ಬಹುಕಾಲದ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಾಗಿ ನಟಿಸಿರುವ ಚಿತ್ರವೊಂದು ಅತ್ಯಂತ ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡು, ತೆರೆಗಾಣಲು ಸಜ್ಜಾಗಿದೆ. ಗೀತ ಗೋವಿಂದಂ ಎಂಬ ಚಿತ್ರದ ಮೂಲಕವೇ ರಶ್ಮಿಕಾ ಟಾಲಿವುಡ್ಡಿಗೆ ಎಂಟ್ರಿ ಕೊಟ್ಟು, ದೊಡ್ಡ ಮಟ್ಟದ ಗೆಲುವು ದಕ್ಕಿಸಿಕೊಂಡಿದ್ದೀಗ ಇತಿಹಾಸ. ಆ ಸಿನಿಮಾ ಮೂಲಕ ಜೋಡಿಯಾಗಿ ಕ್ರೇಜ್ ಸೃಷ್ಟಿಸಿದ್ದ ರಶ್ಮಿಕಾ ಮತ್ತು ದೇವರಕೊಂಡ ಇದೀಗ ನಿಜಜೀವನದಲ್ಲಿಯೂ ಜೊತೆಯಾಗಿದ್ದಾರೆ. ಆದರೆ, ವೃತ್ತಿ ಬದುಕಿನಲ್ಲಿ ಇಬ್ಬರೂ ಬೇರೆ ಬೇರೆ ಪಥಗಳಲ್ಲಿ ಹೆಜ್ಜೆಯಿಟ್ಟಿದ್ದರಿಂದಾಗಿ ಒಂದಾಗಿ ನಟಿಸದೆ ಬಹಳಷು ವರ್ಷವೇ ಆಗಿತ್ತು. ಈ ಜೋಡಿಯನ್ನು ಒಟ್ಟಿಗೆ ನೋಡಬೇಕೆಂಬ ಅಭಿಮಾನಿಗಳ ಆಕಾಂಕ್ಷೆ ರಣಬಾಲಿ ಚಿತ್ರದ ಮೂಲಕ ಕೈಗೂಡಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ರಣಬಾಲಿ ಅಕ್ಟೋಬರ್ ತಿಂಗಳು ಪ್ರೇಕ್ಷಕರ ಮುಂದೆ ಬರಲಿದೆ.

ರಶ್ಮಿಕಾ ಮಂದಣ್ಣ ಮದುವೆಗೆ ಮುಂಚೆಯೇ ಒಂದಷ್ಟು ಪ್ಯಾನಿಂಡಿಯಾ ಮಟ್ಟದ ಸಿನಿಮಾಗಳನ್ನು ಒಪ್ಪಿಕೊಂಡಿದ್ದಳು. ರಶ್ಮಿಕಾ ಕೈಲಿರೋ ಅಷ್ಟೂ ಚಿತ್ರಗಳಿಗಿಂತಲೂ ಮೊದಲು ರಣಬಾಲಿ ಚಿತ್ರ ಚಾಲೂ ಆಗುತ್ತದೆ ಎಂಬಂತೆ ಸುದ್ದಿಗಳು ಹಬ್ಬಿಕೊಂಡಿದ್ದವು. ಆದರೆ, ಮದುವೆ ನಂತರದಲ್ಲಿ ರಶ್ಮಿಕಾ ತಿಂಗಳುಗಟ್ಟಲೆ ಚಿತ್ರೀಕರಣದತ್ತ ಮುಖ ಹಾಕೋದು ಡೌಟು ಅಂತಲೇ ಬಹುತೇಕರು ಅಂದುಕೊಂಡಿದ್ದರು. ಅಚ್ಚರಿಯೆಂಬಂತೆ, ರಶ್ಮಿಕಾ ಬಹುಬೇಗನೆ ಚಿತ್ರೀಕರಣದ ಅಖಾಡಕ್ಕಿಳಿದು ಚಿತ್ರೀಕರಣ ಮುಗಿಸಿದ್ದಾಗಿತ್ತು. ಐಸಾ ಚಿತ್ರದ ಒಟ್ಟೊಟ್ಟಿಗೇ ರಣಬಾಲಿ ಕೂಡಾ ಅಂತಿಮ ಘಟ್ಟ ತಲುಪಿಕೊಂಡಿದೆ.


