ಯುವ ನಿರ್ದೇಶಕ ಕೃತ್ವಿಕ್ ಚೊಚ್ಚಲ ನಿರ್ದೇಶನದ ಲವ್ ಸೀಸನ್ಸ್ ಚಿತ್ರದ ಹಾಡೀಗ ಸಂಗೀತ ಪ್ರೇಮಿಗಳೆಲ್ಲರನ್ನು ಸಾರಾಸಗಟಾಗಿ ಆವರಿಸಿಕೊಂಡಿದೆ. ಯಾವ ಸದ್ದುಗದ್ದಲವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ, ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಗೊಳಿಸಿತ್ತು. ಈ ಮೂಲಕ ಇದು ವಿಭಿನ್ನ ಪ್ರೇಮ ಕಥಾನಕವನ್ನು ಒಳಗೊಂಡಿರುವ ಚಿತ್ರವೆಂಬ ವಿಚಾರ ಸ್ಪಷ್ಟವಾಗಿಯೇ ಜಾಹೀರಾಗಿತ್ತು. ಈ ಟೀಸರ್ ಬಿಡುಗಡೆ ವೇದಿಕೆಯಿಂದಲೇ ಸದರಿ ಸಿನಿಮಾದ ಹಾಡುಗಳ ಬಗೆಗೊಂದು ಕುತೂಹಲ ಕೂಡಾ ಹೊಮ್ಮಿಕೊಂಡಿತ್ತು. ಇದೀಗ ಲವ್ ಸೀಸನ್ಸ್ ಚಿತ್ರದ ಮಳೆಯಾಗೋ ಮೊದಲೇ ಎಂಬ ಮೊದಲ ಲಿರಿಕಲ್ ವೀಡಿಯೋ ಸಾಂಗ್ ಎನ್.ಆರ್ ಸ್ಟುಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಗೊಂಡಿದೆ.
ಮಳೆಯಾಗೋ ಮೊದಲೇ ಕೊಡೆ ಹಿಡಿದು ಬರುವೆ, ನಗು ಮುಗಿವಾ ಮೊದಲೇ ಹೊಸ ಖುಷಿಯ ಕೊಡುವೆ ಎಂಬ ನವಿರಾದ ಸಾಹಿತ್ಯ ಬರೆದಿರುವವರು ಕಾಂತಾರಾ ಖ್ಯಾತಿಯ ಪ್ರಮೋದ್ ಮರವಂತೆ. ವೀರ್ ಸಮರ್ಥ್ ಸಂಗಿತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಗೀತೆಗೆ ಅರ್ಮಾನ್ ಮಲಿಕ್ ಮತ್ತು ಸರೆಗಮಪ ಖ್ಯಾತಿಯ ಪ್ರಜ್ಞಾ ಮರಾಠೆ ಧ್ವನಿಯಾಗಿದ್ದಾರೆ. ಈ ಇಬ್ಬರು ಪ್ರತಿಭಾನ್ವಿತ ಗಾಯಕರ ಕಂಠಸಿರಿಯಲ್ಲಿ ಮತ್ತಷ್ಟು ಮೋಹಕವಾಗಿರುವ ಈ ಹಾಡು ದಿನದಿಂದ ದಿನಕ್ಕೆ ಕೇಳುಗರ ಮನಸಿಗಿಳಿಯುತ್ತಿದೆ. ಈ ಮೂಲಕವೇ ಸೋಶಿಯಲ್ ಮೀಡಿಯಾ ತುಂಬೆಲ್ಲ ನಾನಾ ರೀತಿಯಲ್ಲಿ ಹರಿದಾಡುತ್ತಾ, ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.
Love Seasons Movie Teaserಪ್ರೇಕ್ಷಕರ ಮುಂದೆ ಕಣ್ತೆರೆಯಲಿದೆ ಪ್ರೇಮದ ಋತುಮಾನ!
ಬೇರೊಂದಷ್ಟು ಬಗೆಯ ಹಾಡುಗಳು ಅಬ್ಬರದ ಹಿಮ್ಮೇಳದೊಂದಿಗೆ ಬರುತ್ತವೆ. ಒಂದಷ್ಟು ದಿನ ಎಲ್ಲೆಡೆ ಹರಿದಾಡಿ ನಂತರ ಹೇಳ ಹೆಸರಿಲ್ಲದಂತೆ ಮರೆಯಾಗಿ ಬಿಡುತ್ತವೆ. ಆದರೆ, ಇಂಥಾ ನವಿರು ಶೈಲಿಯ ಹಾಡುಗಳದ್ದು ಬೇರೆಯದ್ದೇ ಪಥ. ಅವುಗಳ ಹಿನ್ನೆಲೆಯಲ್ಲಿ ಯಾವುದೇ ಅಬ್ಬರಗಳಿರೋದಿಲ್ಲ. ಆದರೆ ಮೆಲ್ಲಗೆ ಎದೆಗಿಳಿಯುತ್ತಾ ಅಕ್ಷರಶಃ ಆವರಿಸಿಕೊಳ್ಳುತ್ತವೆ. ವೀರ್ ಸಮರ್ಥ್ ಅಂಥಾ ನವಿರಾದ ಹಾಡುಗಳಿಗೆ ಹೆಸರಾಗಿರುವ ಸಂಗೀತ ನಿರ್ದೇಶಕ. ಈಗಾಗಲೇ ಒಂದಷ್ಟು ಎವರ್ಗ್ರೀನ್ ಹಾಡುಗಳನ್ನು ಕೊಟ್ಟಿರುವ ಅವರು, ಈ ಗೀತೆಯನ್ನೂ ಕೂಡಾ ಚೆಂದಗೆ ರೂಪಿಸಿದ್ದಾರೆ. ಈ ಮೂಲಕ ಇದನ್ನು ಮ್ಯೂಸಿಕಲ್ ಹಿಟ್ ಆಗಿಸುವ ನಿರ್ದೇಶಕ ಕೃತ್ವಿಕ್ ಕನಸಿಉಗೆ ಸಾಥ್ ಕೊಟ್ಟಿದ್ದಾರೆ.
ಎನ್.ಆರ್ ಸ್ಟುಡಿಯೋಸ್ ಬ್ಯಾನರ್ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ ಸಂಗೀತ ನಿದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.
keywords: love seasons, love seasons song, kruthvik, sanwalwood

