ಕಳೆದು ಹೋದ ಕಾಲಮಾನವೆಲ್ಲ ಮಬ್ಬು ಫೋಟೋಗಳ ಮೂಲಕ ಜೀವಂತಿಕೆ ಪಡೆಯೋ ಪುಳಕವೊಂದೀಗ ಅಗ್ಗದ ಭಾವವವಾಗಿ ಮಾರ್ಪಾಟುಗೊಂಡಿದೆ. ಬಹುಶಃ ಅದರ ಅಸಲೀ ಸ್ವಾದ ಎಂಬತ್ತು, ತೊಂಬತ್ತರ ದಶಕದ ಆಚೀಚಿನ ಜನರೇಷನ್ನಿಗೆ ಮಾತ್ರವೇ ದಕ್ಕಲು ಸಾಧ್ಯ. ಅಂಥಾದ್ದೊಂದು ಸೂಕ್ಷ್ಮ ಕಥನವನ್ನು ಪ್ರವೀಣ್ ಎಂ. ಪ್ರಭು ದೃಶ್ಯ ರೂಪಕ್ಕಿಳಿಸಿದ್ದಾರೆ. ಮೈಸೂರು ಮಹಾರಾಜರ ಕಾಲದ ನಂಟು ಹೊಂದಿರೋ ಈ ಕಥನ ಮೈಸೂರು ಸ್ಟುಡಿಯೋ ಎಂಬ ಶೀರ್ಷಿಕೆಯಡಿಯಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಅಣಿಗೊಳ್ಳುತ್ತಿದೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರುವ ಈ ಸಿನಿಮಾದ ಪೋಸ್ಟರ್ ಗತವೈಭವದ ಘಮಲು ಹೊದ್ದುಕೊಂಡು ಸಿನಿಮಾಸಕ್ತರನ್ನೆಲ್ಲ ಸೆಳೆದುಕೊಳ್ಳಲಾರಂಭಿಸಿದೆ!
ಸರಿಸುಮಾರು ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಸಿನಿಮಾ ಛಾಯಾಗ್ರಾಹಕರಾಗಿದ್ದ ಪ್ರವೀಣ್ ಎಂ ಪ್ರಭು ಈ ಚಿತ್ರದ ಮೂಲಕ ನಿರ್ದೇಶಕನಾಗಿದ್ದಾರೆ. ಈಗಾಲೇ ಒಂದೆರಡು ಶಾರ್ಟ್ ಮೂವಿಗಳನ್ನು ನಿರ್ದೇಶನ ಮಾಡುವ ಮೂಲಕ ತಾಲೀಮು ನಡೆಸಿದ್ದ ಪ್ರವೀಣ್, ಅದರಲ್ಲೊಂದಕ್ಕೆ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಅದೇ ಕಿರುಚಿತ್ರದ ಕಥೆಯನ್ನು ಮತ್ತಷ್ಟು ಹದಗೊಳಿಸಿ ಮೈಸೂರ್ ಸ್ಟುಡಿಯೋ ಎಂಬ ಸಿನಿಮಾ ರೂಪಿಸಿದ್ದಾರೆ. ವಿಶೆಷವೆಂದರೆ, ಮೊದಲ ಹೆಜ್ಜೆಯಲ್ಲಿಯೇ ಸಂಕೀರ್ಣವಾದ, ಸವಾಲಿನ ಕಥನವನ್ನೇ ಕೈಗೆತ್ತಿಕೊಂಡಿದ್ದಾರೆ. ಒಟ್ಟಾರೆ ಸಿನಿಮಾದ ಆಂತರ್ಯವನ್ನು ತುಂಬಿಕೊಂಡಂಥಾ ಸದರಿ ಪೋಸ್ಟರ್ ಮೂಲಕ ಮೈಸೂರು ಸ್ಟುಡಿಯೋ ಪ್ರೇಕ್ಷಕರನ್ನು ತಲುಪಿಕೊಂಡಿದೆ.

ಮತ್ಸ್ಯಗಂಧ, ರಂಕಲ್ ರಾಟೆ ಮುಂತಾದ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದ ಪ್ರವೀಣ್ ಎಂ ಪ್ರಭು ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಅವರ ಕಸುಬುದಾರಿಕೆಯ ಬಗ್ಗೆ ಪ್ರೇಕ್ಷಕರೇ ಮೆಚ್ಚಿ ಕೊಂಡಾಡಿದ್ದರು. ಅಂಥಾ ಪ್ರೋತ್ಸಾಹಗಳಿಂದಲೇ ಛಾಯಾಗ್ರಾಹಕರಾಗಿ ಚಾಲ್ತಿಯಲ್ಲಿರುವಾಗಲೇ, ನಿರ್ದೇಶಕನಾಗಿಯೂ ರೂಪಾಂತರಗೊಂಡಿದ್ದಾರೆ. ಅಂದಹಾಗೆ, ಈ ಸಿನಿಮಾವೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಇದೀಗ ಹಾಡುಗಳನ್ನು ರೂಪಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮೈಸೂರು ಸ್ಟುಡಿಯೋ ಕಡೆಯಿಂದ ಮತ್ತೊಂದಷ್ಟು ವಿಚಾರಗಳು ಜಾಹೀರಾಗಲಿವೆ.
ಹೈ೫ ಸ್ಟುಡಿಯೋಸ್, ಪಿಕೆ ಪಿಕ್ಚರ್ಸ್ ಮತ್ತು ಆರ್ಡಿ ಫಿಲ್ಮ್ಸ್ ಅಂಡ್ ಮೀಡಿಯಾ ಬ್ಯಾನರ್ನಡಿಯಲ್ಲಿ ಪ್ರವೀಣ್ ಕವಿತಾ, ಸತ್ಯ ಶ್ರೀನಿವಾಸನ್, ದಿವಾಕರ್ ದಯಾಳ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಎಂ. ಪ್ರಭು ಸಹನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ರಿಷಿಕೇಶ್, ಧನಂಜಯ್, ಯುದಿತ್ ಶೆಟ್ಟಿ, ದಿವ್ಯಶ್ರೀ, ಗೌರವ್ ಮಹಾಂತೇಶ್ ಹಿರೇಮಠ, ಮಾಸ್ಟರ್ ಪೀಸ್ ಅನಂತ್, ಮೂಗು ಸುರೇಶ್, ಡ್ಯಾನಿ ಕಣಿಕರಾಜ್ ಮುಂತಾದವರ ತಾರಾಗಣವಿರುವ ಈ ಚಿತ್ರಕ್ಕೆ ಲಿಂಗರಾಜ್ ಇತಿಹಾಸ್, ಅವಿನಾಶ್ ಕಳಸ, ಪ್ರವೀಣ್ ಎಂ. ಪ್ರಭು ಸಂಭಾಷಣೆ ಮತ್ತು ಅಜಿತ್ ಕೇಶವ ಸಾಹಿತ್ಯ, ಕೆ. ಯೇಸು ಸಂಕಲನವಿದೆ. ಎಲ್ಟು ಮುತ್ತ, ಹುಬ್ಳಿ ಹಂಟರ್ಸ್ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಪ್ರಸನ್ನ ಕೇಶವ ಕೆ.ಎಸ್ ಸಂಗೀತ ನಿರ್ದೇಶನ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಖುದ್ದು ಪ್ರವೀಣ್ ಎಂ. ಪ್ರಭು ಅವರೇ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಿಕ್ಕಿ, ರಾಮ್, ಡೆನಿ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.

