ಇತ್ತ ದರ್ಶನ್ ಅಭಿಮಾನಿಗಳು ಹೋದಲ್ಲಿ ಬಂದಲ್ಲಿ ಮತಿಗೆಟ್ಟವರಂತೆ ಡಿ ಬಾಸ್ ಅಂತೆಲ್ಲ ಘೋಷಣೆ ಕೂಗುತ್ತಾ ಅವಿವೇಕಿಗಳಂತಾಡುತ್ತಿದ್ದಾರೆ. ಇದೇ ಪಾಳೆಯದ ಒಂದಷ್ಟು ಮಂದಿ ಇನ್ನೇನು ದರ್ಶನ್ ಹೊರಬುರುತ್ತಾರೆ, ಮುಂದಿನ ಸಿಎಂ ಅವರೇ ಅಂತೆಲ್ಲ ತವುಡು ಕುಟ್ಟಿ ಸುಖಿಸುತ್ತಲೂ ಇದ್ದಾರೆ. ಇದೇ ಹೊತ್ತಿನಲ್ಲಿ ಡಿ ಕಂಪೆನಿ ಎಂಬ ದರ್ಶನ್ ಅಭಿಮಾನಿಗಳ ಪೇಜಿಗೆ ಮಾಫಿಯಾ ಸ್ವರೂಪ ಕೊಟ್ಟಿದ್ದ ಪುನೀತ್ ಎಂಬ ಫಟಿಂಗನನ್ನು ಹೆಡೆಮುರಿಕಟ್ಟಿರುವ ತನಿಖಾಧಿಕಾರಿಗಳು ಒಂದಷ್ಟು ರೌಂಡು ಬೂಟುಗಾಲಿನ ಮಾಲೀಶು ನಡೆಸಿದ್ದೂ ಆಗಿದೆ. ಇದೇ ಹೊತ್ತಿನಲ್ಲಿ, ಜೈಲೊಳಗಿರುವ ದರ್ಶನ್ಗೆ ಪ್ರತೀ ಮುಂಜಾವುಗಳೂ ಕೂಡಾ ಆಘಾತಗಳ ಮೂಲಕವೇ ತೆರೆದುಕೊಳ್ಳುತ್ತಿವೆ. ಒಂದರೆಕ್ಷಣದ ಸಿಟ್ಟು, ಠೇಂಕಾರಗಳು ತಂದೊಡ್ಡಿದ ಸ್ಥಿತಿ ಕಂಡು ಕ್ಷಣ ಕ್ಷಣವೂ ದಾಸ ಮರುಗುತ್ತಾ ಕಾಲ ಕಲೆಯಂತಾಗಿದೆ. ಹೀಗೆ ಬಚಾವಾಗುವ ಸಣ್ಣ ಕಿಂಡಿಗಾಗಿ ಕಾತರಿಸುತ್ತಿರೋ ದರ್ಶನ್ಗೆ ಈಗ ಎದುರಾಗಿರೋದು ಅಕ್ಷರಶಃ ಮರ್ಮಾಘಾತ!
ರೇಣುಕಾಸ್ವಾಮಿ ಕೊಲೆಪ್ರಕರಣದಲ್ಲಿ ಎ೧೪ ಆರೋಪಿಯಾಗಿರೋ ಪ್ರದೋಶ್ ಇದೀಗ ಏಕಾಏಕಿ ವರಸೆ ಬದಲಿಸಿದ್ದಾನೆ. ದರ್ಶನ್ ಪಾಳೆಯದಲ್ಲಿ ಬಹುಕಾಲದಿಂದ ಗುರುತಿಸಿಕೊಂಡಿದ್ದ, ಆ ಕಾರಣದಿಂದಲೇ ರೇಣುಕಾಸ್ವಾಮಿಯ ಮರ್ಡರ್ ಕೇಸಿನಲ್ಲಿ ದಾಸನಿಗೆ ಸಾಥ್ ಕೊಟ್ಟಿದ್ದ ಪ್ರದೋಶ್ ಇದೀಗ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾನೆ. ಅಲ್ಲಿಗೆ, ಮುಂದಿನ ವರ್ಷದ ಮೇ ತಿಂಗಳ ಹೊತ್ತಿಗಾದರೂ ಬಿಡುಗಡೆ ಭಾಗ್ಯ ಸಿಕ್ಕೀತೆಂಬ ನಿರೀಕ್ಷೆಯಲ್ಲಿದ್ದ ದರ್ಶನ್ ಕನಸೆಲ್ಲವೂ ಕಮರಿದಂತಾಗಿದೆ. ಯಾಕೆಂದರೆ, ಪ್ರದೋಶ್ ಮಾಫಿ ಸಾಕ್ಷಿಯಾಗಿ ಒಂದಿಡೀ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ, ಹಾಗೂ ಅದರ ಆಚೀಚಿನ ಹಸೀ ಸತ್ಯಗಳನ್ನು ನ್ಯಾಯಾಧೀಶರ ಮುಂದೆ ತೆರೆದಿಡುತ್ತಾನೆ. ಇದರಿಂದ ಒಟ್ಟಾರೆ ಶಿಕ್ಷೆಯಲ್ಲಿ ಪ್ರದೋಶ್ಗೆ ಕೊಂಚ ರಿಯಾಯಿತಿ ಸಿಗುತ್ತೆ. ಆದರೆ, ಈ ಪ್ರಕರಣದಲ್ಲಿ ಎ೧ ಮತ್ತು ಎ೨ ಆರೋಪಿಗಳಾಗಿರುವ ಪವಿತ್ರಾ ಗೌಡ, ದರ್ಶನ್ ಪಾಲಿಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗೋದು ಗ್ಯಾರಂಟಿ.
darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?
ಪ್ರಕರಣವೊಂದು ವಿಚಾರಣೆಯ ಹಂತದಲ್ಲಿರುವಾಗ ಆರೋಪಿ ಸ್ಥಾನದಲ್ಲಿ ಜೈಲು ಪಾಲಾದವನು, ಪ್ರಕರಣದ ಬಗೆಗಿನ ಅಸಲೀ ಸತ್ಯ ಒಪ್ಪಿಕೊಂಡು, ಶಿಕ್ಷೆಯಿಂದ ತುಸು ವಿನಾಯಿತಿ ಪಡುವ ಅವಕಾಶ ಮಾಫಿ ಸಾಕ್ಷಿಗಿದೆ. ಇದೀಗ ಅದನ್ನೇ ಬಳಸಿಕೊಂಡಿರುವ ಪ್ರದೋಶ್, ವಕೀಲರ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸಿನ ವಿಚಾರದ ಅಸಲೀ ಸತ್ಯವನ್ನು ಕಾರಿಕೊಂಡು ಕಾನೂನಿನ ಕುಣಿಕೆಯಿಂದ ಪಾರಾಗುವ ನಿರ್ಧಾರಕ್ಕೆ ಬಂದಿದ್ದಾನೆ. ಒಂದೆಡೆಯಲ್ಲಿ ಇದೊಂದು ಅಚಾನಕ್ಕಾಗಿ ಆದ ಅವಘಡವೆಂದು ಬಿಂಬಿಸಿ, ಪಾರಾಗುವ ದಾರಿಯನ್ನು ದಾಸ ಹುಡುಕುತ್ತಿರುವಾಗಲೇ, ಪ್ರದೋಶ್ನ ಹೊಸಾ ವರಸೆ ದಾಸನನ್ನು ಸಹಜವಾಗಿಯೇ ಕಂಗಾಲು ಮಾಡಿ ಹಾಕಿದೆ. ಒಂದು ವೇಳೆ ಮಾಫಿ ಸಾಕ್ಷಿಯಾಗಿ ಪ್ರದೋಶ್ ಎಲ್ಲ ಚಿತ್ರಣವನ್ನೂ ತೆರೆದಿಟ್ಟರೆ, ಅಲ್ಲಿಗೆ ಸುಬ್ಬಾಸುಬ್ಬಿಗೆ ಗನಗಂಭೀರವಾದ ಶಿಕ್ಷೆಯಾಗುವ ಸಾಧ್ಯತೆಗಳೇ ಢಾಳಾಗಿ ಗೋಚರಿಸುತ್ತಿವೆ.
ಇತ್ತ ಇತ್ತೀಚೆಗಷ್ಟೇ ಒಂದು ಹಂತದ ಕಾನೂನು ಸಮರದ ಕಾರಣದಿಂದಾಗಿ ಜೀವಾವಧಿ ಶಿಕ್ಷೆಯಿಂದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಪಾರಾಗಿದ್ದಾನೆ. ಈ ಕೇಸಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದವನು ಉತ್ತರ ಕರ್ನಾಟಕ ಸೀಮೆಯ ದಂಧೆಕೋರ ಬಸವರಾಜ ಮುತ್ತಗಿ ಅಲಿಯಾಸ್ ಕರಾಟೆ ಬಸವ. ನಾನಾ ಅವತಾರವೆತ್ತಿ, ಮುತ್ತಪ್ಪ ರೈ ಸಖ್ಯ ಬೆಳೆಸಿಕೊಂಡು, ಆತನ ಜಯಕರ್ನಾಟಕ ಸಂಘಟನೆಯ ಹೆಸರಲ್ಲಿ ಮಜಬೂತಾಗಿ ಕೊಬ್ಬಿದ್ದವನು ಕರಾಟೆ ಬಸವ. ಇಂಥವನು ಮುತ್ತಪ್ಪ ರೈ ಹೊರಗಟ್ಟುತ್ತಲೇ ವಿನಯ್ ಕುಲಕರ್ಣಿಯ ಪಟಾಲಮ್ಮು ಸೇರಿಕೊಂಡಿದ್ದ. ಆ ಬಳಿಕ ವಿನಯ್ ಇಷಾರೆಯ ಮೇರೆಗೆ ರಿಯಲ್ ಎಸ್ಟೇಟ್ ದಂಧೆಕೋರ ಕಂ ಬಿಜೆಪಿ ಮುಖಂಡ ಯೋಗೀಶ್ ಗೌಡನನ್ನು ತಾನೇ ಮುಂದೆ ನಿಂತು ಕೊಲ್ಲಿಸಿದ್ದ. ಖುದ್ದು ತಾನೇ ಬೆಂಗಳೂರಿನಿಂದ ಪಂಟರುಗಳನ್ನು ಕರೆಸಿ ಕೊಂದು, ವಿನಯ್ ಜೊತೆ ಜೈಲು ಪಾಲಾಗಿದ್ದ ಮುತ್ತಗಿ, ಜೈಲೊಳಗೇ ವರಸೆ ಬದಲಿಸಿ ಮಾಫಿ ಸಾಕ್ಷಿಯಾಗಿ ಬಿಟ್ಟಿದ್ದ.

ಹಾಗೆ ಮಾಫಿ ಸಾಕ್ಷಿಯಾಗಿ, ಈ ಪ್ರಕರಣದ ಹಿಂದಿರುವ ವಿನಯ್ ಕುಲಕರ್ಣಿಯ ಮಹತ್ತರವಾದ ಪಾತ್ರದ ಬಗ್ಗೆ ಸತ್ಯ ಒದರಿದ್ದ. ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾದದ್ದು ಈ ಕಾರಣದಿಂದಲೇ ಎಂಬುದಿಲ್ಲಿ ಉಲ್ಲೇಖಿಸಲೇ ಬೇಕಾದ ವಿಚಾರ. ಇದೀಗ ಈ ಕೇಸಿನಿಂದ ವಿನಯ್ ಒಂದು ಮಟ್ಟಕ್ಕೆ ನುಣುಚಿಕೊಂಡಿದ್ದೇ, ದರ್ಶನ್ ಅಭಿಮಾನಿಗಳು ಬಾಸ್ ಬರ್ತಾರೆ ಅಂತೆಲ್ಲ ಕಿರುಲಾಂಭಿಸಿದ್ದರು. ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆವುಟ ಶುರುವಿಟ್ಟುಕೊಂಡಿದ್ದ ಈ ಎಳಸು ಕುನ್ನಿಗಳಿಗೆ, ರೇಣುಕಾಸ್ವಾಮಿ ಹಾಗೂ ಯೋಗೀಶ್ ಗೌಡ ಕೊಲೆ ಕೇಸಿನ ನಡುವೆ ಇರುವ ಅಜಗಜಾಂತರ ವ್ಯತ್ಯಾಸದ ಅರಿವಿಲ್ಲ. ಆದರೂ ಒಂದು ಹಂತದಲ್ಲಿ ದರ್ಶನ್ ಬಚಾವಾಗಬಹುದಾದ ಅವಕಾಶಗಳಿದ್ದವೋ ಏನೋ… ಆದರೆ, ಒಂದು ಕಾಲದಲ್ಲಿ ಬಾಸು ಹೆಗಲ ಮೇಲೆ ಕೈ ಹಾಕೋದೇ ಮಹಾ ಪ್ರಸಾದ ಅಂದುಕೊಂಡಿದ್ದ ಪ್ರದೋಶ್ ಏಕಾಏಕಿ ಉಲ್ಟಾ ಹೊಡೆದು ಬಿಟ್ಟಿದ್ದಾನೆ!
ಈ ಪಲ್ಲಟ ದಾಸನ ಬುಡಕ್ಕೆ ಬಿಸಿ ನೀರು ಕಾಯಿಸೋದರಲ್ಲಿ ಯಾವ ಸಂದೇಹವೂ ಉಳಿದಿಲ್ಲ. ಅಷ್ಟಕ್ಕೂ ಈ ಪ್ರಕರಣ ನಡೆದಾದ ಮೇಲೆ ದರ್ಶನ್ ಜೊತೆ ಜೈಲು ಸೇರಿರುವ ಪ್ರತಿಯೊಬ್ಬರಿಗೂ ತಾವೆಂತಾ ಮಣ್ಣು ತಿನ್ನೋ ಕೆಲಸ ಮಾಡಿದೆವೆಂಬ ಅರಿವಾಗಿದೆ. ಹೇಳಿಕೇಳಿ ಡಿ ಬಾಸ್ ಅನ್ನು ಬಂಧಿಸಿಡುವ ಜೈಲೇ ಸೃಷ್ಟಿಯಾಗಿಲ್ಲ ಎಂಬಂಥಾ ಹಡಬೆ ಭ್ರಮೆಯನ್ನು ಮೆದುಳಿಗೆ ತುಂಬಿಸಿಕೊಂಡವರ ಕೊಂಪೆಯಿಂದಲೇ ಬಂದಿರುವಾತ ಪ್ರದೋಶ್. ದಾಸನ ಖಾಸಗಿ ಪಾರ್ಟಿಗಳಲ್ಲಿ ಬಾಗಿಯಾಗೋ ಅವಕಾಶ ಸಿಗೋದೇ ಪರಮ ಪುಣ್ಯ ಅಂದುಕೊಂಡಿದ್ದ ಪ್ರದೋಶ್, ಆ ದಿನ ಸ್ಟೋನಿ ಬ್ರೂಕ್ಸ್ ರೆಸ್ಟೋರಾಂಟಿಂದ ಅಚಾನಕ್ಕಾಗಿ ದರ್ಶನ್ ಹಿಂದೆ ಹೋಗಿದ್ದ. ಪಟ್ಟಣಗೆರೆ ಶೆಡ್ಡಿನಲ್ಲಿ ನಡೆದ ರಕ್ಕಸ ಕೃತ್ಯದ ನಂತರ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಖುದ್ದಾಗಿ ಮುಂದೆ ನಿಂತು ಮಾಡಿದ್ದ.
ಸದರಿ ಕೃತ್ಯ ನಡೆದಾಗ ದರ್ಶನ್ ರೇಣುಕಾಸ್ವಾಮಿಗೆ ಎರಡೇಟು ಹೊಡೆದು ಅಲ್ಲಿಂದ ತೆರಳಿದ್ದರು. ಆ ನಂತರದ ಕೃತ್ಯಗಳೆಲ್ಲ ಮಿಕ್ಕವರ ನೆರಳಲ್ಲಿಯೇ ನಡೆದಿತ್ತು. ಅದರಲ್ಲಿ ದರ್ಶನ್ ಪಾತ್ರವೇನಿಲ್ಲ ಅಂತೆಲ್ಲ ದರ್ಶನ್ ಪಾಳೆಯದ ಮಂದಿ ಹಂತ ಹಂತವಾಗಿ ಹೇಳಿಕೊಂಡು ಬಂದಿದ್ದಾರೆ. ಒಂದು ವೇಳೆ ಅದಕ್ಕೆ ವ್ಯತಿರಿಕ್ತವಾದ ಹೇಳಿಕೆಯನ್ನು ಪ್ರದೋಶ್ ಕೊಟ್ಟರೆ, ನ್ಯಾಯಾಲಯ ಅದನ್ನು ಪರಿಗಣಿಸಿದರೆ, ದರ್ಶನ್ ಮತ್ತು ಪವಿತ್ರಾ ಗೌಡಳ ನಸೀಬು ಸಂಪೂರ್ಣವಾಗಿ ಖರಾಬಾಗಲಿದೆ. ದುರಂತವೆಂದರೆ, ಇಂಥಾ ಡೇಂಜರ್ ಜೋನಿನಲ್ಲಿ ದರ್ಶನ್ ನಿಂತಿರುವಾಗಲೂ ಆತನ ಕೆಲ ಅಭಿಮಾನಿಗ್ಳು ಮತ್ತಷ್ಟು ಡ್ಯಾಮೇಜು ಮಾಡುವಂಥಾ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದರ್ಶನ್ಗೆ ಹೊರಗಿರುವಾಗಲೇ ತನ್ನ ಅಭಿಮಾನಿಗಳ ದುಂಡಾವರ್ತನೆಗಳಿಗೆ ಬ್ರೇಕ್ ಹಾಕೋ ಯೋಗ್ಯತೆ ಇರಲಿಲ್ಲ. ಒಂದೆಡೆಯಲ್ಲಿ ಮಾಫಿ ಸಾಕ್ಷಿ ಮಣ್ಣುಮುಕ್ಕಿಸಲು ತಯಾರಾಗುತ್ತಿರುವಾಗಲೇ, ಅಭಿಮಾನಿ ಪಡೆ ಅಂಧಾಭಿಮಾನದ ಭರಾಟೆಯಲ್ಲಿ ರಾಡಿಯೆಬ್ಬಿಸಲು ತಯಾರಾಗಿ ನಿಂತಿದೆ. ಇತ್ತ ಸದಾ ದರ್ಶನ್ ಪರವಾಗಿ ಅಡ್ಯಾಡುತ್ತಿದ್ದ ಸ್ಯಾಂಡಲ್ವುಡ್ಡಿನ ವಾಮನ ಕೋಮಣ ಕೊಡವಿಕೊಂಡು ದೂರಾಗಿದ್ದಾನೆ. ಹೀಗಿರುವಾಗ ದಾಸನನ್ನು ಕಾಪಾಡೋದ್ಯಾರು?
keywords: renukaswamy murder case, darshan, pavithra gowda, pradosh

