ಚಯನ್ ಶೆಟ್ಟಿ ನಿರ್ದೇಶನದ ಮ್ಯಾರೇಜ್ ಪಾರ್ಟಿ ಚಿತ್ರದ ಗಲಾಟೆದ ಹಾಡಿನ ಗೌಜು ಸ್ಯಾಂಡಲ್ವುಡ್ಡಿನ ತುಂಬ ಹಬ್ಬಿಕೊಂಡಿದೆ. ಕರಾವಳಿ ಕಿನಾರೆಯ ಲೊಕೇಷನ್ನುಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡು, ಇದೀಗ ಬಿಡುಗಡೆಗೆ ಅಣಿಗೊಳ್ಳುತ್ತಿರುವ ಮ್ಯಾರೇಜ್ ಪಾರ್ಟಿ ಡಿಸೆಂಬರ್ ೪ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈ ಗಲಾಟೆ ವೀಡಿಯೋ ಸಾಂಗ್ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ಒಂದಿಡೀ ಚಿತ್ರತಂಡ ಪಾಲ್ಗೊಂಡು, ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ. ಇದುವರೆಗೂ ಇದು ಯಾವ ಬಗೆಯ ಚಿತ್ರ ಅಂತೊಂದು ಕೌತುಕವಿತ್ತು. ಸದರಿ ಹಾಡಿನ ಮೂಲಕ ಮ್ಯಾರೇಜ್ ಪಾರ್ಟಿ ಅದೆಂಥಾ ಗೌಜು, ಗಮ್ಮತ್ತಿನೊಂದಿಗೆ ಮೂಡಿ ಬಂದಿದೆ ಎಂಬ ಸುಳಿವೊಂದು ಪ್ರೇಕ್ಷಕರಿಗೆ ಸಿಕ್ಕಂತಾಗಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಚಯನ್ ಶೆಟ್ಟಿ, ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು, ಪುಷ್ಪರಾಜ್ ಬೋಳಾರ್, ನಿರ್ಮಾಪಕ ಸಂತೋಷ್.ವಿ, ಕೋರಿಯೋಗ್ರಾಫರ್ ಮುರುಗ, ಮೈಮ್ ರಾಮದಾಸ್, ಭೀಮ್ ರಾವ್ ವಾಸ್ಟರ್, ಜ್ಯೋತಿ ಶೆಟ್ಟಿ, ನಮಿತಾ ಕಿರಣ್, ಅನನ್ಯಾ, ರಕ್ಷಿತಾ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ನಿರ್ದೇಶಕ ಚಯನ್ ಶೆಟ್ಟಿ ನಿರ್ಮಾಪಕರು ಈ ಹಾದಿಯಲ್ಲಿ ಕೊಟ್ಟ ತುಂಬು ಸಹಕಾರವನ್ನು ಸ್ಮರಿಸುತ್ತಲೇ, `ಇದು ಮದುವೆಯೊಂದರ ಸುತ್ತ ಚಲಿಸೋ ಕಥೆ ಹೊಂದಿರುವ ಚಿತ್ರವಾದರೂ ಹಾರರ್ ಅಂಶಗಳೂ ಇದ್ದಾವೆ’ ಎಂಬ ಸುಳಿವು ಕೊಟ್ಟಿದ್ದಾರೆ. ಇದರ ಜೊತೆಗೇ ಮದುವೆ, ಗಮ್ಮತ್ತಿಮನಾಚೆಗೆ ಬೇರೆ ಥರದ ಗಟ್ಟಿ ಕಥನವೂ ಇಲ್ಲಿದೆ ಎಂಬ ವಿಚಾರವನ್ನೂ ಚಯನ್ ಶೆಟ್ಟಿ ಜಾಹೀರು ಮಾಡಿದ್ದಾರೆ.
ಚೆಂದದ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಬಹುಕಾಲದ ಕನಸನ್ನು ಸಂತೋಷ್ ವಿ ಈ ಚಿತ್ರದ ಮೂಲಕ ನನಸಾಗಿಸಿಕೊಂಡಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಸಿನಿಮಾಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುವ ಚಯನ್ ಶೆಟ್ಟಿಯವರಂಥಾ ನಿರ್ದೇಶಕ ಸಿಕ್ಕಿರೋದು ಭಾಗ್ಯವೆಂದಿರುವ ಸಂತೋಷ್ ವಿ, ಎಲ್ಲ ಕಲಾವಿದರು ಮತ್ತು ತಂತ್ರಜ್ಞರ ಸಹಕಾರದಿಂದ ಮ್ಯಾರೇಜ್ ಪಾರ್ಟಿ ಅದ್ಭುತವಾಗಿ ಮೂಡಿ ಬಂದಿದೆ ಎಂದಿದ್ದಾರೆ. ಪ್ರೇಕ್ಷಕರೆಲ್ಲ ನೋಡಿ ಹರಸುವ ಮೂಲಕ ಯಶಸ್ವಿಗೊಳಿಸಿ ಕೊಡಬೇಕೆಂದು ಅರಿಕೆ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ, ಮೊದಲ ಹೆಜ್ಜೆಯಲ್ಲಿಯೇ ಚೆಂದದ ಚಿತ್ರವೊಂದನ್ನು ನಿರ್ಮಾಣ ಮಾಡಿರುವ ತೃತ್ಪ ಭಾವ ಸಂತೋಷ್ರ ಮಾತುಗಳಲ್ಲಿ ಹಣಕಿ ಹಾಕುವಂತಿತ್ತು.
ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಮುಂತಾದ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ವಿನೀತ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರವೀಗ ಸಂಪೂರ್ಣವಾಗಿ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ತೆರೆಗಾಣಲು ಸನ್ನದ್ಧವಾಗಿದೆ. ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ವಾಸ್ಟರ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆ.

