ಪ್ರೇಮವೆಂಬುದು ಸಿನಿಮಾ ಜಗತ್ತಿನ ಮಟ್ಟಿಗೆ ಎಂದಿಯೂ ಬೆರಗು ಕಳೆದುಕೊಳ್ಳದ ಮಾಯೆ. ಆಯಾ ಅನುಭವಕ್ಕೆ ತಾಜಾತನದಿಂದ ದಕ್ಕಿಬಿಡುವ ಪ್ರೇಮವೆಂಬ ಮಂತ್ರದಂಡ ಹೊಸಬರ ತಂಡದ ಕೈಗೆ ಸಿಕ್ಕರಂತೂ ಪ್ರೇಕ್ಷಕರಲ್ಲಿ ತಂತಾನೇ ಒಂದು ಕುತೂಹಲ ಮೂಡಿಕೊಳ್ಳುತ್ತೆ. ಪ್ರೇಮದ ಭೂಮಿಕೆಯಲ್ಲಿ ಅಂಥಾದ್ದೊಂದು ಬೆರಗಿನ ಕಥೆ ಹೊತ್ತ ಲವ್ ಸೀಸನ್ಸ್ ಚಿತ್ರದ ಮೂಲಕ ಪ್ರತಿಭಾನ್ವಿತ ಯುವ ಪಡೆಯೊಂದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಸದ್ದಿಲ್ಲದೆ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯ ಮೂಲಕ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ.
ರಂಗಭೂಮಿಯಲ್ಲಿ ಪಳಗಿಕೊಂಡು, ಕ್ಷತ್ರಿಯ, ಗುರುದೇವ ಹೊಯ್ಸಳ, ಬುದ್ಧಿವಂತ೨ ಮುಂತಾದ ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿರುವವರು ಕೃತ್ವಿಕ್. ಲವ್ ಸೀಸನ್ಸ್ ಮೂಲಕ ಕೃತ್ವಿಕ್ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸಾಮಾನ್ಯವಾಗಿ ಜಗತ್ತಿನಲ್ಲಿ ಅತ್ಯಂತ ದುಬಾರಿ ವಸ್ತು ಯಾವುದೆಂದು ಕೇಳಿದರೆ ಬಹುತೇಕರು ಚಿನ್ನ ಎಂಬ ಉತ್ತರ ಕೊಡುತ್ತಾರೆ. ಆದರೆ, ನಿಜವಾಗಿ ನಂಬಿಕೆ ಅನ್ನೋದೇ ಅತ್ಯಂತ ದುಬಾರಿ ವಸ್ತುವೆಂದು ಪ್ರತಿಪಾದಿಸಿರುವ ಕೃತ್ವಿಕ್, ಆ ಸೂಕ್ಷ್ಮದ ಭೂಮಿಕೆಯಲ್ಲಿಯೇ ಪ್ರೇಮ ಕಥನ ದೃಷ್ಯ ರೂಪ ಧರಿಸಿರೋದರ ಸುಳಿವು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಅತಿಥಿಯಾಗಿ ಹಾಜರಿದ್ದ, ಈ ಸಿನಿಮಾದಲ್ಲಿ ತಂದೆಯ ಪಾತ್ರ ನಿರ್ವಹಿಸಿರುವ ರಾಜೇಶ್ ನಟರಂಗ ಕೂಡಾ ಹೊಸಬರ ಈ ಪ್ರಯತ್ನಕ್ಕೆ ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.
ಈ ಚಿತ್ರದ ಮೂಲಕ ಸಿನಿಮಾ ಬಗ್ಗೆ ಅತೀವ ಪ್ರೇಮ ಹೊಂದಿರುವ ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಂದೆಯ ಹೆಸರುಳಿಸುವ ಸಲುವಾಗಿಯೇ ಎನ್.ಆರ್ ಸ್ಟುಡಿಯೋಸ್ ಬ್ಯಾನರ್ ಅನ್ನು ಮಂಜುನಾಥ್ ಅವರು ಸ್ಥಾಪಿಸಿದ್ದರಂತೆ. ಈ ಸಂಸ್ಥೆಯಿಂದ ಒಂದೊಳ್ಳೆ ಕಥೆಯ ಸಿನಿಮಾವನ್ನೇ ಮೊದಲು ನಿರ್ಮಾಣ ಮಾಡಬೇಕೆಂಬ ಬಯಕೆ ಹೊಂದಿದ್ದ ಅವರಿಗೆ ಅನೇಕ ನಿರ್ದೇಶಕರು ಕಥೆ ಹೇಳಿದ್ದರಂತೆ. ಅದ್ಯಾವುದೂ ಅಷ್ಟಾಗಿ ಇಷ್ಟವಾಗದೆ ಕಾದಿದ್ದವರ ಮುಂದೆ ಪ್ರತ್ಯಕ್ಷವಾದದ್ದು ಯುವ ನಿರ್ದೇಶಕ ಕೃತ್ವಿಕ್. ಸಾಮಾಜಿಕ ಮೌಲ್ಯವನ್ನು ಒಳಗೊಂಡಿರುವ, ಈ ಜನರೇಷನ್ನಿನ ಯುವಕರಿಗೆ ಹತ್ತಿರಾಗುತ್ತಲೇ ಎಲ್ಲರನ್ನೂ ಸೆಳೆಯುವ ಗುಣ ಹೊಂದಿರುವ ಈ ಕಥೆ ಬಹುವಾಗಿ ಇಷ್ಟವಾಗಿತ್ತಂತೆ. ಆ ಕಾರಣದಿಂದಲೇ ವಿದ್ಯುಕ್ತವಾಗಿ ಆರಂಭವಾಗಿದ್ದ ಲವ್ ಸೀಸನ್ಸ್ ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.
ಈ ಟೀಸರ್ ಬಿಡುಗಡೆ ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿ ಪ್ರತಿಭೆ, ಈ ಸಿನಿಮಾ ನಾಯಕ ಮುಕುಂದ ರಾಮಸ್ವಾಮಿ, ನಾಯಕಿಯರಾದ ದಿಯಾ ಕೀರ್ತಿ, ಚಂದನಾ ಗೌಡ ಮುಂತಾದವರು ತಮ್ಮ ಪಾತ್ರದ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎನ್.ಆರ್ ಸ್ಟುಡಿಯೋಸ್ ಬ್ಯಾನರ್ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇನ, ವೀರ್ ಸಮರ್ಥ್ ಸಂಗೀತ ಸಂಗೀತ ನಿದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.
keywords: love seasons movie, teaser, kruthvik, manjunath n r neeleri, sandalwood

