ಪ್ರೇಮವೆಂಬುದು ಸಿನಿಮಾ ಫ್ರೇಮಿಗೆ ಸದಾ ಕಾಲವೂ ತಾಜಾತನದಿಂದ ಒಗ್ಗಿಕೊಳ್ಳುವ ಮಾಯೆ. ಬಹುಶಃ ಬರಿದಾಗುವಂತಿದ್ದರೆ ಪ್ರೀತಿಯೆಂಬೋ ಸರಕು ಸಿನಿಮಾ ಜಗತ್ತಿನ ಪಾಲಿಗೆ ಯಾವತ್ತೋ ಮುಗಿದು ಹೋಗುತ್ತಿತ್ತು. ಆದರೆ, ಅದು ಪ್ರತೀ ಬೊಗಸೆಗೂ ತಾಜಾತನದಿಂದ ದಕ್ಕಿಬಿಡುವ ಮಾಯೆ. ಈ ಕಾರಣದಿಂದಲೇ ಪ್ರೀತಿಯನ್ನೇ ಪ್ರಧಾನವಾಗಿಟ್ಟುಕೊಂಡ ಕಥನದ ಬಗ್ಗೆ ಪ್ರೇಕ್ಷಕರಲ್ಲೂ ಕೂಡಾ ಎಂದೂ ಮುಗಿಯದ ಕುತೂಹಲವೊಂದು ಪ್ರತಿಷ್ಠಾಪಿತಗೊಂಡಿದೆ. ನವ ನಿರ್ದೇಶಕ ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಲವ್ ಸೀಸನ್ಸ್; ಚಿತ್ರ ಸಹ ಈ ಕಾರಣದಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಈಗಾಗಲೇ ಬಿಡುಗಡೆಗೊಂಡಿರೋ ಹಾಡುಗಳು ಈ ವರ್ಷದ ಮೆಲೋಡಿಯಸ್ ಹಾಡುಗಳ ಪಟ್ಟಿಗೆ ಸೇರ್ಪಡೆಗೊಂಡಿವೆ. ಈ ಯಶಸ್ಸಿನ ಪ್ರಭೆಯಲ್ಲಿಯೇ ಜುಲೈ ೩ರಂದು ಲವ್ ಸೀಸನ್ಸ್ ರಾಜ್ಯಾದ್ಯಂತ ತೆರೆಗಾಣಲಿದೆ.
ಲವ್ ಸೀಸನ್ಸ್ ಮೂಲಕ ರಂಗಭೂಮಿ ಹಿನ್ನೆಲೆಯ ಹೊಸಬರ ತಂಡವೊಂದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ಆ ಪ್ರತಿಭಾನ್ವಿತ ತಂಡದ ಸಾರಥಿಯಂತಿರುವಾತ ನಿರ್ದೇಶಕ ಕೃತ್ವಿಕ್. ಕಾಲೇಜು ದಿನಗಳಲ್ಲಿಯೇ ನಟನಾಗಬೇಕೆಂಬ ಹಂಬಲ ಹೊಂದಿದ್ದ ಕೃತ್ವಿಕ್, ೨೦೧೬ರಿಂದಲೆ ಗೆಜ್ಜೆ ಹೆಜ್ಜೆ ಎಂಬ ರಂಗಭೂಮಿ ತಂಡಕ್ಕೆ ಸೇರ್ಪಡೆಗೊಂಡು ತಾಲೀಮು ಆರಂಭಿಸಿದ್ದರು. ಆ ಬಳಿಕ ಎರಡು ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದುಕೊಂಡು, ಎಪ್ಪತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದ ಕೃತ್ವಿಕ್ರ ಆಸಕ್ತಿ ನಿರ್ದೇಶನ ಮತ್ತು ಬರವಣಿಗೆಯತ್ತಲೂ ಹೊರಳಿಕೊಂಡಿತ್ತು. ಈ ಹಂತದಲ್ಲಿಯೇ ನಟನೆಯಾಚೆಗಿರುವ ಭಿನ್ನ ಸಾಧ್ಯತೆಗಳತ್ತ ಕೃತ್ವಿಕ್ ತೆರೆದುಕೊಂಡಿದ್ದರು.
ಆ ಬಳಿಕ 2016ರ ಸುಮಾರಿಗೆ ಸಿನಿಮಾ ರಂಗದತ್ತ ಮುಖ ಮಾಡಿದ್ದ ಕೃತ್ವಿಕ್ರ ಪ್ರಧಾನ ಗುರಿಯಾಗಿದ್ದದ್ದು ನಿರ್ದೇಶನ. ನಿರ್ದೇಶನ ವಿಭಾಗದಲ್ಲಿ ಪಳಗಿಕೊಳ್ಳುವ ಉದ್ದೇಶದೊಂದಿಗೆ ಅವಕಾಶಕ್ಕಾಗಿ ಅರಸುತ್ತಿದ್ದಾಗ ಚಿರಂಜೀವಿ ಸರ್ಜಾ ಅಭಿನಯದ ಕ್ಷತ್ರಿಯ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ಧಿವಂತ೨, ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ ಗುರುದೇವ ಹೊಯ್ಸಳ ಮ ಉಂತದ ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಪಳಗಿಕೊಳ್ಳುವ ಅವಕಾಶವೂ ಕೂಡಿ ಬಂದಿತ್ತು. ಇದೆಲ್ಲದರ ನಂತರ ಕೆಲ ಸರ್ಕಾರಿ ಡಾಕ್ಯುಮೆಂಟರಿ, ಜಾಹೀರಾತು ಚಿತ್ರೀಕರಣ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದ ಕೃತ್ವಿಕ್, ೨೦೨೪ರ ಹೊತ್ತಿಗೆಲ್ಲ ಒಂದಷ್ಟು ಕಥೆ ಸಿದ್ಧಪಡಿಸಿಕೊಂಡು ಶಾರ್ಟ್ಫಿಲಂಗಳ ಮೂಲಕ ತನ್ನ ನಿರ್ದೇಶನದ ಕಸುವನ್ನು ಒರೆಗೆ ಹಚ್ಚಲಾರಂಭಿಸಿದ್ದರು.
ಆ ನಿರ್ಧಾರದ ಭಾಗವಾಗಿಯೇ 2022ರಲ್ಲಿ ಶುರುವಾಗಿದ್ದ ಕಿರುಚಿತ್ರ ಎಂಆರ್ಎಫ್. ಸದರಿ ಕಿರುಚಿತ್ರದ ಮೂಲಕವೇ ಮುಕುಂದ್ ರಾಮಸ್ವಾಮಿ ಮತ್ತು ಕೃತ್ವಿಕ್ ಸಮಾಗಮವಾಗಿತ್ತು. ವಿಶೇಷವೆಂದರೆ ಇವರಿಬ್ಬರನ್ನು ಸಂದಿಸುವಂತೆ ಮಾಡಿದ್ದ ಮೂಲ ಬಿಂದು ರಂಗಭೂಮಿ. ಇಂಥಾ ಘಟ್ಟಗಳನ್ನು ದಾಟಿಕೊಂಡ ಬಳಿಕ ಕಿರುಚಿತ್ರ ಮಾಡುವ ಉದ್ದೇಶದಿಂದಲೇ ಒಂದು ಪ್ರೇಮದ ಭೂಮಿಕೆಯ ಕಥನವನ್ನು ಕೃತ್ವಿಕ್ ತಯಾರುಗೊಳಿಸಿದ್ದರು. ಅದು ನಿರ್ಮಾಪಕ ಮಂಜುನಾಥ್ ನೀಲೇರಿ ಅವರಿಗೆ ಹಿಡಿಸಿದ್ದೇ, ಇದು ಸಿನಿಮಾ ಮಾಡಲು ಸೂಕ್ತ ಕಥೆ ಎಂಬಂಥಾ ಅಭಿಪ್ರಾಯವೂ ಬಂದಿತ್ತು. ಈ ಕಾರಣದಿಮದಲೇ ೨೦೨೪ರ ಮಧ್ಯ ಭಾಗದಲ್ಲಿ ಲವ್ ಸೀಸನ್ಸ್ ಚಿತ್ರ ಶುರುವಾಗಿತ್ತು.
ಇದು ಪ್ರೇಮವನ್ನು ರುತುಮಾನಗಳ ಭೂಮಿಕೆಯಲ್ಲಿ ಕಟ್ಟಿ ಕೊಡುವ ಯುವ ಆವೇಗದ ಕಥೆ ಹೊಂದಿರೋ ಚಿತ್ರ. ಆಯಾ ಋತುಮಾನಗಳಿಗೆ ತಕ್ಕಂತೆ ರೂಪುಗೊಳ್ಳೋ ಭಿನ್ನ ಕಥೆಗಳ ಮೂಲಕ ಈ ಸಿನಿಮಾವನ್ನು ಕೃತ್ವಿಕ್ ಕಟ್ಟಿಕೊಟ್ಟಿದ್ದಾರಂತೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನವರಾದರೂ, ಬೆಂಗಳೂರಿನ ರಾಜಾಜಿ ನಗರದಲ್ಲಿಯೇ ಹುಟ್ಟಿ ಬೆಳೆದವರು ನಿರ್ದೇಶಕ ಕೃತ್ವಿಕ್. ಈ ಕಾರಣದಿಂದಲೇ, ಈ ಭಾಗದಲ್ಲಿ ಘಟಿಸುವ ಕಥೆಯೊಂದಿಗೆ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಪ್ರೇಮಕಥೆಯಾದರೂ, ಇದು ಬೆಂಗಳೂರಿನ ಮಣ್ಣ ಘಮಲನ್ನು ಒಡಲಲ್ಲಿಟ್ಟುಕೊಂಡಿರುವ ಕಥನವೂ ಹೌದು.

ಅದನ್ನು ಎಲ್ಲ ವರ್ಗದ ಪ್ರೇಕ್ಷಕರಿಗೂ ರುಚಿಸುವಂತೆ ರೂಪಿಸಿರುವ ತುಂಬು ಭರವಸೆ ಕೃತ್ವಿಕ್ರಲ್ಲಿದೆ. ಸದ್ಯ ಒಂದಷ್ಟು ಭಿನ್ನ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸಬೇಕೆಂಬ ಹಂಬಲ ಹೊಂದಿರೋ ಕೃತ್ವಿಕ್, ಮುಂದಿನ ದಿನಗಳಲ್ಲಿ ನಿರ್ದೇಶಕರಗಿಯೇ ಮುಂದುವರೆಯುವ ಇರಾದೆ ಹೊಂದಿದ್ದಾರೆ. ಇದೇ ಹೊತ್ತಿನಲ್ಲಿ ಮುಂದೆ ಒಳ್ಳೆ ಪಾತ್ರ ಸಿಕ್ಕರೆ ನಟಿಸುವ ಆಸೆಯನ್ನೂ ಒಳಗಿಟ್ಟುಕೊಂಡಿದ್ದಾರೆ. ಕೃತ್ವಿಕ್ ಕನಸಿನ ಕೂಸಿನಂಥಾ ಲವ್ ಸೀಸನ್ಸ್ಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದು ವಾರದೊಪ್ಪತ್ತಿನಲ್ಲಿಯೇ ಜಾಹಿರಾಗಲಿದೆ!
keywords: kruthvik, love seasons movie, sandalwood

