ಜನಪ್ರಿಯ ಅಲೆಗಳ ಭರಾಟೆಯ ನಡುವೆ ಒಂದಷ್ಟು ಪ್ರಯೋಗಾತ್ಮಕ ಪಲ್ಲಟಗಳು ಜರುಗದಿದ್ದರೆ ಸಿನಿಮಾ ರಂಗ ನಿಂತ ನೀರಿನಂತಾಗಿ ಬಿಡುತ್ತದೆ. ಅಂಥಾದ್ದೊಂದು ಹೊಸಾ ಹರಿವನ್ನು ಸಾಧ್ಯವಾಗಿಸೋ ಛಾತಿಯಿರೋದು ಹೊಸಾ ತಂಡಗಳಿಗೆ ಮಾತ್ರ. ಅಂಥಾದ್ದೊಂದು ಹೊಸಾ ಹಾದಿಯಲ್ಲಿ ರೂಪುಗೊಂಡಿರುವ, ವಿಮಲ್ ರಾಜ್ ಎನ್ ನಿರ್ದೇಶನದ `A DATE’ ಚಿತ್ರವೀಗ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡು ಬಿಡುಗಡೆಗೆ ಅಣಿಗೊಂಡಿದೆ. ಇದೇ ಹೊತ್ತಿನಲ್ಲಿ ಬ್ಯಾಡ್ ಗೈ ಆಂಥಮ್ ಸಾಂಗ್ ಶೀರ್ಷಿಕೆಯ ಯುವ ಆವೇಗದ ಹಾಡೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ರ್ಯಾಪ್ ಶೈಲಿಯ ಹಾಡುಗಳಿಗೆ ಹುಚ್ಚೆದ್ದು ತೆರೆದುಕೊಳ್ಳುವ ಯುವ ಸಮುದಾಯದ ಸಂಖ್ಯೆ ಇದೀಗ ಹೆಚ್ಚಾಗಿದೆ. ಅಂಥಾ ಕೇಳುಗರನ್ನು ಮಾತ್ರವಲ್ಲದೇ, ಸಂಗೀತಾಸಕ್ತರನ್ನೆಲ್ಲ ಸೆಳೆಯುವ ಶೈಲಿಯಲ್ಲಿ ಸದರಿ ಹಾಡು ಮೂಡಿ ಬಂದಿದೆ. ಈ ಹಾಡಿಗೆ ಸುಜನಿತ್ ಶೆಟ್ಟಿ ಹಾಗೂ ವಿಮಲ್ ರಾಜ್ ಎನ್ ಸಾಹಿತ್ಯ ಬರೆದಿದ್ದಾರೆ. ಮೋಕ್ಷ ಬೀಟ್ಸ್ ಸಂಗೀತ ಸಂಯೋಜನೆಯಿರುವ ಈ ಹಾಡಿನೊಂದಿಗೆ `A DATE’ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಈಗಾಗಲೇ ಇದೊಂದು ಭಿನ್ನ ಕಥೆ ಹೊಂದಿರೋ ಸಿನಿಮಾವಾಗಿ ಪ್ರೇಕ್ಷಕರ ವಲಯದಲ್ಲೊಂದು ಕುತೂಹಲ ಮೂಡಿಕೊಂಡಿದೆ. ಈ ಹಾಡು ಅದನ್ನು ಮತ್ತಷ್ಟು ತೀವ್ರಗೊಳಿಸುವಲ್ಲಿ ಸಫಲವಾಗಿದೆ.

ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. ಅಂಥಾ ಕಿರುಚಿತ್ರಗಳಲ್ಲಿ ಅನೇಕವುಗಳು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿಕೊಂಡಿವೆ. ಹೀಗೆ ಕಿರುಚಿತ್ರಗಳ ಮೂಲಕ ತಮ್ಮೊಳಗಿನ ನಿರ್ದೇಶನದ ಕಸುವನ್ನು ಒರೆಗೆಹಚ್ಚಿದ್ದ ವಿಮಲ್ ರಾಜ್ ನಿರ್ದೇಶನದ ಚೊಚ್ಚಲ ಚಿತ್ರ “A DATE’ ಇಲ್ಲಿ ಯುವ ಆವೇಗದ ಕಥೆಯಿದೆ. ಉತ್ತರದ ಹುಡುಗಿ ಮತ್ತು ದಕ್ಷಿಣದ ಹುಡುಗನ ನಡುವೆ ಬೆಂಗಳೂರಿನ ಭೂಮಿಕೆಯಲ್ಲಿ ಕಥೆಯೊಂದು ಗರಿಬಿಚ್ಚಿಕೊಳ್ಳುತ್ತದೆಯಂತೆ. ರೊಮ್ಯಾಮ್ಸ್ ಡ್ರಾಮಾ ಜಾನರಿಗೊಳಪಡುವ ಈ ಸಿನಿಮಾದಲ್ಲಿ ಭಯ, ಕುತೂಹಲ, ಹಿಂಜರಿಕೆಗಳ ಮಿಶ್ರ ಭಾವದೊಂದಿಗೆ ಭೇಟಿಯಾಗೋ ಎರಡು ಜೀವಗಳ ಹಿನ್ನೆಲೆಯಲ್ಲಿ, ಪ್ರಸ್ತುತ ಬೆಂಗಳೂರಿನ ಸನ್ನಿವೇಶಗಳನ್ನು ಒಳಗೊಂಡಂತೆ ಕಥೆ ತೆರೆದುಕೊಳ್ಳುತ್ತದೆ. ಸುಜನಿತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈ ನಾಯಕ ನಾಯಕಿಯರಾಗಿ ನಟಿಸಿದ್ದಾರೆ.
ವಿಶೇಷವೆಂದರೆ, ಈ ಸಿನಿಮಾ ಎರಡು ಪಾತ್ರಗಳ ಸುತ್ತಾ ಚಲಿಸುತ್ತೆ. ನಿರ್ದೇಶಕರು ಪ್ರತೀ ದೃಶ್ಯಗಳೂ ಕೂಡಾ ಅತ್ಯಂತ ನೈಜವಾಗಿ ಮೂಡಿ ಬರಬೇಕೆಂಬ ಇರಾದೆಯಿಂದ ಬೆಂಗಳೂರಿನ ಐವತ್ತೈದಕ್ಕೂ ಹೆಚ್ಚು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಇದರ ಭಾಗವಾಗಿಯೇ ಬೆಂಗಳೂರು ಕೂಡಾ ಚಿತ್ರದ ಪ್ರಮುಖ ಪಾತ್ರವೊಂದರಂತೆ ಮೂಡಿಬಂದಿದೆ. ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಬ್ಯಾನರ್ನಡಿ ಸಮಾನ ಮನಸ್ಕರ ತಂಡ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಮೋಕ್ಷ ಬೀಟ್ಸ್ ಸಂಗೀತ, ವಡ್ಡೆ ದೇವೇಂದ್ರ ರೆಡ್ಡಿ ಛಾಯಾಗ್ರಹಣ, ವಿಮಲ್ ರಾಜ್ ಎನ್ ಸಂಕಲನ ಹಾಗೂ ಸುಜನಿತ್ ಶೆಟ್ಟಿ ಮತ್ತು ವಿಮಲ್ ರಾಜ್ ಎನ್ ಸಾಹಿತ್ಯವಿದೆ. ಇಷ್ಟರಲ್ಲಿಯೇ `A DATE’ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.
keywords: A DATE movie, vimalraj n, sandalwood

