ಇತ್ತೀಚಿನ ದಿನಗಳಲ್ಲಿ ಹಾಡುಗಳ ಮೂಲಕವೇ ಆರಂಭಿಕವಾಗಿ ಪ್ರೆಕ್ಷಕರ ಗಮನ ಸೆಳೆಯುವಂಥಾ ಸಿನಿಮಾಗಳು ಕೊಂಚ ವಿರಳ ಎಂಬಂತಿದ್ದವು. ಅಂಥಾ ನಿರ್ವಾತ ಸ್ಥಿತಿಯಲ್ಲಿಯೇ ಲವ್ ಸೀಸನ್ಸ್ ಚಿತ್ರದ ಹಾಡುಗಳು ಎಲ್ಲೆಡೆ ಹರಿದಾಡುತ್ತಿವೆ. ಒಂದರ ಹಿಂದೊಂದರಂತೆ ಬಿಡುಗಡೆಗೊಂಡಿದ್ದ ಹಾಡುಗಳು ಒಂದನ್ನೊಂದು ಮೀರಿಸುವಂತೆ ಕೇಳುಗರನ್ನು ಪರವಶಗೊಳಿಸಿವೆ. ಇಂಥಾ ಹಾಡುಗಳ ಹಬ್ಬದ ನಡುವೆಯೇ, ನಾಯಕ ಮುಕುಂದ ರಾಮಸ್ವಾಮಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಟ್ರೈಲರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಕುರಿತಾದ ಪತ್ರಿಕಾಗೋಷ್ಠಿಯ ಮೂಲಕ ಚಿತ್ರತಂಡ ಮತ್ತೊಂದು ಘಟ್ಟ ತಲುಪಿಕೊಂಡಿದೆ.
ಈ ಪತ್ರಿಕಾ ಗೋಷ್ಠಿಯಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿರ್ದೆಶಕ ಜಯತೀರ್ಥ ಮತ್ತು ಮಂಡ್ಯ ರಮೇಶ್, ಹೊಸ ಪ್ರತಿಭಾನ್ವಿತ ತಂಡಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಪ್ರೇಕ್ಷಕರನ್ನು ಕೇಳಿಕೊಳ್ಳುತ್ತಲೇ, `ಈ ಸಿನಿಮಾ ತಂಡದಲ್ಲಿ ರಂಗಭೂಮಿಯಿಂದ ಬಂದ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಂಗಭೂಮಿಯ ನಂಟು ಹೊಂದಿರುವ ಕಲಾವಿದರೆಲ್ಲರಿಗೂ ಶಿಸ್ತು ಮತ್ತು ಬದ್ಧತೆಗಳಿರುತ್ತವೆ. ನಿರ್ದೇಶಕ ಕೃತ್ವಿಕ್ ಪಾಲಿಗಿದು ಚೊಚ್ಚಲ ಚಿತ್ರವಾದರೂ ಅಚ್ಚುಕಟಾಗಿ ನಿಭಾಯಿಸಿರುವ ಸೂಚನೆಗಳಿವೆ. ಇದೆಲ್ಲದಕ್ಕೆ ಪೂರಕವಾಗಿ ಸಿನಿಮಾ ವ್ಯಾಮೋಹ ಹೊಂದಿರುವ ನಿರ್ಮಾಪಕರ ಸಾಥ್ ಕೂಡಾ ಸಿಕ್ಕಿದೆ’ ಎನ್ನುತ್ತಾ ಲವ್ ಸೀಸನ್ಸ್ ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲೆಂದು ಹಾರೈಸಿದರು.
ಈಗಾಗಲೇ ಲವ್ ಸೀಸನ್ಸ್ ಚಿತ್ರದ ಮೂರು ಹಾಡುಗಳು ಬಿಡುಗಡೆಗೊಂಡು ಕೇಳುಗರ ಮನಗೆದ್ದಿವೆ. ಶೀರ್ಷಿಕೆಯೇ ಹೇಳುವಂತೆ ಇದು ಪ್ರೇಮವೆಂಬೋ ಮಾಯೆಯ ಒಂದಷ್ಟು ಋಉತುಮಾನಗಳನ್ನು ಆಧರಿಸಿದ ಚಿತ್ರ. ಅದನ್ನು ಹೊಸಾ ಬಗೆಯಲ್ಲಿ ದೃಷ್ಯ ರೂಪಕ್ಕೆ ಒಗ್ಗಿಸಿರೋದಾಗಿ ನಿರ್ದೇಶಕ ಕೃತ್ವಿಕ್ ಈ ಹಿಂದೆಯೇ ಹೇಳಿಕೊಂಡಿದ್ದಾರೆ. ಇದೀಗ ಬಿಡುಗಡೆಗೊಂಡಿರುವ ಟ್ರೈಲರಿನಲ್ಲಿ ಅದಕ್ಕೆ ಪೂರಕವಾದ ಹೊಳಹುಗಳು ಕಾಣಿಸಿವೆ. ಮುಂಗಾರು ಆಗಮಿಸಿರುವ ಥಂಡಿ ಥಂಡಿ ವಾತಾವರಣದಲ್ಲಿ ಮನಸು ಬೆಚ್ಚಗಾಗುವಂತೆ ಸದರಿ ಟ್ರೈಲರ್ ಮೂಡಿ ಬಂದಿದೆ. ಹಾಡುಗಳಿಗೆ ಪೂರಕವಾಗಿ, ಹೊಸಾ ಬಗೆಯ ಪ್ರೇಮ ಕಥನದ ಸುಳಿವಿನೊಂದಿಗೆ ಈ ಟ್ರೈಲರ್ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ.
ಎನ್.ಆರ್ ಸ್ಟುಡಿಯೋಸ್ ಬ್ಯಾನರ್ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ ಸಂಗೀತ ನಿದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣ ಈ ಚಿತ್ರ ಜುಲೈ ೩ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
keywords: love seasons, love seasons trailer, sandalwood, kfi

