ಈಗಾಗಲೇ ಹಾಡುಗಳ ಮೂಲಕ ಕ್ರೇಜ್ ಸೃಷ್ಟಿಸಿರುವ ಲವ್ ಸೀಸನ್ಸ್ ಚಿತ್ರ ಜುಲೈ ೩ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಾಣ ಮತ್ತು ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಹಾಡುಗಳು ಈಗಾಗಲೇ ಸಿನಿಮಾಸಕ್ತರ ಮನಸಿಗೆ ತಾಕಿವೆ. ಇದರೊಂದಿಗೆ ಲವ್ ಸೀಸನ್ಸ್ ಬಗ್ಗೆ ಪ್ರೇಕ್ಷಕರ ವಲಯದಲ್ಲೊಂದು ಚರ್ಚೆಗಳು ನಡೆಯುತ್ತಾ, ಅದುವೇ ಕುತೂಹಲವಾಗಿ ಮಾರ್ಪಾಟಾಗಲಾರಂಭಿಸಿದೆ. ಇದರೊಂದಿಗೆ ರಂಗಭೂಮಿ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಿರ್ದೇಶಕ ಕೃತ್ವಿಕ್, ನಾಯಕ ಮುಕುಂದ ರಾಮಸ್ವಾಮಿ ಮಾತ್ರವಲ್ಲದೇ, ನಾಯಕಿಯರಲ್ಲೊಬ್ಬರಾಗಿರುವ ದಿಯಾ ಕೀರ್ತಿ ಕೂಡಾ ರಂಗಭೂಮಿಯಿಂದ ಬಂದವರೆಂಬುದು ವಿಶೇಷ!
ದಿಯಾ ಕೀರ್ತಿ ೨೦೧೮ರಿಂದಲೇ ರಂಗಭೂಮಿಯ ನಂಟು ಹೊಂದಿದ್ದವರು. ಸುಶಿಕ್ಷಿತ ಕುಟುಂಬದಿಂದ ಬಂದಿರುವ ದಿಯಾಗೆ ಕೌಟುಂಬಿಕ ವಾತಾವರಣದಾಚೆಗಿನ ಕ್ಷೇತ್ರಕ್ಕೆ ಕಾಲಿಡಬೇಕೆಂಬುದು ಲಾಗಾಯ್ತಿನ ಕನಸಾಗಿತ್ತು. ಅದಕ್ಕಾಗಿ ಆಕೆ ಆರಿಸಿಕೊಂಡಿದ್ದು ನಟನೆಯನ್ನು. ಪ್ರತಿಯೊಂದರಲ್ಲಿಯೂ ಪಳಗಿಕೊಂಡೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಇರಾದೆಯಿಂದ ದಿಯಾ ವರ್ಷಗಟ್ಟಲೆ ರಂಗಭೂಮಿ ವಾತಾವರಣದಲ್ಲಿ ಕಲಿಕೆ ನಡೆಸಿದ್ದಾರೆ. ಈ ಸಿನಿಮಾದ ನಾಯಕ ಮುಕುಂದ ರಾಮಸ್ವಾಮಿಉ ಮತ್ತು ದಿಯಾ ರಂಗಭೂಮಿಯ ಭೂಮಿಕೆಯಲ್ಲಿಯೇ ಪರಿಚಿತರಾಗಿದ್ದವರು. ತಮ್ಮ ಕನಸಿನ ಸಿನಿಮಾದ ಪಾತ್ರವೊಂದಕ್ಕೆ ಈಕೆಯೇ ಸೂಕ್ತ ಎಂದರಿತ ಮುಕುಂದ ರಾಮಸ್ವಾಮಿ ನಿರ್ದೇಶಕರಿಗೆ ಈ ಬಗ್ಗೆ ಹೇಳಿದ್ದರಂತೆ. ಕಡೆಗೂ ಆಡಿಷನ್ ಮೂಲಕವೇ ದಿಯಾ ಕೀರ್ತಿಗೆ ಭಾವುಕ ಪಾತ್ರವೊಂದು ಲಭಿಸಿದೆ.
ಲವ್ ಸೀಸನ್ಸ್ ಚಿತ್ರದಲ್ಲಿ ದಿಯಾ ಕೀರ್ತಿ ಮೇರಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗೆ ತಮ್ಮ ಪಾಲಿಗೆ ಒದಗಿ ಬಂದ ಸದರಿ ಪಾತ್ರದ ಬಗ್ಗೆ ಖುದ್ದು ದಿಯಾಗೇ ಥ್ರಿಲ್ ಇದೆ. ಯಾಕೆಂದರೆ, ಅದು ಎಂಥಾ ಸಂದರ್ಭದಲ್ಲಿಯೂ ಸುತ್ತಲಿರುವವರಿಗೆಲ್ಲ ಒಳಿತನ್ನೇ ಬಯಸೋ ಪಾತ್ರ. ಮನಸಿನ ತುಂಬಾ ನಿಷ್ಕಪಟ ಪ್ರೀತಿ ತುಂಬಿಕೊಂಡ ಆ ಪಾತ್ರ ಅಪ್ಪಿತಪ್ಪಿಯೂ ಯಾರಿಗೂ ಕೇಡು ಬಯಸೋದಿಲ್ಲ. ಮೇರಿ ಎಂಬ ಈ ಪಾತ್ರ ಪ್ರತೀ ನೋಡುಗರನ್ನೂ ತನ್ನದೇ ರೀತಿಯಲ್ಲಿ ಕಾಡುವಂತಿದೆಯಂತೆ. ಇಂಥಾ ಒಬ್ಬಳು ಅಕ್ಕ, ತಂಗಿ, ಮಗಳು, ಮಡದಿ ತಮಗೂ ಇರಬೇಕಿತ್ತೆಂಬ ಬೆಚ್ಚಗಿನ ಭಾವ ಮುಡಿಸೋ ಮೇರಿಯೆಂಬ ಪಾತ್ರವನ್ನು ಒಳಗಿಳಿಸಿಕೊಂಡು ನಟಿಸಿದ ಆತ್ಮತೃಪ್ತಿ ದಿಯಾರದ್ದು.
ಚಿಕ್ಕಬಳ್ಳಾಪುರದಲ್ಲಿ ಹುಟ್ಟಿ ಬೆಳೆದು, ಅಲ್ಲಿಯೇ ವಿದ್ಯಾಭ್ಯಾಸವನ್ನೂ ಮುಗಿಸಿಕೊಂಡಿರೋಳ ದಿಯಾ ಕೀರ್ತಿಯ ಮನೆ ಮಂದಿಯೆಲ್ಲ ಶಿಕ್ಷಣ ಕ್ಷೇತ್ರದಲ್ಲಿರುವವರು. ಇಂಥಾ ವಾತಾವರಣದಲ್ಲಿಯೇ ಬೆಳೆದು ಬಂದ ಕಾರಣದಿಂದ, ಭಿನ್ನ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಳ್ಳಬೆಕೆಂಬ ಹಂಬಲ ಶಾಲಾ ಕಾಲೆಜು ದಿನಗಳಲ್ಲಿಯೇ ದಿಯಾರನ್ನು ಆವರಿಸಿಕೊಂಡಿತ್ತು. ಆದರೆ, ನಟಿಯಾಗಬೇಕೆಂಬ ಹಂಬಲ ಒಂದು ಹಂತದವರೆಗೂ ಇರಲಿಲ್ಲ. ಕಡೆಗೂ ಬಣ್ಣದ ಜಗತ್ತಿನಲ್ಲಿಯೇ ಬದುಕು ಕಟ್ಟಿಕೊಳ್ಳುವ ತೀರ್ಮಾನ ಕ್ಕೆ ಬಂದಿದ್ದ ದಿಯಾ, ೨೦೧೭ರ ಸುಮಾರಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಅನೇಕ ರಿಯಾಲಿಟಿ ಶೋಗಳಲ್ಲಿ ಕೋರಿಯೋಗ್ರಾಫರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.
ನಟಿಯಾಗಬೇಕೆಂದರೆ, ಪ್ರತಿ ಸುಕ್ಷ್ಮಗಳ್ನ್ನೂ ಅರಿತುಕೊಳ್ಳಬೇಕೆಂಬ ಇರಾದೆಯಿಂದಲೇ ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದರು. ಈ ಮೂಲಕವೇ ಲವ್ ಸೀಸನ್ಸ್ ನಾಯಕ ಮುಕುಂದ ರಾಮಸ್ವಾಮಿಯವರ ಪರಿಚಯವೂ ಆಗಿತ್ತು. ಈ ದೆಸೆಯಿಂದಲೆ ಲವ್ ಸೀಸನ್ಸ್ ಪಾತ್ರ ಸಿಕ್ಕಿತ್ತು, ನಟನಾ ರಂಗಶಾಲೆಯಲ್ಲಿ ಎಲ್ಲ ಪಟ್ಟುಗಳನ್ನು ಕಲಿತುಕೊಂಡಿದ್ದ ದಿಯಾ, ಆಡಿಷನ್ ಮೂಲಕ ಲವ್ ಸೀಸನ್ಸ್ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಸದ್ಯಕ್ಕೆ ಒಂದಷ್ಟು ಸಿನಿಮಾ ಆಫರುಗಳೂ ಅವರ ಮುಂದಿವೆ. ಇದೀಗ ಲವ್ ಸೀಸನ್ಸ್ ಬಿಡುಗಡೆಯ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಿರೋ ದಿಯಾಗೆ ತನ್ನ ಮೊದಲ ಚಿತ್ರ ದೊಡ್ಡ ಮಟ್ಟದಲ್ಲಿ ಯಶ ಕಾಣುತ್ತದೆಯೆಂಬ ತುಂಬು ನಂಬಿಕೆಯಿದೆ.
keywords: diyakeerthi, love seasons movie, sandalwood, kfi

