ಒರಟ ಶ್ರೀ ನಿರ್ದೇಶನದಲ್ಲಿ ಮೂಡಿ ಬಂದಿರುವ `ಶಬರಿ’ ಚಿತ್ರವೀಗ ಪ್ರೇಕ್ಷಕ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ. ಬಿಡುಗಡೆಗೊಂಡಿರುವ ಟೀಸರ್ ಮತ್ತು ಆ ಕುರಿತಾಗಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಾಹೀರಾಗಿದ್ದ ಒಂದಷ್ಟು ಅಂಶಗಳ ಬಗ್ಗೆ ಚಿತ್ರರಂಗದಲ್ಲಿ ಬೇರೊಂದು ಮಟ್ಟದ ಸಂಚಲನ ಸೃಷ್ಟಿಯಾಗಿದೆ. ಇದೆಲ್ಲದಕ್ಕೆ ಕಾರಣವಾಗಿರುವುದು ನಿರ್ದೇಶಕ ಒರಟ ಶ್ರೀ ಅನುಸರಿಸಿರುವ ಕ್ರಾಂತಿಕಾರಕ ನಡೆ. ಅದರ ಫಲವಾಗಿಯೆ ಶಬರಿ ಚಿತ್ರದ ನಿರ್ಮಾಪಕರಲ್ಲಿಯೂ ಹುರುಪು, ನಂಬಿಕೆ ಮೂಡಿಕೊಂಡಿದೆ. ಸಿನಿಮಾ ನಿರ್ಮಾಣ ಮಾಡಬೇಕೆಂಬ ಅತೀವ ಆಕಾಂಕ್ಷೆ ಇದ್ದರೂ, ಅಲ್ಲಿ ನಡೆಯುವ ಒಳೇಟುಗಳ ಬಗ್ಗೆ, ಆಗಬಹುದಾದ ಲುಕ್ಸಾನಿನ ಬಗ್ಗೆ ಭೀತರಾಗಿದ್ದ ಅದೆಷ್ಟೋ ನಿರ್ಮಾಪಕರಿಗೆ ಒರಟ ಶ್ರೀ ಫಾರ್ಮುಲಾ ಸಂಜೀವಿನಿಯಂತೆ ಕಂಡಿರೊದರಲ್ಲಿ ಅಚ್ಚರಿಯೇನಿಲ್ಲ. ಇಂಥಾದ್ದೊಂದು ಕ್ರಾಂತಿಕಾರಕ ನಡೆಯ ಬಗ್ಗೆ ಖುದ್ದು ಅವರೇ `ಸಿನಿಶೋಧ’ದೊಂದಿಗೆ ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ!
ಸದರಿ ಪತ್ರಿಕಾಗೋಷ್ಠಿಯಲ್ಲಿ ಟೀಸರ್ ಬಿಡುಗಡೆಗೊಳಿಸಿ ಮಾತಾಡಿದ್ದ ಲಹರಿ ವೇಲು ನಿರ್ದೇಶಕರು ಮತ್ತು ನಿರ್ಮಾಪಕರ ನಡುವೆ ನಡೆದಿದ್ದ ಅಗ್ರಿಮೆಂಟ್ ಬೆಗೆಗಿನ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ಒರಟ ಶ್ರೀ ಅವರು ಹಂಚಿಕೊಂಡಿರೋ ಮಾಹಿತಿಯ ಆಧಾರದಲ್ಲಿ ಹೇಳೋದಾದರೆ, ಅವರು ಈ ಕಥೆಯನ್ನು ಸಿದ್ಧಪಡಿಸಿಕೊಂಡು, ಸರ್ವ ತಯಾರಿಯೊಂದಿಗೆ ನಿರ್ಮಾಪಕರನ್ನು ಭೇಟಿಯಾದಾಗ ಅವರಲ್ಲಿದ್ದ ಅಳುಕೊಂದನ್ನು ಮನಗಂಡಿದ್ದರಂತೆ. ನಿರ್ಮಾಪಕರು ಸಂಪೂರ್ಣ ಸಿನಿಮಾದ ಒಳಗಿಳಿದು ಸಮರ್ಪಿಸಿಕೊಳ್ಳಬೇಕೆಂದರೆ, ಅವರಲ್ಲೊಮದು ನಂಬಿಕೆ ಮೂಡಿಸಬೇಕು, ಯಾವುದೇ ನಷ್ಟದ ಭಯವಿಲ್ಲದೆ ಚಿತ್ರಕ್ಕೆ ಹಣ ಹೂಡಿಕೆ ಮಾಡಲು ಅನುವು ಮಾಡಿಕೊಡ ಬೇಕೆಂಬ ಉದ್ದೇಶದಿಂದಲೇ ಅಗ್ರಿಮೆಂಟೊಂದರ ಬಗ್ಗೆ ಪ್ರಸ್ತಾಪ ಮಾಡಿದ್ದರಂತೆ.
ಆರಂಭಿಕವಾಗಿ ನಿಗಧಿಯಾದ ಬಜೆಟ್ಟಿನಲ್ಲಿಯೇ ಒಂದಿಡೀ ಸಿನಿಮಾವನ್ನು, ಯಾವುದಕ್ಕೂ ಕೊರತೆ ಇಲ್ಲದಂತೆ ಮುಗಿಸಿಕೊಡಬೇಕು. ಒಂದು ವೇಳೆ ಬಜೆಟ್ ಅಗ್ರಿಮೆಂಟಿನ ಮಿತಿ ಮೀರಿದರೆ ಅದಕ್ಕೆ ನ ಇರ್ದೇಶಕರೇ ಸಂಪೂರ್ಣ ಹೊಣೆ. ಸಾಲ ಮಾಡುತ್ತಾರೋ, ಆಸ್ತಿಪಾಸ್ತಿ ಮಾರಿ ಹಣ ಹೊಂದಿಸುತ್ತಾರೋ ಗೊತ್ತಿಲ್ಲ; ಸಿನಿಮಾವನ್ನು ಬಿಡುಗಡೆಯ ಹಂತಕ್ಕೆ ತಂದು ನಿಲ್ಲಿಸೋದು ನಿರ್ದೇಶಕರ ಜವಾಬ್ದಾರಿ. ಒಂದು ವೇಳೆ ಈ ಒಪ್ಪಂದಕ್ಕೆ ತಪ್ಪಿದರೆ ಕಾನೂನು ರೀತಿಯ ಯಾವುದೇ ಕ್ರಮಗಳನ್ನು ಕೈಗೊಳ್ಳುವ ಸಂಪೂರ್ಣ ಅಧಿಕಾರ ಕಾಸು ಹೂಡಿದ ನಿರ್ಮಾಪಕರಿಗಿರುತ್ತದೆ. ಇದು ಒರಟ ಶ್ರೀ ಅವರು ಸಹಿ ಹಾಕಿದ್ದ ಶಬರಿಯ ಚಿತ್ರೀಕರಣಪೂರ್ವ ಒಡಂಬಡಿಕೆಯ ಸಂಕ್ಷಿಪ್ತ ಸಾರಾಂಶ!
ನಿರ್ಮಾಪಕರು ಖುಷಿಯಿಂದಲೇ ಆ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿ ಚಿತ್ರಕ್ಕೆ ಚಾಲನೆ ನೀಡಿದ್ದರಂತೆ. ವಿಶೇಷವೆಂದರೆ, ಕೊಟ್ಟ ಮಾತಿಗೆ ತಪ್ಪದ ಒರಟ ಶ್ರೀ ಆರಂಭಿಕವಾಗಿ ಮೀಸಲಿಟ್ಟಿದ್ದ ಬಜೆಟ್ಟಿನಲ್ಲಿಯೇ ಅಚ್ಚುಕಟ್ಟಾಗಿ ಸಿನಿಮಾ ಮುಗಿಸಿದ್ದಾರಂತೆ. ಮೇಲು ನೋಟಕ್ಕಿದು ಒರಟ ಶ್ರೀ ಮತ್ತು ಶಬರಿ ಚಿತ್ರದ ನಿರ್ಮಾಪಕರ ನಡುವೆ ನಡೆದ ಖಾಸಗಿ ವಿಚಾರದಂತೆ ಕಾಣಿಸಬಹುದು. ಆದರೆ, ಇದೊಂದು ಅಕ್ಷರಶಃ ಕ್ರಾಂತಿಕಾರಕ ನಡೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಯಾಕೆಂದರೆ, ಅನೇಕ ನಿರ್ಮಾಪಕರು ನಿರ್ದೇಶಕರೆನ್ನಿಸಿಕೊಂಡವರು ಕೊಟ್ಟ ಮಾತಿಗೆ ಬದ್ಧರಾಗದ ಬುದ್ಧಿಯಿಂದ ಕಂಗಾಲೆದ್ದಿದ್ದಾರೆ. ಅದೆಷ್ಟೋ ಮಂದಿಒ ಮನೆ ಮಠ ಮಾರಿಕೊಂಡಿದ್ದೂ ಇದೆ. ಆರಂಭಿಕವಾಗಿ ಹೇಳೋದೊಂದು ಬಜೆಟ್ಟು, ಅಚಿತಿಮವಾಗಿ ಆಗೋದೇ ಇನ್ನೊಂದು ಮೊತ್ತವೆಂಬಂಥಾ ವಾತಾವರಣವಿದೆ.
ಸುಮ್ಮನೊಮ್ಮೆ ಯೋಚಿಸಿ ನೋಡಿ; ಓರ್ವ ನಿರ್ಮಾಪಕ ತನ್ನ ಮಿತಿಗೆ ತಕ್ಕಂತೆ ಒಂದು ಕೋಟಿಯನ್ನು ಹೊಂಚಿ ಸಿನಿಮಾ ಆರಂಭಿಸುತ್ತಾನೆ. ಬರಬರುತ್ತಾ ಒಂದಷ್ಟು ಲಕ್ಷ ಹೆಚ್ಚೂಕಮ್ಮಿಯಾದರೆ ಹೇಗೋ ಹೊಂದಿಸುತ್ತಾರೆ. ಆದರೆ, ಏಕಾಏಕಿ ಒಂದು ಕೋಟಿ ಹೆಚ್ಚುವರಿ ಹಣ ಹೂಡಬೇಕಗಿ ಬಂದರೆ ಎಲ್ಲಿಂದ ತರಲು ಸಾಧ್ಯ? ಅಂಥಾ ಸಿನಿಮಾ ನಿರೀಕ್ಷಿತ ಯಶ ಕಾಣದೇ ಹೋದರೆ ಹೂಡಿದ ಕಾಸೆಲ್ಲವೂ ಹೋದಂತೆಯೇ. ಈ ಕಾರಣದಿಂದಲೇ ಅನೇಕ ಹೊಸಾ ನಿರ್ಮಾಪಕರು ಹಣ ಹೂಡಲು ಹಿಂದೇಟು ಹಾಕುತ್ತಾರೆ. ಒಳ್ಳೆ ಕಥೆಗಳು, ಈ ನಾಜೂಕು ದುನಿಯಾದಲ್ಲಿ ನೌಟಂಕಿ ಆಟವಾಡಲು ಬಾರದ ಪ್ರತಿಭಾನ್ವಿತ ನಿರ್ದೇಶಕರು ತೆರೆ ಮರೆಯಲ್ಲಿಯೇ ಉಳಿಯಬೇಕಾಗುತ್ತದೆ. ಇದೆಲ್ಲದರಿಂದ ಚಿತ್ರರಂಗ ಬಚಾವಾಗಲು ಒರಟ ಶ್ರೀ ಕಾರ್ಯರೂಪಕ್ಕೆ ತಂದಿರುವ ಫಾರ್ಮುಲ ನಿಜಕ್ಕೂ ಪರಿಣಾಮಕಾರಿಯಾಗಿದೆ. ಇದನ್ನೇ ಎಲ್ಲರೂ ಅನುಸರಿಸಿದರೆ, ಸಿನಿಮಾ ಘೋಶಿಸಿ ಯಾರದ್ದೋ ಕಾಸಲ್ಲಿ ಮಜಾ ಉಡಾಯಿಸುವ ಸನ್ನಿಯೊಂದು ಕಣ್ಮರೆಯಾಗುತ್ತದೆ. ಇಲ್ಲಿ ಗಟ್ಟಿ ಕಾಳುಗಳು ಮಾತ್ರವೇ ಉಳಿದುಕೊಂಡು, ಜೊಳ್ಳುಗಳೆಲ್ಲ ಗಾಂಧಿನಗರದಿಂದ ಗಾವುದ ದೂರಕ್ಕೆ ಎಗರಿ ಬೀಳುತ್ತವೆ. ಇಂಥಾದ್ದೊಂದು ಗಟ್ಟಿತನ ಪ್ರದರ್ಶಿಸಿರುವ ಒರಟ ಶ್ರೀ ಕ್ರಮವನ್ನು ಸಿನಿಮಾ ಪ್ರೇಮಿಗಳೆಲ್ಲ ಮೆಚ್ಚಿಕೊಳ್ಳುತ್ತಿದ್ದಾರೆ…
keywords: orata shree, shabari movie, sandalwood

