ಕನ್ನಡ ಚಿತ್ರರಂಗದಿಂದ ತೆಲುಗಿಗೆ ಹೋಗಿ ಮಿಂಚಿದ ನಟಿಯರ ಪಟ್ಟಿ ದೊಡ್ಡದಿದೆ. ಆದರೆ, ಆ ಸಾಲಿನಲ್ಲಿ ಸಲೀಸಾಗಿ ಸರಿಗಟ್ಟಲಾರದಂಥಾ ಸ್ಥಾನ ಗಿಟ್ಟಿಸಿಕೊಂಡಿರುವಾಕೆ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ನಂತರ ಸೀದಾ ತೆಲುಗಿಗೆ ಹಾರಿದ್ದ ರಶ್ಮಿಕಾಗೆ ದಕ್ಕಿದ್ದದ್ದು ಮಹಾ ಗೆಲುವು. ಪೂಜಾ ಹೆಗ್ಡೆಯಂಥವರನ್ನೇ ಮಂಕಾಗಿಸಿ ಮಿಂಚಿದ ರಶ್ಮಿಕಾಗೇ ಸ್ಪರ್ಧೆಯೊಡ್ಡುವಂತೆ ತೆಲುಗಿಗೆ ಪಾದಾರ್ಪಣೆ ಮಾಡಿದ್ದ ಶ್ರೀಲೀಲಾಳದ್ದು ಮತ್ತೊಂದು ಬಗೆಯ ಕಥೆ. ಕಿಸ್ ಅಂತೊಂದು ಸಿನಿಮಾದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದ ಶ್ರೀಲೀಲಾಗೂ ಕೂಡಾ ಅದ್ಭುತ ಅವಕಾಶಗಳೇ ಕೂಡಿ ಬಂದಿದ್ದವು. ಆದರೆ, ಎತ್ತರಕ್ಕೇರಿದಷ್ಟೇ ವೇಗವಾಗಿ ಆಕೆಯ ವೃತ್ತಿ ಬದುಕು ಪಾತಾಳ ಕಂಡಿತ್ತು. ಈ ನಡುವೆ ವ್ಯಾಸಂಗದ ಅಂತೆಲ್ಲ ಒಂದಷ್ಟು ಡ್ಯಾಮೇಜ್ ಕಂಟ್ರೋಲಿನ ಸರ್ಕಸ್ಸುಗಳೂ ಶ್ರೀಲೀಲಾ ಕಡೆಯಿಂದ ನಡೆದಿದ್ದವು.
ಇಂಥಾ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾಗುತ್ತಲೇ ಏಕಾಏಕಿ ತಮಿಳು ಚಿತ್ರರಂಗದಲ್ಲಿ ಮಿಂಚಲಾರಂಭಿಸಿದ್ದಾಳೆ. ಅಲ್ಲಿನ ಸ್ಟಾರ್ ನಟರ ಸಿನಿಮಾಗಳಲ್ಲಿಯೇ ಸಾಲು ಸಾಲಾಗಿ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಎಲ್ಲರೂ ಅಚ್ಚರಿಗೀಡಾಗುವಂತೆ ಮಾಡುತ್ತಿದ್ದಾಳೆ. ಇದು ಹೇಗೇ ಸಾಧ್ಯವಾಯ್ತು ಎಂಬಂಥಾ ಅಚ್ಚರಿಯೊಂದು ತೆಲುಗಿ ಸಿನಿಮಾ ರಂಗದ ಮಂದಿಯನ್ನು ತೀವ್ರವಾಗಿ ಕಾಡಲಾರಂಭಿಸಿದೆ. ಈ ಸಂಬಂಧವಾಗಿ ತೆಲುಗು ಮಂದಿ ಶ್ರೀಲೀಲಾಲಿಗೆ ಅವಕಾಶ ಸಿಗುತ್ತಿರೋದರ ಹಿಂದಿರುವ ಕಾರಣವನ್ನು ಕಂಡುಕೊಂಡಿದ್ದಾರೆ. ಈಗ ಹಬ್ಬಿಕೊಂಡಿರುವ ರೂಮರಿನ ಆಧಾರದಲ್ಲಿ ಹೇಳೋದಾದರೆ, ಶ್ರೀಲೀಲಾಗೆ ಸಿಗುತ್ತಿರೋದರ ಅವಕಾಶಗಳ ಹಿಂದೆ ಸಂಭಾವನೆ ಕಡಿತವೆಂಬೋ ಮಾಯಾ ದಂಡವಿದೆ!
ತೆಲುಗು ಚಿತ್ರರಂಗದಲ್ಲಿ ಶ್ರೀಲೀಲಾ ಸಂಭಾವನೆ ಚಿತ್ರವೊಂದಕ್ಕೆ ಎರಡೂವರೆ ಕೋಟಿಯಷ್ಟಿತ್ತು. ಯಾವುದೇ ಚೌಕಾಶಿಯಿಲ್ಲದೆ ಇದುವರೆಗೆ ನಟಿಸಿದ್ದ ಸಿನಿಮಾಗಳಿಂದ ಶ್ರೀಲೀಲ ಆ ಮೊತ್ತದ ಹಣವನ್ನು ಪಡೆದುಕೊಳ್ಳುತ್ತಿದ್ದಳು. ಐಟಂ ಸಾಂಗುಗಳಲ್ಲಿ ಕಾಣಿಸಿಕೊಂಡಾಗಲೂ ಕೂಡಾ ದೊಡ್ಡ ಮೊತ್ತದ ಹಣವೇ ಸಂದಾಯವಾಗುತ್ತಿತ್ತು. ಆದರೆ ತಮಿಳುನಾಡಿನಲ್ಲಿ ಶ್ರರೀಲೀಲಾ ತೆಲುಗಿನ ಸಂಭಾವನೆಯ ಅರ್ಧದಷ್ಟು ಕೊಟ್ಟರೂ ಸಾಕೆನ್ನುತ್ತಿದ್ದಾಳಂತೆ. ಸದ್ಯ ತಮಿಳಿನಲ್ಲಿ ಆಕೆ ನಟಿಸುತ್ತಿರೋ ಸಿನಿಮಾಗಳೆಲ್ಲವೂ ಅರ್ಧ ಸಂಭಾವನೆಯ ಸೂತ್ರದಲ್ಲಿಯೇ ವ್ಯವಹಾರ ಕುದುರಿಸಿಕೊಂಡಿವೆ ಎಂಬ ವಿಚಾರ ತೆಲುಗುನಾಡಿನ ತುಂಬೆಲ್ಲ ಇಟ್ಟಾಡಲಾರಂಭಿಸಿದೆ!

