ಪ್ರಯೋಗಾತ್ಮಕ ಸಿನಿಮಾಗಳು ಹಲವಾರು ಸವಾಲುಗಳಿಗೆ ಎದೆಗೊಡಬೇಕಾದ ಸಂದರ್ಭಗಳು ಸೃಷ್ಟಿಯಾಗೋದು ನಿಜ. ಆದರೆ, ಅಂಥಾ ಸಿನಿಮಾಗಳನ್ನು ಅತೀವ ಪ್ರೀತಿಯಿಂದ ಕೈ ಹಿಡಿಯಬಲ್ಲ ಸದಭಿರುಚಿಯ ಪ್ರೇಕ್ಷಕ ವರ್ಗ ನಮ್ಮಲ್ಲಿದೆ ಎಂಬುದೂ ಅಷ್ಟೇ ನಿಜ. ಈ ಕಾರಣದಿಂದಲೇ ಸಿದ್ಧಸೂತ್ರಗಳನ್ನು ಮೀರಿಕೊಂಡ ಅನೇಕ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಸಿನಿಮಾ ದಾರಿ ಯಾವುದಯ್ಯಾ ವೈಕುಂಟಕೆ. ಈ ಚಿತ್ರದ ಮೂಲಕ ಸಿದ್ದು ಪೂರ್ಣಚಂದ್ರ ನಿರ್ದೇಶಕರಾಗಿ ತಮ್ಮದೇ ಛಾಪು ಮೂಡಿಸಿದ್ದೀಗ ಇತಿಹಾಸ. ಇದೀಗ ಸಿದ್ದು ಪೂರ್ಣಚಂದ್ರ ಬ್ರಹ್ಮ ಕಮಲ ಎಂಬ ಮತ್ತೊಂದು ಸೂಕ್ಷ್ಮ ಕಥಾನಕಕ್ಕೆ ದೃಶ್ಯ ರೂಪ ಕೊಟ್ಟಿದ್ದಾರೆ. ಈ ವಾರ ಅಂದರೆ, ಆಗಸ್ಟ್ 21ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
ಇತ್ತೀಚೆಗಷ್ಟೇ ಬ್ರಹ್ಮಕಮಲ ಚಿತ್ರ ಟ್ರೈಲರ್ ಮೂಲಕ ವ್ಯಾಪಕವಾಗಿ ಸುದ್ದಿಯಲ್ಲಿತ್ತು. ಒಂದು ಸದಭಿರುಚಿಯ ಸಿನಿಮಾ ಆ ಪರಿಯಾಗಿ ಸದ್ದು ಮಾಡಿದ್ದದ್ದು ಅದರೊಳಗಿರೋ ಕಂಟೆಂಟಿನ ಕಸುವಿನಿಂದ ಮಾತ್ರ. ಈಗಾಗಲೇ ಈ ಚಿತ್ರ ಹಲವಾರು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿಕೊಂಡಿತ್ತು. ಪ್ರೇಕ್ಷಕರ ಬೇಡಿಕೆಯ ಮೇರೆಗೆ ಹಲವಾರು ಬಾರಿ ಪ್ರದರ್ಶನಗೊಳ್ಳುವ ಮೂಲಕವೂ ಗಮನ ಸೆಳೆದಿತ್ತು. ಅದು ಒಟ್ಟಾರೆ ಸಿನಿಮಾ ಮೂಡಿ ಬಂದಿರುವ ರೀತಿಗೊಂದು ಉದಾಹರಣೆಯಷ್ಟೆ. ಇಂಥಾ ಸಿನಿಮಾ ಇದೀಗ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದರೆ, ಸಹಜವಾಗಿಯೇ ಅದರತ್ತ ಕುತೂಹಲ ಮೂಡಿಕೊಳ್ಳುತ್ತದೆ. ಇದೀಗ ಬ್ರಹ್ಮಕಮಲದ ಸುತ್ತಲೂ ಅಂಥಾದ್ದೇ ಗಾಢ ಕೌತುಕ ಮೂಡಿಕೊಂಡಿದೆ.

ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿರುವ ಈ ಸಿನಿಮಾ ಪೂರ್ಣಚಂದ್ರ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಅದ್ವಿತಿ ಶೆಟ್ಟಿ, ಋತು ಚೈತ್ರ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾಹುತ್, ಪ್ರಮೀಳಾ ಸುಬ್ರಮಣ್ಯ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಲೋಕೇಂದ್ರ ಸೂರ್ಯ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ, ದೀಪು ಸಂಕಲನ, ನಾಗರತ್ನ ಕೆ.ಹೆಚ್ ನಿರ್ಮಾಣ ನಿರ್ವಹಣೆಯಲ್ಲಿ ಬ್ರಹ್ಮಕಮಲ ರೂಪುಗೊಂಡಿದೆ. ಪುಟ್ಟರಾಜು ಮತ್ತು ಪ್ರಮೀಳಾ ಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ.
keywords: brahma kamala movie, siddu poornachandra

