ಸಿದ್ದು ಪೂಣ್ಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರುವ ಬ್ರಹ್ಮಕಮಲ ಚಿತ್ರದ ಟ್ರೈಲರ್ ಬೆಗ್ಗೆ ಇದೀಗ ಸಿನಿಮಾಸಕ್ತರ ನಡುವೆ ಚರ್ಚೆ ಹುರಿಗೊಂಡಿದೆ. ಅದಕ್ಕೆ ಕಾರಣವಾಗಿರುವುದು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಬ್ರಹ್ಮಕಮಲ ಚಿತ್ರದ ಟ್ರೈಲರ್. ಹೆಣ್ಣೊಬ್ಬಳ ಆಂತರ್ಯದ ಸುತ್ತ ಹಬ್ಬಿಕೊಂಡಿರೋ ಸೂಈಕ್ಷ್ಮ ಕಥನದ ಸುಳಿವಿನ ಮೂಲಕ ಬ್ರಹ್ಮಕಮಲ ನೋಡುಗರೆಲ್ಲರ ಮನಸಿನಲ್ಲಿಯೂ ತನ್ನದೇ ಆದ ರೀತಿಯಲ್ಲಿ ಅರಳಿ ನಿಂತಿದೆ; ಅವರವರ ಭಾವ, ನೋಟಕ್ಕೆ ತಕ್ಕುದಾಗಿ ಕಂಪು ಬೀರಿದೆ. ನಿಖರವಾಗಿ ಹಢೇಳಬೇಕೆಂದರೆ, ಯಾವ ಹೈಪುಗಳೂ ಇಲ್ಲದೆ ತಂತಾನೇ ಪ್ರೇಕ್ಷಕರನ್ನು ಆವರಿಸಿಕೊಂಡ ಅಪರೂಪದ ಟ್ರೈಲರ್ ಆಗಿಯೂ ಗಮನ ಸೆಳೆದಿದೆ.
ಈ ಹಿಂದೆ ದಾರಿ ಯಾವುದಯ್ಯಾ ವೈಕುಂಟಕೆ ಎಂಬ ಸಿನಿಮಾ ಮೂಲಕ ನಿರ್ದೇಶಕರಾಗಿ ಗಮನ ಸೆಳೆದಿದ್ದವರು ಸಿದ್ದು ಪೂರ್ಣಚಂದ್ರ. ಈ ಮೂಲಕವೇ ತಾನೋರ್ವ ಭಿನ್ನ ಬಗೆಯ ನಿರ್ದೇಶಕನೆಂಬ ಸುಳಿವು ದಾಟಿಸುತ್ತಲೇ, ಪ್ರಯೋಗಾತ್ಮಕ ಹಾದಿಯಲ್ಲಿಯೇ ನೋಡುಗರ ಮನಮುಟ್ಟಿದ್ದರು. ಸಿನಿಮಾ ರಂಗದ ಜೀವಂತಿಕೆ ಯಾವ ನಡೆಗಳಲ್ಲಿ ಅಡಗಿದೆ ಎಂಬಂಥಾ ಸ್ಪಷ್ಟ ಅರಿವು ಹೊಂದಿರೋ ಸಿದ್ದು ಪೂರ್ಣಚಂದ್ರ, ತಮ್ಮಿಷ್ಟದ ಥವೂ ಕೂಡಾ ಸಿನಿಮಾ ರಂಗದ ಜೀವಂತಿಕೆಯ ಮೂಲಧಾತು ಎಂಬುದನ್ನು ಅರಿವಾಗಿಸಿಕೊಂಡಿದ್ದಾರೆ. ಈ ಕಾರಣದಿಂದಲೇ, ಎಲ್ಲ ಸವಾಲುಗಳನ್ನು ಮೊದಲೇ ಮನಗಂಡು, ಈ ಸಮಾಜದ ಕುಟುಂಬ ವ್ಯವಸ್ಥೆಯಲ್ಲಿ ಹುದುಗಿ ಹೋಗಿರುವ ಹೆಣ್ಣುಮಕ್ಕಳ ಒಡಲ ಕೂಗಿನ ಕಥನಕ್ಕೆ ದೃಶ್ಯ ರೂಪ ಕೊಟ್ಟಿದ್ದಾರೆ.
ಗಮನಿಸಬೇಕಾದ ಅಂಶವೆಂದರೆ, ಈ ಪ್ರಯತ್ನಕ್ಕೆ ಆರಂಭಿಕವಾಗಿಯೇ ಪ್ರೇಕ್ಷಕರ ಕಡೆಯಿಂದ ಭರಪೂರ ಪ್ರತಿಕ್ರಿಯೆಗಳು ಸಿಗುತ್ತಿವೆ. ಟ್ರೈಲರ್ ಮೂಡಿ ಬಂದಿರುವ ರೀತಿಯಿಮದಲೇ ಬ್ರಹ್ಮಕಮಲ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ. ಹೆಣ್ಣು ಸಂಸಾರದ ಕಣ್ಣು ಎಂಬುದು ನಮ್ಮ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ನಾಣ್ನುಡಿ. ಆದರೆ, ಆ ಕಣ್ಣುಗಳಲ್ಲಿ ಜಿನುಗುವ ನಾನಾ ಮರ್ಮರಗಳನ್ನು ಗ್ರಹಿಸುವ ಸೂಕ್ಷ್ಮತೆ ಮಾತ್ರ ನಮ್ಮಲ್ಲಿನ ಕೌಟುಂಬಿಕ ವ್ಯವಸ್ಥೆಯಲ್ಲಿಲ್ಲ. ಅಂಥಾ ವಾತಾವರಣದಲ್ಲಿ ಒಂದು ರಾತ್ರಿಯಲ್ಲಿ ಘಟಿಸುವ ಹೆಣ್ಣೊಬ್ಬಳ ಕಥನ ಬ್ರಹ್ಮ ಕಮಲದ ರೂಪದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ.
ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬ್ರಹ್ಮ ಕಮಲಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಮೂರು ಮೂರು ಪ್ರದರ್ಶನಗಳನ್ನು ಕಂಡಿದೆ. ಇಂಥಾ ಚಿತ್ರವೀಗ ಟ್ರೈಲರ್ ಮೂಲಕ ಸದ್ದು ಮಾಡಲಾರಂಭಿಸಿದೆ. ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿರುವ ಈ ಸಿನಿಮಾ ಪೂರ್ಣ ಚಂದ್ರ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಅದ್ವಿತಿ ಶೆಟ್ಟಿ, ಋತು ಚೈತ್ರ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾಹುತ್, ಪ್ರಮೀಳಾ ಸುಬ್ರಮಣ್ಯ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಲೋಕೇಂದ್ರ ಸೂರ್ಯ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ, ದೀಪು ಸಂಕಲನ, ನಾಗರತ್ನ ಕೆ.ಹೆಚ್ ನಿರ್ಮಾಣ ನಿರ್ವಹಣೆಯಲ್ಲಿ ಬ್ರಹ್ಮಕಮಲ ರೂಪುಗೊಂಡಿದೆ. ಪುಟ್ಟರಾಜು ಮತ್ತು ಪ್ರಮೀಳಾ ಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಇಷ್ಟರಲ್ಲಿಯೇ ಬ್ರಹ್ಮಕಮಲ ಪ್ರೇಕ್ಷಕರ ಮುಂದೆ ಅರಳಿಕೊಳ್ಳುವ ದಿನಾಂಕ ನಿಗಧಿಯಾಗಲಿದೆ!
keywords: brahmakamala trailer, siddu poornachandra, adhvithi shetty, sandalwood, kfi

