ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ದಿಲ್ದಾರ್ ಚಿತ್ರ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದೆ. ಈ ಮೂಲಕವೇ ಇದೊಂದು ಪಕ್ಕಾ ಮಾಸ್ ಕಂಟೆಂಟು ಹೊಂದಿರೋ ಸಿನಿಮಾ ಎಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಇದೀಗ ಬಹುತೇಕ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿರುವ ದಿಲ್ದಾರ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಂಡಿದೆ. ಸದರಿ ಟೀಸರ್ನಲ್ಲಿ ಶ್ರೇಯಸ್ ಕಾಣಿಸಿಕೊಂಡಿರುವ ರೀತಿಯ ಬಗ್ಗೆ ಸಕಾರತ್ಮಕ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಮಧು ಗೌಡ ಗಂಗೂರ್ ನಿರ್ದೇಶನದ ದಿಲ್ದಾರ್ ಒಂದು ವಿಭಿನ್ನ ಪ್ರೇಮಕಥಾನಕದೊಂದಿಗೆ ಮಾಸ್ ಕಥನ ತಟಿಕೆ ಹಾಕಿಕೊಂಡಂತಿರೋ ಸಿನಿಮಾ. ಈ ವಿಚಾರವನ್ನು ಚಿತ್ರತಂಡ ಈ ಹಿಂದೆಯೂ ಹೇಳಿಕೊಂಡಿತ್ತು. ಇದೀಗ ಫಸ್ಟ್ ಲುಕ್ ಟೀಸರ್ ಮೂಲಕ ಒಟ್ಟಾರೆ ಸಿನಿಮಾದ ಆಂತರ್ಯದ ಝಲಕ್ಕುಗಳನ್ನು ತೆರೆದಿಡಲಾಗಿದೆ. ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ಈವರೆಗೆ ನಟಿಸಿರೋ ಸಿನಿಮಾಗಳಲ್ಲಿ ಮಾಸ್ ಅವತಾರದಲ್ಲಿಯೇ ಕಾಣಿಸಿಕೊಂಡಿದ್ದರು. ಆದರೆ, ದಿಲ್ದಾರ್ ಚಿತ್ರದಲ್ಲಿ ಅದರ ಮತ್ತೊಂದು ಹಂತಕ್ಕೇರಿಸುವ ಸೂಚನೆಗಳು ದಟ್ಟವಾಗಿವೆ.
ಏನ್ಸಿಯಂಟ್ ಮೂವೀಸ್ ಬ್ಯಾನರಿನಡಿಯಲ್ಲಿ ಆರ್. ಸಂತೋಷ್ ಕುಮಾರ್ (ಎಸ್ವಿಟಿ) ನಿರ್ಮಾಣ ಮಾಡಿರುವ ದಿಲ್ದಾರ್ ಇದೀಗ ಬಿಡುಗಡೆಯ ಅಂಚಿನಲ್ಲಿದೆ. ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಈ ಚಿತ್ರದ ಮೂಲಕವೇ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದ ಹಾಸ್ಯ ನಟರ ದಂಡೇ ಈ ಚಿತ್ರದಲ್ಲಿದೆ. ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಖಳ ನಟರಾಗಿ ಅಬ್ಬರಿಸಿದ್ದಾರೆ. ಹರೇಕೃಷ್ಣ ರೆಡ್ಡಿ ಎಸ್ ಕರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಇಷ್ಟರಲ್ಲಿಯೇ ದಿಲ್ದಾರ್ ಬಿಡುಗಡೆ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳಿವೆ.
keywords: shreyas manju, dildar movie, sandalwood

