ಅಧಿಪತ್ರ ಎಂಬ ಮೊದಲ ಸಿನಿಮಾ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಅವರೀಗ ಮ್ಯಾರೇಜ್ ಪಾರ್ಟಿ ಎಂಬ ಪಕ್ಕಾ ಮನೋರಜನಾತ್ಮಕ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಕರಾವಳಿ ಬಾಗದ ಮಜವಾದ ಕಥೆಯನ್ನೊಳಗೊಂಡಿರುವ ಮ್ಯಾರೇಜ್ ಪಾರ್ಟಿಯ ಒಂದು ಫಸ್ಟ್ ಲುಕ್ ಪೋಸ್ಟರ್ ಮಾತ್ರವೇ ಕೆಲ ದಿನಗಳ ಹಿಂದೆ ಬಿಡುಗಡೆಗೊಂಡಿತ್ತು. ಆ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚಿತ್ರದ ಬಿಡುಗಡೆ ದಿನಾಂಕವೀಗ ಘೋಶಣೆಯಾಗಿದೆ. ಇದೇ ಡಿಸೆಂಬರ್ ೪ರಂದು ಮ್ಯಾರೇಜ್ ಪಾರ್ಟಿ ರಾಜ್ಯಾದ್ಯಂತ ತೆರೆಗಾಣಲಿದೆ.
ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿದ್ದ ಅಧಿಪತ್ರ ಚಿತ್ರ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆ ಸಿನಿಮಾ ಮೂಲಕ ಗಹನವಾದೊಂದು ಕಥೆಗೆ ಚಯನ್ ಶೆಟ್ಟಿ ದೃಶ್ಯರೂಪ ನೀಡಿ, ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದರು. ಆದರೆ, ಈ ಬಾರಿ ಮ್ಯಾರೇಜ್ ಪಾರ್ಟಿ ಮೂಲಕ ಮತ್ತೊಂದು ಮಜಲಿನ ಕಥನದೊಂದಿಗೆ ಮೋಡಿಒ ಮಾಡುವ ಸನ್ನಾಹದಲ್ಲಿದ್ದಾರೆ. ಘಟಾನುಘಟಿ ಕಲಾವಿದರೇ ಈ ಸಿನಿಮಾದಲ್ಲಿ ಥರ ಥರದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಗಟ್ಟಿ ಕಥೆ ಮತ್ತು ಹಾಸ್ಯ ಮಿಳಿತಗೊಂಡಂಥಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆದ್ದ ಅದೆಷ್ಟೋ ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿದ್ದಾವೆ. ಆ ಸಾಲಿಗೆ ಮ್ಯಾರೇಜ್ ಪಾರ್ಟಿ ಕೂಡಾ ಸೇರ್ಪಡೆಗೊಳ್ಳಬಹುದಾ ಎಂಬಂಥಾ ಕೌತುಕ ಸಿನಿಮಾಸಕ್ತರಲ್ಲಿದೆ.
ಸಾಮಾನ್ಯವಾಗಿ, ಕಡಲ ತಡಿಯ ಕಥೆ ಎಂದಾಕ್ಷಣವೇ ಇತ್ತೀಚಿನ ದಿನಗಳಲ್ಲಿ ಎಲ್ಲರ ಚಿತ್ತ ಭೂತಾರಾಧನೆಯ ಸುತ್ತಾ ಕೀಲಿಸಿಕೊಳ್ಳೋದಿದೆ. ಸದ್ಯದ ಮಟ್ಟಿಗೆ ಅಂಥಾದ್ದೊಂದು ಟ್ರೆಂಡ್ ಚಾಲ್ತಿಯಲ್ಲಿದೆ. ಆದರೆ, ಮ್ಯಾರೇಜ್ ಪಾರ್ಟಿಯಲ್ಲಿ ಅಂಥಾ ಸಿದ್ಧ ಸೂತ್ರವನ್ನು ಮೀರಿದ ಕಥೆಯಿದೆ ಎಂಬ ಸುಳಿವನ್ನಷ್ಟೇ ಚಿತ್ರತಂಡ ಜಾಹೀರು ಮಾಡಿದೆ. ಅಂದುಕೊಂಡಂತೆಯೇ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಮ್ಯಾರೇಜ್ ಪಾರ್ಟಿ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಮೊದಲ ಹಾಡನ್ನು ಬಿಡುಯಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸುತ್ತಿದೆ.
ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ಅವರು ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆಯಂತೆ.

