ಬಹುಪಾಲು ಸಿನಿಮಾ ಮಂದಿ ಜನಪ್ರಿಯ ಅಲೆಯ ಸೆಳವಿಗೆ ಸಿಕ್ಕಂತೆ ಹೆಜ್ಜೆಯಿಡುತ್ತಿರುವ ಹೊತ್ತಿನಲ್ಲಿಯೇ, ತನ್ನದೇ ಆದೊಂದು ಪಥ ರೂಪಿಸಿಕೊಂಡು, ಅದರಲ್ಲಿಯೇ ಧ್ಯಾನಸ್ಥನಂತೆ ಮುಂದುವರೆಯೋದಿದೆಯಲ್ಲಾ? ಅದು ನಿರ್ದೇಶಕನೊಬ್ಬನ ಪಾಲಿನ ಅತಿ ದೊಡ್ಡ ಸವಾಲು. ಅದಕ್ಕೆ ಎದೆಗೊಟ್ಟು ಜಯಿಸಿಕೊಂಡ ಒಂದಷ್ಟು ನಿರ್ದೇಸಕರು ಕನ್ನಡದಲ್ಲಿದ್ದಾರೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಎಲ್ಲ ಲಕ್ಷಣಗಳನ್ನು, ಕಸುವನ್ನು ಹೊಂದಿರುವವರು ಸಿದ್ದು ಪೂರ್ಣಚಂದ್ರ. ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಹಿಳಾ ಪ್ರಧಾನ ಚಿತ್ರ `ಬ್ರಹ್ಮ ಕಮಲ’ವೀಗ ಬಿಡುಗಡೆಗೊಂಡಿದೆ. ಕೌಟುಂಬಿಕ ಪರಿಧಿಯಲ್ಲಿ ಇಂಗಿ ಹೋಗಿರುವ, ಈವತ್ತಿಗೂ ಇಂಗುತ್ತಿರುವ ಹೆಣ್ಣುಬ್ಬಳ ಒಡಲ ಮರ್ಮರದ ಕಥನದೊಂದಿಗೆ ನೋಡುಗರನ್ನೆಲ್ಲ ಕಾಡುವಂತೆ ಈ ಸಿನಿಮಾವನ್ನು ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ.
ಕೌಟುಂಬಿಕ ವಾತಾವರಣದಲ್ಲಿ ಹೆಣ್ಣಿನ ವಿರುದ್ಧ ನಡೆಯೋ ತಣ್ಣಗಿನ ಕ್ರೌರ್ಯವನ್ನು ಅಷ್ಟೇ ತಣ್ಣಗೆ, ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ಸಿದ್ದು ಪೂರ್ಣಚಂದ್ರ ಗೆದ್ದಿದ್ದಾರೆ. ಯಾಕೆಂದರೆ, ಒಂದಷ್ಟು ಏಕತಾನತೆಯಿಂದ ತೆರೆದುಕೊಲ್ಳುವ ಈ ಸಿನಿಮಾ, ನಂತರದಲ್ಲಿ ಪ್ರತೀ ದೃಶ್ಯಗಳೂ ಪರದೆ ದಾಟಿ ನೋಡುಗರ ಮನಸಿಗಿಳಿದು ಚಲಿಸುವಂಥಾ ಸಮ್ಮೋಹಕ ಗುಣದೊಂದಿಗೆ ಬೆರಗು ಮೂಡಿಸುತ್ತೆ. ಯಾವ ಹಿನ್ನೆಲೆ ಸಂಗೀತದ ಅಬ್ಬರ, ಗಿಮಿಕ್ಕುಗಳೂ ಇಲ್ಲದೆ ನೋಡುಗರನ್ನು ದಿಗಿಲುಗೊಳಿಸುವ, ತುದಿ ಸೀಟಿಗೆ ತಂದು ಕೂರಿಸುವಂಥಾ ಕುತೂಹಲ ಮೂಡಿಸುವ ಮೂಲಕ ನಿರ್ದೇಶನದ ಕುಸುರಿ ಗಮನ ಸೆಳೆಯುತ್ತದೆ.
ಹೆತ್ತವರ ವಿರೋಧವನ್ನೂ ಲೆಕ್ಕಿಸದೆ ಪ್ರೀತಿಸಿ ಮದುವೆಯಾದ ಹೆಣ್ಣೊಬ್ಬಳು ಮಗುವೊಂದು ಮಡಿಲು ತುಂಬದೆ ಪಡುವ ಯಾತನೆ, ಬೇರೆಯವರ ಬದುಕನ್ನ ಹೀಗಳೆಯುವ ಈ ಸಮಾಜದ ವಿಕೃತಿ, ತನ್ನ ದೋಷಕ್ಕೂ ಅಹಮ್ಮಿಕೆ ಬೆರೆಸಿ ಹೆಣ್ಣಿನ ಮೇಲೆ ರಾಚುವ ಪುರುಷಹಂಕಾರದ ಜೊತೆ ಜೊತೆಗೇ, ನಮ್ಮ ನಡುವಿನ ಮತ್ತೊಂದು ಸ್ಥರದ ಬದುಕನ್ನೂ ಕೂಡಾ ನಿರ್ದೇಶಕರು ಕಟ್ಟಿ ಕೊಟ್ಟಿರುವ ರೀತಿ ನೋಡುಗರ ಮೆಚ್ಚುಗೆ ಗಳಿಸಿಕೊಳ್ಳುತ್ತದೆ. ಇಲ್ಲಿ ಅದ್ವಿತಿ ಶೆಟ್ಟಿ ಮಕ್ಕಳಾಗದ ಕೊರಗು ತುಂಬಿಕೊಂಡ ಅಪೇಕ್ಷಾ ಎಂಬ ಪಾತ್ರವನ್ನು ಅಕ್ಷರಶಃ ಜೀವಿಸಿದ್ದಾರೆ. ಸ್ವತಃ ಸಿದ್ದು ಪೂರ್ಣಚಂದ್ರ ಪತಿಯ ಪಾತ್ರವನ್ನು ಆವಾಹಿಸಿಕೊಂಡಂತೆ ನಟಿಸಿದ್ದಾರೆ.
ಲೋಕೇಂದ್ರ ಸೂರ್ಯ ನಿರ್ವಹಿಸಿರುವ ಪಾತ್ರವಂತೂ ನಾನಾ ಆಯಾಮಗಳಲ್ಲಿ ಕಾಡುವಂತಿದೆ. ಆಟೋ ನಾಗರಾಜ್ ಪಾತ್ರವೂ ಒಳಗಿಳಿಯುತ್ತದೆ. ರುತು ಚೈತ್ರ ತನ್ನ ಪಾತ್ರ ಪೋಷಣೆ ಮಾಡಿದ ರೀತಿ ಕೂಡಾ ಬ್ರಹ್ಮ ಕಮಲದ ಶಕ್ತಿಯಾಗಿ ಗೋಚರಿಸುತ್ತೆ. ನಿಖರವಾಗಿ ಹೇಳಬೇಕೆಂದರೆ, ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಚಿತ್ರವನ್ನು ತಮ್ಮದೇ ಪಥದಲ್ಲಿ, ಯಾವ ಅಬ್ಬರವೂ ಇಲ್ಲದೆ, ಕಮರ್ಶಿಯಲ್ ಸಿನಿಮಾಗಳಿಗೆ ಸರಿಸಮನಾಗಿ ರೂಪಿಸಿದ್ದಾರೆ. ಇಲ್ಲಿನ ಕಥೆ, ಪಾತ್ರಗಳ ಏರಿಳಿತ ಮತ್ತು ಹೆಣ್ಣು ಜೀವಗಳ ಒಡಲ ಮರ್ಮರಗಳೆಲ್ಲವೂ ನೇರವಾಗಿ ನೋಡುಗರ ಎದೆಗೆ ತಾಕುತ್ತದೆ. ಕಡೆಗೂ ಒಂದೊಳ್ಳೆ ಸಿನಿಮಾ ನೋಡಿದ ಅನುಭೂತಿಯಂತೂ ಖಂಡಿತವಾಗಿಯೂ ಉಳಿದುಕೊಳ್ಳುತ್ತದೆ.
ಸಿದ್ದು ಪೂರ್ಣಚಂದ್ರ ಪ್ರೇಕ್ಷಕರು ಊಹಿಸಲಾರದ ತಿರುವುಗಳನ್ನು ಸಹಜವಾಗಿಯೇ ಕಟ್ಟಿ ಕೊಡುವ ಮೂಲಕ ಪ್ರತೀ ದೃಶ್ಯಗಳನ್ನೂ ಶಶಕ್ತವಾಗಿ ಕಟ್ಟಿ ಕೊಟ್ಟಿದ್ದಾರೆ. ಒಂದೆಡೆ ಖಾಲಿ ಮಡಿಲ ಒಡಲ ತುಮುಲ, ಮತ್ತೊಂದೆಡೆ ಮಡಿಲು ತುಂಬಿದ ಮಗುವನ್ನು ಉಳಿಸಿಕೊಳ್ಳಲಾರದ ಕರುಳ ಸಂಕಟ. ಐಪಿಎಲ್ ಹುಚ್ಚಿನ ವೆಲ್ಡರ್, ಮನಸು ಮುರಿದುಕೊಂಡ ಆಟೋ ಡ್ರೈವರ್, ನಿರ್ಜನ ಪ್ರದೇಶದ ಮುರುಕು ಜೋಪಡಿ, ಘಾಸಿಕೊಂಡ ಮನಸು ಮತ್ತು ಮಸಣಗಳ ಮುಖಾಮುಖಿ ಮತ್ತು ಅಹಮ್ಮಿಕೆಯೆಲ್ಲವೂ ಆರ್ಧ್ರ ಭಾವಗಳ ಮುಂದೆ ಮಂಡಿಯೂರುವ, ಕ್ರೌರ್ಯವೂ ಕಣ್ಣೀರಾಗುವ ಕಲಾತ್ಮಕ ಸ್ಪರ್ಶದೊಂದಿಗೆ ಬ್ರಹ್ಮ ಕಮಲ ಮನಸಿಗಿಳಿಯುತ್ತದೆ.
ಇಲ್ಲಿ ನಿರ್ದೇಶಕ ಸಿದ್ದು ಪೂರ್ಣಚಂದ್ರ ನಮ್ಮ ಸುತ್ತ ಘಟಿಸುವ ಕಥಾ ವಸ್ತುವೊಂದನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸಿದ ರೀತಿಯೇ ಬೆರಗು ಮೂಡಿಸುತ್ತೆ. ಅದೆಷ್ಟೋ ಹೆಣ್ಣುಮಕ್ಕಳನ್ನು ನಾಲ್ಕು ಗೋಡೆಗಳ ನಡುವೆ ನರಳಿಸಿದ ಸಂಕಟವೊಂದಕ್ಕೆ ನಿರ್ದೇಶಕರು ದೃಶ್ಯಗಳ ಮೂಲಕ ಮಾತು ಬರಿಸಿದ್ದಾರೆ. ಅಹಂಕಾರಜನ್ಯ ಕ್ರೌರ್ಯ ಹೊತ್ತ ಮನಸುಗಳೂ ಕರಗುವ ರೂಪಕದೊಂದಿಗೆ ಅತ್ಯಂತ ಕಲಾತ್ಮಕವಾಗಿಯೇ ಈ ಸಮಾಜಕ್ಕೆ ಸಂದೇಶವೊಂದನ್ನು ದಾಟಿಸಿದ್ದಾರೆ. ಕಥೆ, ನಿರೂಪಣೆ ಸೇರಿದಂತೆ ಎಲ್ಲ ಬಗೆಯಲ್ಲಿಯೂ ಭಿನ್ನವಾಗಿ ನಿಲ್ಲುವ ಬ್ರಹ್ಮ ಕಮಲ, ಯಾವ ಅಬ್ಬರವೂ ಇಲ್ಲದೆ, ಯಾವ ಕಮರ್ಶಿಯಲ್ ಸಿನಿಮಾಗಳಿಗೂ ಕಡಿಮೆಯಿಲ್ಲದಂಥಾ ಅನುಭೂತಿಯೊಂದನ್ನು ನೋಡುಗರನ್ನು ತಾಕುತ್ತದೆ. ಈ ಮೂಲಕ ಈ ವರ್ಷದ ಅತ್ಯಪರೂಪದ ಚಿತ್ರವಾಗಿ ಬ್ರಹ್ಮ ಕಮಲ ನಿಸ್ಸಂದೇಹವಾಗಿಯೂ ದಾಖಲಾಗುತ್ತದೆ. ಇದು ಕುಟುಂಬ ಸಮೇತರಾಗಿ ಸಿನಿಮಾ ಮಂದಿರಕ್ಕೆ ತೆರಳಿ ನೋಡಬೇಕಾದ ಸಿನಿಮಾ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ…
keywods: brahma kamala, siddu poornachandra, cinishodha review

