ಯುವ ನಟರನ್ನೇ ನಾಚಿಸುವಂಥಾ ಎನರ್ಜಿಯೊಂದಿಗೆ ನಾನಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಸಾಮಾನ್ಯವಾಗಿ, ಅದೆಂಥಾದ್ದೇ ಸ್ಟಾರ್ ನಟರ ವೃತ್ತಿ ಬದುಕಿನಲ್ಲಾದರೂ ಒಂದಷ್ಟು ಶೂನ್ಯ ಪರ್ವ ಇದ್ದೇ ಇರುತ್ತೆ. ಆದರೆ, ಶಿವಣ್ಣನ ವಿಚಾರದಲ್ಲಿ ಸೋಲಾದರೂ, ಗೆಲುವಾದರೂ ವೃತ್ತಿ ಬದುಕಿನ ಲಯ ತಪ್ಪುವುದಿಲ್ಲ. ಈಗೊಂದು ಐದಾರು ವರ್ಷಗಳಿಂದೀಚೆಗಂತೂ ಶಿವರಾಜ್ ಕುಮಾರ್ ಪಾಲಿನ ಪರ್ವ ಕಾಲವೊಂದು ಚಾಲ್ತಿಯಲ್ಲಿದೆ. ಕನ್ನಡದಲ್ಲಿ ಮಾತ್ರವಲ್ಲದೇ, ಪರಭಾಷೆಗಳಲ್ಲಿಯೂ ಅವರ ಹವಾ ಹಬ್ಬಿಕೊಂಡಿದೆ. ಜೈಲರ್ ಸರಣಿಯಲ್ಲಿ ರಜನೀಕಾಂತ್ ಜೊತೆ ನಟಿಸಿ ಸೈ ಅನ್ನಿಸಿಕೊಂಡಿದ್ದ ಶಿವಣ್ಣ ಇದೀಗ ತಲಾ ಅಜಿತ್ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸಲು ತಯಾರಾಗಿದ್ದಾರೆ.
ರೇಸಿಂಗ್ನಲ್ಲಿ ಬ್ಯುಸಿಯಾಗಿರೋ ತಲಾ ಅಜಿತ್ ಅದಿಕ್ ರವಿಚಂದ್ರನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೊಂದು ಸುದ್ದಿ ಬಹು ಹಿಂದಿನಿಂದಲೇ ಹಬ್ಬಿಕೊಂಡಿತ್ತು. ರೂಮರಿನ ರೂಪದಲ್ಲಿದ್ದ ಆ ಸುದ್ದಿಯೀಗ ಅಧಿಕೃತಗೊಂಡಿದೆ; ಡೇರ್ ಡೆವಿಲ್ ಎಂಬ ಶೀರ್ಷಿಕೆ ನಿಗಧಿಯಾಗುವ ಮೂಲಕ. ಇದೀಗ ಸದ್ದಿಲ್ಲದೇ ಈ ಸಿನಿಮಾದ ತಾರಾಗಣದ ಆಯ್ಕೆರ ಕಾರ್ಯ ನಡೆಯುತ್ತಿದೆ. ಅದಾಗಲೇ ಬಹುಮುಖ್ಯ ಪಾತ್ರಗಳಿಗೆ ನಟನಟಿಯರನ್ನು ನಿಕ್ಕಿಯಾಗಿಸಲಾಗಿದೆ. ಹೀಗೆ ತಾರಾಗಣದ ಆಯ್ಕೆಡಯ ಮೊದಲ ಭಾಗದಲ್ಲಿಯೇ ಖಡಕ್ ವಿಲನ್ ಪಾತ್ರಕ್ಕೆ ಶಿವರಾಜ್ ಕುಮಾರ್ ಒಪ್ಪಿಕೊಂಡಿದ್ದಾರೆ. ಈಗಾಗಲೇ ಅದಿಕ್ ರವಿಚಂದ್ರನ್ ಆ ಪಾತ್ರವನ್ನು ಶಿವಣ್ಣನಿಗೆ ವಿವರಿಸಿದ್ದಾರಂತೆ.
ಡೇರ್ ಡೆವಿಲ್ ಚಿತ್ರದ ಖಳನ ಪಾತ್ರಕ್ಕೆ ಶಿವರಾಜ್ ಕುಮಾರ್ ಆಯ್ಕೆಯಾಗಿರೋ ವಿಚಾರವನ್ನು ಖುದ್ದು ಅಜಿತ್ ಮ್ಯಾನೇಜರ್ ಸುರೇಶ್ಚಂದ್ರ ಹೇಳಿಕೊಂಡಿದ್ದಾರೆ. ಈ ಮೂಲಕ ಸದರಿ ಪಾತ್ರದ ಒಂದಷ್ಟು ಚಹರೆಗಳೂ ಕೂಡಾ ಜಾಹೀರಾಗಿವೆ. ಅದು ಅತ್ಯಂತ ಎನರ್ಜಿಟಿಕ್ ಪಾತ್ರ. ಆರಂಭದಲ್ಲಿ ನಿರ್ದೇಶಕರು ಅದಕ್ಕಾಗಿ ಒಂದಷ್ಟು ನಟರ ಹೆರಸರುಗಳನ್ನು ಪಟ್ಟಿ ಮಾಡಿಕೊಂಡಿದ್ದರಂತೆ. ಆದರೆ, ಅಜಿತ್ಗೆ ಶಿವಣ್ಣನ ಮೇಲೆ, ಅವರ ನಟನೆಯ ಮೇಲೆ ಅಭಿಮಾನ ಇದ್ದದ್ದರಿಂದಾಗಿ ಆ ಪಾತ್ರಕ್ಕೆ ಅವರೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಂತೆ. ಈ ಕಾರಣದಿಂದ ಶಿವಣ್ಣ ಮತ್ತೊಂದು ಭಿನ್ನವಾದ ಪಾತ್ರದಲ್ಲಿ ಅಬ್ಬರಿಸಲು ಅವಕಾಶ ಒಲಿದು ಬಂದಂತಾಗಿದೆ.

