ಹಾಡುಗಳ ಮೂಲಕವೇ ತಣ್ಣಗೆ ಸಿನಿಮಾಸಕ್ತರ ಎದೆಗಿಳಿದ ಅದೆಷ್ಟೋ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡ ಉದಾಹರಣೆ ದಂಡಿಯಾಗಿವೆ. ಇಂಥಾದ್ದೊಂದು ಮ್ಯೂಸಿಕಲ್ ಹಿಟ್ ಸಿನಿಮಾ ಯಾದಿಗೆ ಕೃತಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ಕೂಡಾ ಸೇರಿಕೊಳ್ಳಲಿದೆಯಾ? ಸದ್ಯಕ್ಕೆ ಬಿಡುಗಡೆಯಾಗಿರುವ ಎರಡು ಹಾಡುಗಳಿಗೆ ಸಿಗುತ್ತಿರುವ ಭರಪೂರ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಆ ಸಾಧ್ಯತೆ ನಿಚ್ಚಳವಾದಂತೆ ಕಾಣಿಸುತ್ತದೆ. ಇತ್ತೀಚೆಗಷ್ಟೇ ಮಳೆಯಾಗೋ ಮೊದಲೇ ಎಂಬ ಹಾಡು ಬಿಡುಗಡೆಗೊಂಡಿತ್ತು. ಅದು ಹಿಟ್ ಆದ ಬೆನ್ನಲ್ಲಿಯೇ ಕೇಳುಗರನ್ನು ತಲುಪಿಕೊಂಡಿರುವ ಪ್ರೀತಿ ಯಾನ ಎಂಬ ಲಿರಿಕಲ್ ವೀಡಿಯೋ ಹಾಡೂ ಕೂಡಾ ಇದೀಗ ಟ್ರೆಂಡಿಂಗಿನಲ್ಲಿದೆ!
ಹೊಸದೊಂದು ಪ್ರೀತಿ ಯಾನ ಏನೆಂದರು ಚೆನ್ನ. ದಿನವೆಲ್ಲ ಮಾಡುತೀನಿ ನಾ ನಿನ್ನದೆ ಧ್ಯಾನ… ಎಂಬ ಈ ಹಾಡನ್ನು ಧನಂಜಯ್ ರಂಜನ್ ಬರೆದಿದ್ದಾರೆ. ಅದಕ್ಕೆ ವೀರ್ ಸಮರ್ಥ್ ನೇರವಾಗಿ ಎದೆಗೆ ಸೋಕುವಂಥಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೇಶವ್ ಆನಂದ್ ಹಾಡಿರೋ ಈ ಹಾಡು ಪ್ರೇಮದ ಚೇತೋಹಾರಿ ಭಾವಗಳನ್ನು ಕೇಳುಗರ ಮನಸಿನ ಮೆಲುವಾಗಿ ನಾಟಿಸುವಂತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಹಾಡಿಗಿಂತಲೂ ವೇಗವಾಗಿ ಹೊಸತೊಂದು ಪ್ರೀತಿ ಯಾನ ಟ್ರೆಂಡ್ ಸೆಟ್ ಮಾಡಿದೆ. ಎಲ್ಲ ದಿಕ್ಕುಗಳಿಂದಲೂ ಸದರಿ ಗೀತೆಗೆ ಹರಿದು ಬರುತ್ತಿರೋ ಭರಪೂರ ಪ್ರತಿಕ್ರಿಯೆಗಳನ್ನು ಕಂಡು ಚಿತ್ರತಂಡ ಖುಷಿಗೊಂಡಿದೆ.

ಈ ಹಿಂದೆ ಮೊದಲ ಪತ್ರಿಕಾಗೊಷ್ಠಿಯಲ್ಲಿಯೇ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಹಾಡುಗಳ ಬಗ್ಗೆ ನಿರೀಕ್ಷೆ ಮೇಳೈಸುವಂಥಾ ಒಂದಷ್ಟು ವಿಚಾರಗಳನ್ನು ತೆರೆದಿಟ್ಟಿದ್ದರು. ಇದೀಗ ಅದಕ್ಕೆ ಪೂರಕವಾಗಿಯೇಢ ಒಂದರ ಹಿಂದೊಂದರಂತೆ ಲವ್ ಸೀಸನ್ಸ್ ಚಿತ್ರದ ಚೆಂದದ ಹಾಡುಗಳು ಬಿಡುಗಡೆಗೊಳ್ಳುತ್ತಿದ್ದಾವೆ. ಪ್ರೇಮ ಕಥನದ ಭೂಮಿಕೆಯಲ್ಲಿಯೇ ಬದುಕಿನ ಬಗೆಗಿನ ಗಹನವಾದ ಕಥೆಯನ್ನೂ ಒಳಗೊಂಡಿರುವ ಈ ಸಿನಿಮಾ ಈಗಾಗಲೇ ಪ್ರೇಕ್ಷಕರೊಳಗೊಂದು ಕುತೂಹಲವನ್ನು ಪ್ರತಿಷ್ಠಾಪಿಸಿದೆ. ಕೃತ್ವಿಕ್ ಲವ್ ಸೀಸನ್ಸ್ ಮೂಲಕವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ನಾಯಕ ಮುಕುಂದ ರಾಮಸ್ವಾಮಿ ಸೇರಿದಂತೆ ಒಂದಷ್ಟು ಹೊಸಾ ಪ್ರತಿಭೆಗಳು ನಾನಾ ವಿಭಾಗಗಳ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುವ ಸನ್ನಾಹದಲ್ಲಿದ್ದಾರೆ.
ಎನ್.ಆರ್ ಸ್ಟುಡಿಯೋಸ್ ಬ್ಯಾನರ್ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ ಸಂಗೀತ ನಿದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.
keywords: love seasons, kruthvik, sandalwood

