ಹೇಳಿಕೊಳ್ಳುವಂಥಾ ಪ್ರತಿಭೆ ಇಲ್ಲದಿದ್ದರೂ ಆಯಾ ಕಾಲದ ಮಹಿಮೆಯಿಂದ ಕೈಗೂಡುವ ಅನುಕೂಲ ಮತ್ತು ವೈಯಕ್ತಿಕ ಹಿನ್ನೆಲೆಯ ಕಾರಣದಿಂದಲೇ ಮಿಂಚಿದ ಒಂದಷ್ಟು ನಟ ನಟಿಯರಿದ್ದಾರೆ. ಆ ಸಾಲಿಗೆ ಹೊಸಾ ಸೇರ್ಪಡೆಯಂತಿರುವಾಕೆ ಜಾನ್ವಿ ಕಪೂರ್. ಅಮ್ಮ ಶ್ರೀದೇವಿ ಒಂದು ಕಾಲದಲ್ಲಿ ಟಾಲಿವುಡ್ಡಿನಲ್ಲಿ ಸಂಚಲನ ಮೂಡಿಸಿದ್ದ ನಟಿ. ಬಾಲಿವುಡ್ಡನ್ನು ಅಕ್ಷರಶಃ ದಶಕಗಟ್ಟಲೆ ಆಳಿದ್ದ ಶ್ರೀದೇವಿಯದ್ದು ಯಾವತ್ತಿಗೂ ಮಾಸಲಾಗದಂಥಾ ಛಾರ್ಮ್. ಅಂಥಾ ನಟಿಯ ಮಗಳೆಂಬ ಹೆಗ್ಗಳಿಕೆ, ಕೋಟಿ ಕುಳ ಬೋನಿ ಕಪೂರನ ನೆರಳಿನಿಂದಲೇ ನಟಿಯಾಗಿ ಹೊರ ಹೊಮ್ಮಿದ್ದ ಜಾನ್ವಿ ಕಪೂರ್ ಒಂದರ ಹಿಂದೊಂದರಂತೆ ಟಾಲಿವುಡ್ ಚಿತ್ರಗಳಲ್ಲಿ ದೊಡ್ಡ ಅವಕಾಶವನ್ನು ಪಡೆದುಕೊಂಡಿದ್ದಳು. ಆದರೀಗ ಟಾಲಿವುಡ್ಡಿನಲ್ಲಿ ಜಾನ್ವಿ ವಿರೋಧಿ ಅಲೆ ಬಲವಾಗಿಯೇ ಬೀಸಲಾರಂಭಿಸಿದೆ!

ಇದೇ ವರ್ಷ ರಾಮ್ಚರಣ್ ಅಭಿನಯದ ಪೆದ್ದಿ ಎಂಬ ಚಿತ್ರದಲ್ಲಿ ಜಾನ್ವಿ ಕಪೂರ್ ಡಿ ಗ್ಲಾಮ್ ಪಾತ್ರವೊಂದರಲ್ಲಿ ನಟಿಸಿದ್ದಳು. ನಿರ್ದೇಶಕನಂತೂ ಈಕೆಯನ್ನು ಬಟ್ಟೆ ಸುಲಿದು ನಿಲ್ಲಿಸಿದಂತೆ ಚಿತ್ರೀಕರಿಸಿದ್ದ. ಚಿತ್ರೀಕರಣದುದ್ದಕ್ಕೂ ಕಮಕ್ ಕಿಮಕ್ ಅನ್ನದೇ ಸಹಕರಿಸಿದ್ದ ಜಾನ್ವಿ ಕಪೂರ್, ಪ್ರಚಾರದ ಪಟ್ಟುಗಳಲಲಿಯೂ ಅತ್ಯುತ್ಸಾಹದಿಂದಲೇ ಭಾಗಿಯಾಗಿದ್ದಳು. ಆದರೆ ಸಿನಿಮಾ ಬಿಡುಗಡೆಗೊಂಡು ಜಾನ್ವಿಯ ಅವತಾರಗಳ ಬಗ್ಗೆ ಪ್ರೇಕ್ಷಕರು ಸೊಲ್ಲೆತ್ತುತ್ತಲೇ ಆಕೆ ಏಕಾಏಕಿ ಉಲ್ಟಾ ಹೊಡೆದು ಬಿಟ್ಟಿದ್ದಳು. ಈ ಸಂಬಂಧವಾಗಿ ತನ್ನ ನಸೀಬು ಬದಲಿಸಿದ್ದ ಟಾಲಿವುಡ್ಡಿನ ಬಗ್ಗೆಯೇ ಅವ ಮರ್ಯಾದೆ ತೋರುವಂಥಾ ಒಂದಷ್ಟು ಹೇಳಿಕೆಗಳನ್ನೂ ಕೊಟ್ಟಿದ್ದಳು. ಹಾಗೊಂದು ವೇಳೆ ನಿರ್ದೇಶಕ ತನ್ನನ್ನು ತೀರಿಸುತ್ತಿರುವ ರೀತಿಯ ಬಗ್ಗೆ ಜಾನ್ವಿಗೆ ತಕರಾರಿದ್ದಿದ್ದರೆ ಚಿತ್ರೀಕರಣದ ಸಂದರ್ಭದಲ್ಲಿಯೇ ವಿರೋಧ ವ್ಯಕ್ತಪಡಿಸುವ, ಸೌಹಾರ್ದಯುತವಾಗಿಯೇ ಎಲ್ಲವನ್ನೂ ಸರಿಪಡಿಸಿಕೊಳ್ಳುವ ಎಲ್ಲ ಅವಕಾಶಗಳೂ ಜಾನ್ವಿಗಿದ್ದವು. ಆದರೆ, ಸಿನಿಮಾ ಬಿಡುಗಡೆಯಾದ ನಂತರ ರೊಳ್ಳೆ ತೆಗೆದ ಈಕೆಯ ವಿರುದ್ಧ ತೆಲುಗು ಪ್ರೇಕ್ಷಕರೇ ರೊಚ್ಚಿಗೆದ್ದಿದ್ದಾರೆ.
ತೆಲುಗು ಸಿನಿಮಾಭಿಮಾನಿಗಳು ಅದ್ಯಾವ ಪರಿಯಾಗಿ ಅಸಹನೆ ಹೊಂದಿದ್ದಾರೆಂದರೆ, ಜಾನ್ವಿಯನ್ನು ಇನ್ನು ಮುಂದೆ ಯಾವ ತೆಲುಗು ಸಿನಿಮಾಗಳಲ್ಲಿಯೂ ನಾಯಕಿಯಾಗಿ ಸೇರಿಸಿಕೊಳ್ಳಬಾರದೆಂಬ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಈ ನಡುವೆ ಬಹುನಿರೀಕ್ಷಿತ ರಾಕಾ ಚಿತ್ರದಲ್ಲಿ ಈಕೆಯೇ ನಾಯಕಿಯಾಗಿ ನಟಿಸುತ್ತಿದ್ದಾಳೆ. ಅದರ ಚಿತ್ರೀಕರಣ ಈಗಾಗಲೇ ಚಾಲೂ ಆಗಿದೆ. ಅದು ಬಿಟ್ಟರೆ ಸದ್ಯಕ್ಕೆ ಬೇರ್ಯಾವ ತೆಲುಗು ಸಿನಿಮಾಗಳಲ್ಲಿಯೂ ಈಕೆ ನಟಿಸುತ್ತಿರೋ ಲಕ್ಷಣಗಳಿಲ್ಲ. ಯಾಕೆಂದರೆ, ಪ್ರೇಕ್ಷಕರು ಅಂಥಾ ಸಿನಿಮಾಗಳನ್ನು ಬಾಯ್ಕಾಟ್ ಮಾಡೋ ಭಯ ಸಿನಿಮಾ ನಿರ್ಮಾತೃಗಳನ್ನು ಬಾಧಿಸುತ್ತಿದೆ. ಅಲ್ಲಿಗೆ ಜಾನ್ವಿಗಿದ್ದ ಏಕೈಕ ಅವಕಾಶವೂ ಕೈ ತಪ್ಪಿದಂತಿದೆ. ಬಾಲಿವುಡ್ಡಲ್ಲಂತೂ ಸ್ಪರ್ಧೆ ಅತಿಯಾಗಿರೋದರಿಂದ ಜಾನ್ವಿ ಬಚಾವಾಗೋದು ಡೌಟು. ಬೇರೆ ಭಾಷೆಗಳಲ್ಲಿಯೂ ಈಕೆಯ ಬಗ್ಗೆ ಸದಭಿಪ್ರಾಯಗಳಿಲ್ಲ. ಇನ್ನೇನಿದ್ದರೂ ಅಪ್ಪ ಬೋನಿ ಕಪೂರ್ ಕಾಸು ಹೂಡಲು ಮುಂದಾದರೆ ಮಾತ್ರವೇ ಜಾನ್ವಿ ನಟಿಯಾಗಿ ಒಂದಷ್ಟು ಚಾಲ್ತಿಯಲ್ಲಿರಬಹುದೇನೋ…
