ಬಿಗ್ಬಾಸ್, ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸಿರುವ ಚಿತ್ರ `ರುಕ್ಮಿಣಿ ರಾಧಾಕೃಷ್ಣ’. ಈ ಮೂಲಕ ಮತ್ತೊಂದು ವಿಭಿನ್ನವಾದ ಪ್ರೇಮ ಕಥಾನಕವೊಂದು ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಟೈಟಲ್ ಮತ್ತು ಪೋಸ್ಟರುಗಳ ಮೂಲಕವೇ ಆರಂಭಿಕವಾಗಿ ತಾನೇ ತಾನಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಈ ಸಿನಿಮಾದ ಚೆಂದದ ವೀಡಿಯೋ ಹಾಡೊಂದು ಇದೀಗ ಬಿಡುಗಡೆಗೊಂಡಿದೆ. ಗಾಢ ಪ್ರೇಮದ ಎಲ್ಲ ಭಾವಗಳನ್ನೂ ಬಚ್ಚಿಟ್ಟುಕೊಂಡಂತಿರೋ ಈ ಹಾಡೀಗ ಅತ್ಯಂತ ವೇಗವಾಗಿ ಕೇಳುಗರನ್ನು ಆವರಿಸಿಕೊಳ್ಳುತ್ತಿದೆ.
ರಾಧೆಯ್ಕುಮ್ ಕಣ್ಣನುಕ್ಕುಮ್ ಶೀರ್ಷಿಕೆಯ ಈ ವೀಡಿಯೋ ಹಾಡನ್ನು ಲಹರಿ ವೇಲು ಬಿಡುಗಡೆಗೊಳಿಸಿದ್ದಾರೆ. ಸುನಾದ್ ಗೌತಮ್ ಓರ್ವ ಪ್ರತಿಭಾನ್ವಿಕ ಸಂಗೀತ ನಿರ್ದೇಶಕ. ಅವರು ಈ ಸಿನಿಮಾದ ಅಷ್ಟೂ ಹಾಡುಗಳನ್ನು ಅದ್ಭುತವಾಗಿ ರೂಪಿಸಿದ್ದಾರೆ. ಆ ಕಾರಣದಿಂದಲೇ ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಖರೀದಿಸಿರೋದಾಗಿ ಹೇಳಿರುವ ವೇಲು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲ್ಲಿ ಲಹರಿ ವೇಲು, ಕೆ ಕಲ್ಯಾಣ್, ರಜತ್, ಭರತ್ ಕುಮಾರ್, ಮೋಕ್ಷಿತಾ ಪೈ, ರಿಯಾ ಸಚಿದೇವ್, ಸುನಾದ್ ಗೌತಮ್, ನಿರ್ದೇಶಕ ಪ್ರಾಣ್ ಸುವರ್ಣ, ಉಮೇಶ್ ಕುಮಾರ್ ಮುಂತಾದವರು ಹಾಜರಿದ್ದರು.
ಈ ಹಿಂದೆ ಮೆಜೆಸ್ಟಿಕ್ ೨ ಚಿತ್ರದ ಮೂಲಕ ನ ಆಯಕ ನಟನಾಗಿ ಗಮನ ಸೆಳೆದಿದ್ದ ಭರತ್ ಕುಮಾರ್, ತಮ್ಮ ಚಿತ್ರದ ಆಡಿಯೋ ಹಕ್ಕುಗಳನ್ನು ಬಲು ಖುಷಿಯಿಂದ ದೊಡ್ಡ ಮೊತ್ತಕ್ಕೆ ಲಹರಿ ಸಂಸ್ಥೆ ಖರೀದಿಸಿದ್ದರ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಉಇದೇ ಸಂದರ್ಭದಲ್ಲಿ, ಸದರಿ ಹಾಡಿನಲ್ಲಿ ಹಾಗೂ ಒಟ್ಟಾರೆ ಸಿನಿಮಾದಲ್ಲಿ ಕುಂಭಕೋಣಂನ ಪರಿಸರವನ್ನು ತೋರಿಸಿರೋದರಿಂದ ಇದನ್ನೊಂದು ಟ್ರೇಡಿಷನ್ ಚಿತ್ರ ಅಂದುಕೊಳ್ಳಬೇಕಿಲ್ಲ. ಇದು ಈಗಿನ ಯುವ ಸಮುದಾಯಕ್ಕೆ ನೇರವಾಗಿ ತಾಕುವಂಥಾ ಕಥೆಯನ್ನೊಳಗೊಂಡಿರೋ ಸಿನಿಮಾ ಎಂಬ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದೇ ಹೊತ್ತಿನಲ್ಲಿ ಕಥೆಯ ಬಗ್ಗೆಯೂ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇಲ್ಲಿ ಭರತ್ ಕುಮಾರ್ ಜೊತೆ ಮೋಕ್ಷಿತಾ ಪೈ ಮತ್ತು ಮುಂಬೈ ಮೂಲದ ಮಾಡೆಲ್ ರಿಯಾ ಸಚ್ದೇವ್ ನಾಯಕಿಯರಾಗಿ ಜೊತೆಯಾಗಿದ್ದಾರೆ. ಪಾರು ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಮೋಕ್ಷಿತಾ ಪೈ ಇಲ್ಲಿ ರಾಧೆಯಾಗಿ, ಭಾವುಕ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ. ಇದೇ ಹೊತ್ತಿನಲ್ಲಿ ಮೋಕ್ಷಿತಾ ಈ ಸಿನಿಮಾದ ನಾಯಕಿಯಾಗಿದ್ದರ ಹಿಂದಿರುವ ಒಂದಷ್ಟು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ, ಸದರಿ ಹಾಡಿನ ಮೂಲಕ ಮೋಕ್ಷಿತಾ ಪಾತ್ರದ ಚಹರೆಗಳೂ ಜಾಹೀರಾಗಿವೆ.
ಇದೀಗ ಟ್ರೆಂಡಿಂಗಿನಲ್ಲಿರೋ ಈ ಮೋಹಕವಾದ ಹಾಡಿ ಕೆ ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ. ರಜತ್ ಹೆಗ್ಡೆ ಮತ್ತು ಕವಿತಾ ರಮೇಶ್ ಧ್ವನಿಯಾಗಿದ್ದಾರೆ. ಉಮೇಶ್ ಫಿಲಂಸ್ ಬ್ಯಾನರಿನಡಿಯಲ್ಲಿ ಎನ್ ಹನುಮಂತರಾಜು ಮತ್ತು ಎನ್ ಹೆಚ್ ಉಮೇಶ್ ಚಂದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಿರುವ ಪ್ರಾಣ್ ಸುವರ್ಣ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಭರತ್ ಕುಮಾರ್ ನಾಯಕನಾಗಿ, ಮೋಕ್ಷಿತಾ ಪೈ ಮತ್ತು ರಿಯಾ ಸಚಿದೇವ್ ನಾಯಕಿಯರಾಗಿ ನಟಿಸಿದ್ದಾರೆ. ಸುನಾದ್ ಗೌತಮ್ ಸಂಗೀತ, ಸುನೀಲ್ ನರಸಿಂಹ ಮೂರ್ತಿ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಲಕ್ಷ್ಮಣ್ ರಾವ್ ಸಹಾಯಕ ಸಂಕಲನ, ಸಂಕಲ್ಪ್ ಆಶೀರ್ವದ್ ಮಾಂಡೋಲ್ ಕಲಾ ನಿರ್ದೇಶನ, ಸುನೀಲ್ ಸುನ್ನಪು ಮತ್ತು ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ, ಡ್ರ್ಯಾಗನ್ ಅಭಿ ಮತ್ತು ಜಯ್ ಸುಬ್ರಮಣ್ಯ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
keywords: rukmini radhakrishna, bharath kumar, mokshitha pai, sandalwood

