ನಾಕಾಣಿ ಕೆಲಸ ಮಾಡಿ ಎಂಟಾಣೆ ಪೋಸು ಕೊಡೋ ವಿಚಾರದಲ್ಲಿ ಜೋಗಿ ಪ್ರೇಮ್ಸ್ ಸಾರ್ವಕಾಲಿಕ ಮಾದರಿ ಆಸಾಮಿ. ಬರೆಈ ಹೈಪುಗಳತ್ತಲೇ ಗಮನ ಹರಿಸಿದರೆ ಸಿನಿಮಾವೊಂದು ಯಾವ್ಯಾವ ಥರದಲ್ಲಿ ಹಳ್ಳ ಹಿಡಿಯಬಹುದೆಂಬುದಕ್ಕೂ ಪ್ರೇಮ್ಸ್ ತಾಜಾ ಉದಾಹರಣೆ. ಇಂಥಾ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ರಕ್ತದಲ್ಲಿ ಅದ್ದಿ ತೆಗೆದಂತಿದ್ದ ಕಲಾಕೃತಿ ಕೆಡಿ ದ ಡೆವಿಲ್ ಚಿತ್ರ. ಎಲ್ಲ ಹೈಪುಗಳಾಚೆಗೂ ಸದರಿ ಸಿನಿಮಾ ಚಿತ್ರಮಂದಿರಗಳಿಂದ ಎಗರಿಕೊಂಡಿದೆ. ಇದರ ಪರಿಣಾಮಗಳು ನಾನಾ ತೆರನಾಗಿ ಪ್ರತಿಫಲಿಸುತ್ತಲೇ ಇದ್ದಾವೆ. ಯಾವುದೇ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶ ಕಂಡಾಗ, ಅದರ ಭಾಗವಾದವರ ನಸೀಬು ಲಕಲಕಿಸುತ್ತೆ. ಅದೇ ರೀತಿ ಭಾರೀ ನಿರೀಕ್ಷೆ ಮೂಡಿಸಿದ್ದ ಚಿತ್ರವೊಂದು ತೋಪೆದ್ದಾಗ ಸಹಜವಾಗಿಯೇ ತಂಡದ ನಾನಾ ಮಂದಿಯ ವೃತ್ತಿ ಬದುಕು ಹೊಯ್ದಾಡಲಾರಂಭಿಸುತ್ತೆ. ಕೆಡಿ ಚಿತ್ರದ ಭೂಮಿಕೆಯಲ್ಲಿ ಅಂಥಾದ್ದೊಂದು ಸೋಲಿನ ಪರಿಣಾಮ ಪ್ರಧಾನವಾಗಿ ನಾಯಕಿಯಾಗಿ ನಟಿಸಿದ್ದ ರೀಷ್ಮಾ ನಾಣಯ್ಯಳನ್ನು ಪೀಡಿಸುತ್ತಿರುವಂತಿದೆ!
ಒಂದು ವೇಳೆ ಪ್ರೇಮ್ಸ್ ಸೃಷ್ಟಿಸಿದ್ದ ಹೈಪುಗಳಿಗೆ ಸರಿಸಮಾನವಾಗಿ ಕೆಡಿ ದ ಡೆವಿಲ್ ಮೂಡಿ ಬಂದಿದ್ದರೆ, ಇಷ್ಟು ಹೊತ್ತಿಗೆಲ್ಲ ರೀಷ್ಮಾ ನಾಣಯ್ಯ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದರೋ ಏನೋ. ಆದರೆ, ಅಂಥಾ ಸಕಾರಾತ್ಮಕವಾದ ಯಾವ ವಾತಾವರಣಗಳೂ ಆಕೆಯ ಮುಂದೆ ಕಾಣಿಸುತ್ತಿಲ್ಲ. ಹಾಗೆ ನೋಡಿದರೆ, ಆರಂಭದಲ್ಲಿ ಸದರಿ ಸಿನಿಮಾ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದದ್ದು ಇದೇ ರೀಷ್ಮಾಳ ಪೋಸ್ಟರ್ ಒಂದರ ಮೂಲಕ. ಪಕ್ಕಾ ಮಾಸ್ ಲುಕ್ಕಿನಲ್ಲಿ ಮೂಳೆ ಕಡಿಯುತ್ತಾ ಕೂತಿದ್ದ ರೀಷ್ಮಾಳ ರಗಡ್ ಲುಕ್ ಕಂಡು ಕೇಡಿಯ ಬಗ್ಗೆ ತಂತಾನೇ ಕುತೂಹಲ ಮೂಡಿಕೊಂಡಿತ್ತು. ಆದರೆ, ಪ್ರೇಮ್ಸ್ ತೀರಾ ಓವರ್ ಆಕ್ಟಿಂಗ್ ಅನ್ನಿಸುವಂತೆ ಆ ಪಾತ್ರವನ್ನು ಕಟ್ಟಿ ಕೊಟ್ಟರೇ ಹೊರತು, ರೀಷ್ಮಾಳ ಪಾತ್ರವನ್ನು ನೋಡುಗರ ಎದೆಗಿಳಿಯುವಂತೆ ರೂಪಿಸುವತ್ತ ಗಮನಹರಿಸಲಿಲ್ಲ.
ಅದೇನು ದುರ್ವಿಧಿಯೋ ಗೊತ್ತಿಲ್ಲ; ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಯುಐ ಚಿತ್ರದಲ್ಲಿಯೂ ರೀಷ್ಮಾ ಪಾತ್ರವನ್ನು ಪ್ರೇಮ್ಸ್ ರೀತಿಯಲ್ಲಿಯೇ ಪೇಲವವಾಗಿಸಿದ್ದರು. ಏಕ್ಲವ್ಯಾದಂಥಾ ಸಿನಿಮಾ ಮೂಲಕ ಬೆಳಕಿಗೆ ಬಂದಿದ್ದ ಈ ಹುಡುಗಿ, ಆ ನಂತರ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಭರಪೂರ ಗೆಲುವು ದಕ್ಕಿರಲಿಲ್ಲ. ಆದರೆ, ಏಕಾಏಕಿ ಯುಐ ಮೂಲಕ ರಿಯಲ್ ಸ್ಟಾರ್ಗೆ ರೀಷ್ಮಾ ನಾಯಕಿಯಾದಾಗ ಎಲ್ಲರೂ ಅಚ್ಚರಿಗೀಡಾಗಿದ್ದರು. ಇನ್ನು ಮುಂದೆ ಈ ಹುಡುಗಿ ಸ್ಯಾಂಡಲ್ವುಡ್ಡಿನ ಮುಖ್ಯನಾಯಕಿಯಾಗಿ ನೆಲೆ ಕಂಡುಕೊಳ್ಳುತ್ತಾಳೆಂಬ ಭರವಸೆಯೊಂದು ತಂತಾನೇ ಮೂಡಿಕೊಂಡಿತ್ತು. ಆದರೆ, ಉಪೇಂದ್ರ ಯುಐ ಅನ್ನು ನಿರೀಕ್ಷಿತ ಮಟ್ಟದಲ್ಲಿ ಕಟ್ಟಿ ಕೊಡುವಲ್ಲಿ ಸೋತಿದ್ದರು. ಅತಿಯಾದ ಬುದ್ಧಿವಂತಿಕೆಯೇ ಪ್ರೇಕ್ಷಕರನ್ನು ಸಿನಿಮಾ ಮಂದಿರದಿಂದ ದೂರ ನಿಲ್ಲುವಂತೆ ಮಾಡಿ ಬಿಟ್ಟಿತ್ತು. ಇದೆಲ್ಲದರಾಚೆಗೆ ರೀಷ್ಮಾ ಪಾತ್ರದ ಬಗ್ಗೆಯೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ಪ್ರೇಕ್ಷಕರು ಆಕರ್ಷಿತರಾಗಲಿಲ್ಲ.
ಒಂದು ವೇಳೆ ಯುಐ ನಿರೀಕ್ಷಿತ ಗೆಲುವು ಕಂಡಿದ್ದರೂ ಕೂಡಾ ಕೊಡಗಿನ ಹುಡುಗಿಯ ಲಕ್ಕು ಕುದುರುತ್ತಿತ್ತು. ಅಂತೂ ಉಪ್ಪಿ ಹಾಗೂ ಪ್ರೇಮ್ಸ್ ದೆಸೆಯಿಂದಾಗಿ ಸ್ಯಾಂಡಲ್ವುಡ್ಡಿನಲ್ಲಿ ಲಕಲಕಿಸಬಹುದಾಗಿದ್ದ ರೀಷ್ಮಾ ನಾಣಯ್ಯ ಮಂಕಾಗುವಂತಾಗಿದೆ. ಸದ್ಯದ ಮಟ್ಟಿಗೆ ರೀಷ್ಮಾ ಪ್ರೇಮ್ಸ್ ಕೊಟ್ಟಿದ್ದ ಹಳೇ ಮಚ್ಚು ಬಿಸಾಡಿ ತಮಿಳಿನತ್ತ ಮುಖ ಮಾಡಿದ್ದಾರೆ. ಅಲ್ಲಿ ಒಂದು ಸಿನಿಮಾಕ್ಕೆ ಆಕೆ ನಾಯಕಿಯಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಹೀಗೆ ರೀಷ್ಮಾ ಏಕಾಏಕಿ ತಮಿಳಿನತ್ತ ಮುಖ ಮಾಡಿರೋದಕ್ಕೆ ಕನ್ನಡ ಚಿತ್ರರಂಗದಲ್ಲಿನ ಅವಕಾಶಗಳ ಕೊರತೆ ಕಾರಣ ಎಂಬಂತೆಯೂ ಚರ್ಚೆಗಳಾಗುತ್ತಿವೆ. ಪರಭಾಷೆಗಳಲ್ಲಾದರೂ ಕನ್ನಡತಿ ಮಚ್ ಲಕ್ಷ್ಮಿಯ ಲಕ್ಕು ಕುದುರಬಹುದಾ ಎಂಬುದು ಸದ್ಯದ ಕುತೂಹಲ!
keywords: reeshma nanaiah, kd the devil movie, sandalwood

