ ಮತ್ತೊಂದಷ್ಟು ವಾಯ್ಸ್ ರೆಕಾರ್ಡುಗಳು ಒಂದರ ಹಿಂದೊಂದರಂತೆ ಹೊರಬರಲಾರಂಭಿಸಿವೆ. ಅವುಗಳ ಮೂಲಕ ಧನ್ವೀರನ ಪೊರ್ಕಿ ಮನಃಸ್ಥಿತಿಯ ವಿರಾಟ್ ರೂಪದ ಅನಾವರಣವಾಗಿಬಿಟ್ಟಿದೆ.
ಹರುಕು ಬಾಯೇ ಮುಳುವಾಯ್ತು
ತನ್ನ ಮನೆ ಮುಂದೆ ಸಿಎಂ ಡಿಕೆಶಿಯೇ ಎಡತಾಕುತ್ತಿದ್ದರು, ತನ್ನಪ್ಪ ಮನೇಲಿ ಕುಂತೇ ದೆಹಲಿ ಮಟ್ಟದ ರಾಜಕಾರಣದಲ್ಲಿ ಆಟವಾಡ್ತಾನೆ ಎಂಬುದರಿಂದ ಹಿಡಿದು ಜಮೀರ್ ಪುತ್ರ ಜೈದ್ ಖಾನ್ಗೆ ಹೀನಾಮಾನ ಬೈಯುವಲ್ಲಿಯವರೆಗಿನ ವಾಯ್ಸ್ ರೆಕಾರ್ಡುಗಳು ಈಗಾಗಲೇ ಜಾಹೀರಾಗಿವೆ. ಇದನ್ನು ಕೇಳಿದ ಮಂದಿಗೆಲ್ಲ ಧನ್ವೀರತ ಈ ವಿಚಾರದಲ್ಲಿ ಪಕ್ಕಾ ದರ್ಶನ್ ತಮ್ಮನಂಥವನೇ ಅಂತನ್ನಿಸಿಬಿಟ್ಟಿದೆ. ಈಬಗ್ಗೆ ಒಂದಷ್ಟು ಟ್ರೋಲುಗಳು, ರೀಲುಗಳು ಯಥೇಚ್ಛವಾಗಿ ಹರಿದಾಡುತ್ತಿವೆ. ಹಾಗಾದರೆ, ತೀರಾ ಖಾಸಗಿಯೆನ್ನಿಸುವ ಧನ್ವೀರ ವಾಯ್ಸ್ ರೆಕಾರ್ಡುಗಳನ್ನು ಬಿಡುಗಡೆ ಮಾಡುತ್ತಿರುವವರು ಯಾರು? ಅದರ ಹಿಂದಿರೋ ಅಸಲೀ ಉದ್ದೇಶವೇನು? ಇಂಥಾ ಹತ್ತಾರು ಪ್ರಶ್ನೆಗಳು ಸಹಜವಾಗಿಯೇ ಕಾಡುತ್ತವೆ. ಅದಕ್ಕೆ ಉತ್ತರ ಹುಡುಕ ಹೋದರೆ, ಬಿಟ್ಟಿ ಶೋ ಅಪ್ ಕೊಡೋ ಶೋಕ್ದಾರ್ ಇಷ್ಟರಲ್ಲಿಯೇ ಪರಪ್ಪನ ಅಗ್ರಹಾರದ ಬೆಣಚುಗಲ್ಲಿನ ಮೇಲೆ ಪವಡಿಸಬಹುದಾದ ಲಕ್ಷಣಗಳು ದಟ್ಟವಾಗಿಯೇ ಗೋಚರಿಸುತ್ತವೆ!
ಈಗ ಹರಿದಾಡುತ್ತಿರೋ ಒಂದಷ್ಟು ವಿಚಾರಗಳ ಆಧಾರದಲ್ಲಿ ಹೇಳೋದಾದರೆ, ಥೇಟು ದರ್ಶನ್ನಂತೆಯೇ ಕಂಡ ಕಂಡಲ್ಲಿ ಬಾಯಿಗೆ ಬಂದಂತೆ ಮಾತಾಡುವ ಖಯಾಲಿ ಹೊಂದಿದ್ದ ಧನ್ವೀರ ವಾಯ್ಸ್ ರೆಕಾರ್ಡುಗಳು ಗಟ್ಟಿ ಕುಳವೊಂದರ ಕೈಗೆ ಸಿಕ್ಕಿಗೆ. ಆ ಶಕ್ತಿ ಕೇಂದ್ರದಿಂದಲೇ ಧನ್ವೀರನ ಅವತಾರಗಳು ಒಂದೊಂದಾಗಿ ಹೊರಬರುತ್ತಿವೆ. ಇಷ್ಟರಲ್ಲಿಯೇ ಮತ್ತೊಂದೆರಡು ಮಹತ್ವದ ವಾಯ್ಸ್ ರೆಕಾರ್ಡುಗಳು ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದಾವೆ. ಅದರಲ್ಲಿ ಧನ್ವೀರ್ ಒಂದಷ್ಟು ಘನ ಗಂಭೀರವಾದ ವಿಚಾರಗಳನ್ನು ಒದರಿದ್ದಾನಂತೆ. ಅದೇನು ಸಾಮಾನ್ಯದ ವಿಚಾರವೇನಲ್ಲ. ಆ ವಾಯ್ಸ್ ರೆಕಾರ್ಡಿನ ಮೂಲಕ ಒಂದು ದೊಡ್ಡ ಮಟ್ಟದ ಸುಪಾರಿ ಪರ್ವ ಜಾಹೀರಾಗಲಿದೆಯಾ? ಬೊಮ್ಮನಹಳ್ಳಿಯ ಕಾಮರೋಗಿ ಕಂ ನಟೋರಿಯಸ್ ರಾಜಕಾರಣಿಯೊಬ್ಬನ ಹೆಸರೂ ಅದರಲ್ಲಿದೆಯಾ? ಅದು ನೇರವಾಗಿ ದಾಸನ ಕುತ್ತಿಗೆಗೂ ಸುತ್ತಿಕೊಳ್ಳಲಿದೆಯಾ? ಇಂಥಾ ಪ್ರಶ್ನೆಗಳಿಗೆ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ!
ಹಚಾ ಅಂದ ದಾಸ

ಇದೆಲ್ಲದರಾಚೆಗೆ ದರ್ಶನ್ ಪಾಳೆಯದಿಂದ ಧನ್ವೀರ್ ಕಿಕ್ಔಟಾಗಿರೋ ವಿಚಾರವಂತೂ ಸ್ಪಷ್ಟವಾಗಿದೆ. ಸದ್ಯದ ಮಟ್ಟಿದೆ ಧನ್ವೀರ ವಿಜಯಲಕ್ಷ್ಮಿಯ ಮೇಲೆ ನಾನಾ ವೆರೈಟಿಯ ಗೂಬೆ ಕೂರಿಸುತ್ತಲೇ ತಾನು ಈಗಲೂ ದರ್ಶನ್ ಪರಮಾಪ್ತ, ಹಿತೈಶಿ ಎಂಬಂತೆ ಬಿಂಬಿಸಿಕೊಳ್ಳಲು ಹೆಣಗುತ್ತಿದ್ದಾನೆ. ಆದರೆ, ಖುದ್ದು ದರ್ಶನ್ ಆತನನ್ನು ತಿಂಗಳ ಹಿಂದೆಯೇ ಉಗಿದಟ್ಟಿದ್ದಾನೆಂಬ ವಿಚಾರ ದಾಸನ ಖಾಸಗಿ ವಲಯದಲ್ಲಿ ಹರಿದಾಡುತ್ತಿದೆ. ಯಾವಾಗ ದರ್ಶನ್ ಪಾಳೆಯದಿಂದ ದೂರಾದನೋ, ತನ್ನ ಬಲದಂತಿದ್ದ ದಾಸನ ಅಭಿಮಾನಿ ಬಳಗವೆಲ್ಲಿ ತಿರುಗಿ ಬೀಳುತ್ತದೋ ಎಂಬ ದಿಗಿಲು ಮೂಡಿಕೊಂಡಿದೆ. ಇದರ ಭಾಗವಾಗಿಯೇ ವಿಜಯಲಕ್ಷ್ಮಿಯೇ ದರ್ಶನ್ ಬಿಡುಗಡೆಗೆ ಅಡ್ಡಗಾಲಾಗಿದ್ದಾರೆಂಬ ಅಸ್ತ್ರವೊಂದನ್ನು ಪ್ರಯೋಗಿಸಿಬಿಟ್ಟಂತಿದೆ!
ದರ್ಶನ್ ತಿಮಿರುಗಳಿಂದಾಗಿ ನಾನಾ ಕಷ್ಟ ಕೋಟಲೆಗಳನ್ನು ಅನುಭವಿಸಿದ್ದಾಕೆ ವಿಜಯಲಕ್ಷ್ಮಿ. ಅಂಥಾ ಎಲ್ಲ ನೋವುಗಳನ್ನು ಮನಸಲ್ಲಿಟ್ಟುಕೊಂಡಿದ್ದರೂ, ತನ್ನ ಪತಿಯ ಪರವಾಗಿ ಆಕೆ ಹೋರಾಡುತ್ತಿರುವ ರೀತಿಯ ಬಗ್ಗೆ ಎಲ್ಲರಲ್ಲೂ ಮೆಚ್ಚುಗೆ ಇದೆ. ಇಂಥಾ ಹೆಣ್ಣುಮಗಳ ಮೇಲೆ ಆಪಾದನೆ ಹೊರಿಸಿ, ಆ ಮೂಲಕ ದಾಸನ ಅಭಿಮಾನಿ ವಲಯದಲ್ಲಿ ಗೊಂದಲ ಮೂಡಿಸಿ, ಈ ಕ್ಷಣಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ನೌಟಂಕಿಯಾಟ ಶೋಕ್ದಾರನ ಕಡೆಯಿಂದ ಪ್ರದರ್ಶನಗೊಂಡಿದೆ. ಈ ಕ್ಷಣಕ್ಕೂ ವಿಜಯಲಕ್ಷ್ಮಿ ತನ್ನ ಗಂಡನನ್ನು ಹೇಗಾದರೂ ಈ ಉರುಳಿನಿಂದ ಬಿಡಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ. ದೇವರು, ದೈವಗಳಿಗೆ ಸೇವೆ ಸಲ್ಲಿಸುತ್ತಾ, ಹರಕೆ ಕಟ್ಟುತ್ತಾ ಅದೇ ಹೊತ್ತಿನಲ್ಲಿ ಕಾನೂನು ಚೌಕಟ್ಟಿನತ್ತಲೂ ಗಂಭೀರವಾಗಿ ಗಮನ ಹರಿಸುತ್ತಿರುವ ಈಕೆಯದ್ದು ಎಡೆಬಿಡದ ಪ್ರಯತ್ನ. ಇಂಥಾ ವಿಜಯಲಕ್ಷ್ಮಿಯ ಮೇಲೇ ಅನುಮಾನ ಮೂಡುವಂತೆ ಮಾಡೋ ಚಾಲಾಕಿ ನಡೆ ಪ್ರದರ್ಶಿಸಿರುವ ಧನ್ವೀರನಿಗೆ ಎಲ್ಲವೂ ವಾಪಾಸು ಗುಮ್ಮುವ ದಿನಗಳು ಸನಿಹದಲ್ಲೇ ಇದ್ದಂತಿವೆ!
ನಿಜಕ್ಕೂ ನಡೆದಿದ್ದಿಷ್ಟು!

ಸಿನಿಶೋಧ ವಾರದ ಹಿಂದೆಯೇ ಪ್ರಕಟಿಸಿದ್ದ ವಿಸ್ತ್ರೃತ ವರದಿಯಂತೆಯೇ, ಈಗ್ಗೆ ತಿಂಗಳ ಹಿಂದೆ ಧನ್ವೀರ ವಿಜಯಲಕ್ಷ್ಮಿ ಮತ್ತಿತರರೊಂದಿಗೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದ. ಈ ಹಂತದಲ್ಲಿ ಖುದ್ದು ದರ್ಶನ್ ತನ್ನ ಕಡೆಯಿಂದ ಧನ್ವೀರನಿಗೆ ಕೊಟ್ಟಿದ್ದ ಬಹುಕೋಟಿ ಹಣವನ್ನು ವಿಜಯಲಕ್ಷ್ಮಿಗೆ ವಾಪಾಸು ಕೊಡುವಂತೆ ತಾಕೀತು ಮಾಡಿದ್ದ. ದಾಸನ ಮುಂದೆ ವಿಧೇಯನಂತೆ ನಿಂತು ಒಪ್ಪಿಕೊಂಡಿದ್ದ ಧನ್ವೀರ, ಆ ನಂತರ ಹೊಸಾ ಆಟ ಕಟ್ಟಿದ್ದಾನೆ. ಮೊನ್ನೆ ದಿನ ವಿಜಯಲಕ್ಷ್ಮಿ ನಾಗನೊಂದಿಗೆ ಧನ್ವೀರನ ಮನೆಗೆ ತೆರಳಿದ್ದದ್ದು ಆ ಹಣ ವಾಪಾಸು ಪಡೆಯೋ ವಿಚಾರವಾಗಿಯೇ. ಅಷ್ಟಕ್ಕೂ ಧನ್ವೀರ ಪಡೆದುಕೊಂಡಿದ್ದೇನು ಸಣ್ಣ ಮೊತ್ತವಲ್ಲ. ಅದರ ಬಾಬತ್ತು ಐದು ಕೋಟಿ ಎನ್ನಲಾಗುತ್ತಿದೆಯಾದರೂ, ಹತ್ತತ್ತಿರ ಹನ್ನೆರಡು ಕೋಟಿ ಎಂಬ ಗುಮಾನಿಯೂ ಇದೆ.
ಹೇಳಿಕೇಳಿ ದರ್ಶನ್ ವ್ಯವಹಾರವೆಲ್ಲ ಈಗ ನಿಂತಿದೆ. ಆತ ಹೊರ ಬರೋದೇ ಡೌಟೆಂಬಂತಿರೋವಾಗ ಯಾರ ಬಳಿಯೂ ಕಿಲುಬುಗಾಸು ಹುಟ್ಟುವ ಲಕ್ಷಣಗಳಿಲ್ಲ. ಇಂಥಾ ಹೊತ್ತಿನಲ್ಲಿ ಧನ್ವೀರನಿಗೆ ಕೊಟ್ಟ ಕಾಸು ಹಿಂಪಡೆಯೋದು ವಿಜಯಲಕ್ಷ್ಮಿ ಪಾಲಿಗೆ ಅನಿವಾರ್ಯ ಎಂಬಂತಾಗಿದೆ. ಇಂಥಾ ಸಂದಿಗ್ಧದಲ್ಲಿರೋ ಹೆಣ್ಣುಮಗಳನ್ನು ಯಾಮಾರಿಸಿ, ಆಕೆಯ ವಿರುದ್ಧವೇ ಮಸಲತ್ತು ನಡೆಸೋ ಮೂಲಕ ಧನ್ವೀರ ತನ್ನ ಎದೆಯ ಮೇಲೆ ತಾನೇ ಚಪ್ಪಡಿ ಎಳೆದುಕೊಂಡಿದ್ದಾನೆ. ಹೇಗಿದ್ದರೂ ಮೊದಲ ಹಂತದಲ್ಲಿ ದರ್ಶನ್ಗೆ ಶಿಕ್ಷೆಯಾಗುತ್ತೆ. ಆತ ಸದ್ಯಕ್ಕೆ ಹೊರ ಬರೋದಿಲ್ಲ ಎಂಬ ಅಂದಾಜು ಹಾಕಿರೋ ಧನ್ವೀರ್ಗೆ ದರ್ಶನ್ ಪಾಳೆಯವನ್ನು ಪಟ್ಟಂಪೂರಾ ಎದುರು ಹಾಕಿಕೊಳ್ಳುವ ಧೈರ್ಯವಿಲ್ಲ. ದರ್ಶನ್ ಅಭಿಮಾನಿಗಳಲ್ಲಿಯೇ ಒಂದಷ್ಟು ಮಂದಿ ತನ್ನ ಪರವಾಗಿ ನಿಲ್ಲುವಂತೆ ಮಾಡೋ ಚಾಲಾಕಿತನವೂ ಸದ್ಯ ಧನ್ವೀರ್ ವರ್ತನೆಗಳಲ್ಲಿ ಹಣಕಿ ಹಾಕುತ್ತಿದೆ. ಮೊದಲ ಹಂತದಲ್ಲಿ ದರ್ಶನ್ಗೆ ಕಠಿಣ ಸಜೆಯಾದರೆ, ನಾನು ಎಲ್ಲ ಪ್ರಯತ್ನ ಮಾಡಿದೆ. ಆದರೆ ಆ ಯಮ್ಮನಿಂದಲೇ ಎಲ್ಲ ಹಾಳಾಯ್ತೆಂಬಂತೆ ಪೋಸು ಕೊಟ್ಟು ಪಾರಾಗುವ ಉದ್ದೇಶ ಧನ್ವೀರನಿಗಿದ್ದಂತಿದೆ.

ಒಂದು ವೇಳೆ ಬಹುಮುಖ್ಯವಾದ ವಾಯ್ಸ್ ರೆಕಾರ್ಡ್ ಹೊರಬಂದರೆ, ಈ ಸರ್ಕಾರವೇ ಧನ್ವೀರನಿಗೆ ಲಾಳ ಕಟ್ಟೋದು ಗ್ಯಾರೆಂಟಿ. ಯಾಕೆಂದರೆ, ಈಗಾಗಲೇ ಬಿಡುಗಡೆಯಾಗಿರೋ ವಾಯ್ಸ್ ರೆಕಾರ್ಡುಗಳಲ್ಲಿ ನಾನಾ ರಾಜಕಾರನಿಗಳ ಕಣ್ಣಿಗೆ ಧನ್ವೀರ್ ಕೈ ಹಾಕಿದ್ದಾನೆ. ಓರ್ವ ಪ್ರಭಲ ಉದ್ಯಮಿ, ಭಾವೀ ರಾಜಕಾರಣಿಯ ನಡೆಯ ಮೇಲೆ ಧನ್ವೀರನ ಭವಿಷ್ಯ ನಿಂತಿದೆ. ಒಂದು ವೇಳೆ ಮತ್ತೊಂದಷ್ಟು ವಾಯ್ಸ್ ರೆಕಾರ್ಡುಗಳು ಹೊರ ಬಂದರೆ ಬೊಮ್ನಳ್ಳಿ ಸೀಮೆಯ ಬಿಜೆಪಿ ಮುಖಂಡನ ಮರ್ಮವೂ ಬಯಲಾಗಲಿದೆ. ದುರಂತವೆಂದರೆ, ಅದುವೇ ಪರಪ್ಪನ ಅಗ್ರಹಾರದಲ್ಲಿರೋ ದಾಸನ ಪಾಲಿಗೆ ಮತ್ತೊಂದು ಮಹಾ ಕಂಟಕ ತಂದಿಟ್ಟರೂ ಅಚ್ಚರಿಯೇನಿಲ್ಲ. ಯಾಕೆಂದರೆ; ಈ ಕೇಸಿನ ಟ್ವಿಸ್ಟುಗಳು, ಇದರ ಆಂತರ್ಯದಲ್ಲಿರೋ ಘಾತುಕ ವ್ಯವಹಾರಗಳು ಜಗತ್ತಿನ ಅಷ್ಟೂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಮೀರಿಸುವಂತಿದೆ!

