ಎನ್.ಆರ್ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಎನ್.ಆರ್ ಮಂಜುನಾಥ್ (ನೀಲೇರಿ) ನಿರ್ಮಾಣ ಮಾಡಿರುವ, ಕೃತ್ವಿಕ್ ಚೊಚ್ಚಲ ನಿರ್ದೇಶನದ ಚಿತ್ರ ಲವ್ ಸೀಸನ್ಸ್. ಹೊಸಬರಿಂದ ಕಳೆಗಟ್ಟಿಕೊಂಡಿರುವ ಈ ಸಿನಿಮಾ ಇದೇ ಜುಲೈ ೩ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ರಂಗಭೂಮಿಯಿಂದ ಬಂದ ಕಲಾವಿದರ ಜೊತೆ ಜೊತೆಗೇ, ಬಹುಮುಖ ಪ್ರತಿಭಾನ್ವಿತರಿರುವ ಈ ಸಿನಿಮಾ ಮೂಲಕ ಶ್ವೇತಾ ಕೊಗ್ಲೂರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಪ್ರೇಮಕಾವ್ಯ ಧಾರಾವಾಹಿಯ ಮೂಲಕ ಪ್ರಸಿದ್ಧಿ ಪಡೆದುಕೊಂಡಿರೋ ಶ್ವೇತಾಗೆ ಲವ್ ಸೀಸನ್ಸ್ ಮೂಲಕ ಜೀವಮಾನದ ಕನಸು ನನಸಾದಂತಾಗಿದೆ!
ಲವ್ ಸೀಸನ್ಸ್ ಚಿತ್ರತಂಡದಲ್ಲಿ ಹೊಸಬರದ್ದೇ ಮೇಲುಗೈ. ಪ್ರಧಾನವಾಗಿ ಕಲೆಯ ನಾನಾ ಪ್ರಕಾರಗಳಲ್ಲಿ ಪಳಗಿಕೊಂಡಿರುವ, ರಂಗಭೂಮಿ ಹಿನ್ನೆಲೆಯಿಂದ ಬಂದವರೇ ಈ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂಥಾ ಬಹುಮುಖ ಪ್ರತಿಭೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವಾಕೆ ಶ್ವೇತಾ ಕೊಗ್ಲೂರ್. ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತವನ್ನು ಅಚ್ಚುಕಟ್ಟಾಗಿ ಕಲಿತುಕೊಂಡು, ಭರತನಾಟ್ಯವನ್ನು ಬಹುವಾಗಿ ಹಚ್ಚಿಕೊಂಡಿರುವ ಶ್ವೇತಾ, ಈಗಾಗಲೇ ರವೀಂದ್ರ ಕಲಾಕ್ಷೇತ್ರ, ಎಡಿಎ ರಂಗಮಂದಿರ ಮುಂತಾದೆಡೆಗಳಲ್ಲಿ ಹಲವಾರು ಯಶಸ್ವೀ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಸಂಗೀತಾಸಕ್ತರ ಮನಗೆದ್ದಿದ್ದ ಶ್ವೇತಾರ ಪ್ರಧಾನ ಆಸಕ್ತಿಯಿದ್ದದ್ದು ನಟನೆಯ ಸುತ್ತಲೇ.
ಬೆಂಗಳೂರಿನ ಗಲ್ಲಿಗಳಲ್ಲಿ ತಂದೆಯೊಂದಿಗೆ ಓಡಾಡುವಾಗೆಲ್ಲ, ಸಿನಿಮಾ ಮಂದಿರಗಳ ಮುಂದೆ ಹಾದುಹೋಗುವಾಗ ಮುಂದೊಂದು ದಿನ ಅದರ ಮುಂದೆ ತನ್ನ ಕಟೌಟು ತಲೆಯೆತ್ತಬೇಕೆಂಬಂತೆ ಕನಸು ಕಂಡಿದ್ದಾಕೆ ಶ್ವೇತಾ. ಇದರ ಭಾಗವಾಗಿಯೇ ದೊರೆಸಾನಿ ಧಾರಾವಾಹಿಯ ಮೂಲಕ ಬಣ್ಣಹಚ್ಚಿಕ, ಸೇವಂತಿ ಸೀರಿಯಲ್ಲಿನಲ್ಲಿಯೂ ನಟಿಸಿದ್ದ ಶ್ವೇತಾ ಇದೀಗ ಕಲರ್ಸ್ ವಾಹಿನಿಯ ಪ್ರೇಮಕಾವ್ಯ ಧಾರಾವಾಹಿಯ ಪಾತ್ದರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಸೀರಿಯಲ್ಲಿನ ಮೂಲಕವೇ ಲವ್ ಸೀಸನ್ಸ್ ನಾಯಕಿಯಾಗೋ ಅವಕಾಶ ಒದಗಿ ಬಂದಿತ್ತೆಂಬುದು ಮತ್ತೊಂದು ವಿಶೇಷ!
ಪ್ರೇಮ ಕಾವ್ಯ ಧಾರಾವಾಹಿಯಲ್ಲಿ ಶ್ವೇತಾ ನಟನೆ ನೋಡಿದ್ದ ಸಂಗೀತಾ ಅನಿಲ್ ಲವ್ ಸೀಸನ್ಸ್ ಚಿತ್ರದ ಬಗ್ಗೆ ಹೇಳಿದ್ದರಂತೆ. ಆ ಬಳಿಕ ಅವರೇ ನಿರ್ದೇಶಕರಿಗೆ ಪರಿಚಯಿಸಿದ ಬಳಿಕ ಲುಕ್ ಟೆಸ್ಟ್ ಓಕೆ ಆದದ್ದೇ ಭಿನ್ನವಾದ ಪಾತ್ರವೊಂದು ಶ್ವೇತಾಗೆ ಒಲಿದು ಬಂದಿತ್ತು. ಈ ಮೂಲಕವೇ ಸಿನಿಮಾ ನಾಯಕಿಯಾಗಬೇಕೆಂಬ ಶ್ವೇತಾರ ಮಹಾ ಕನಸು ನನಸಾಗಿದೆ. ಇದರೊಂದಿಗೆ ಒಂದೊಳ್ಳೆ ಚಿತ್ರತಂಡ, ಅದಕ್ಕೆ ತಕ್ಕುದಾದ ಚೆಂದದ ಸಿನಿಮಾ ಭಾಗವಾಗುವ ಅವಕಾಶ ಸಿಕ್ಕ ಬಗ್ಗೆ ಶ್ವೇತಾ ಖುಷಿಗೊಂಡಿದ್ದಾರೆ. ಈಗಿನ ದಿನಮಾನಕ್ಕೆ ಹೊಂದಿಕೆಯಾಗುವ, ಒಂದು ಸಂದೇಶವನ್ನು ಇಂದಿನ ಜಮಾನದ ಹುಡುಗಿಯರಿಗೆ ದಾಟಿಸುವಂಥಾ ಈ ಪಾತ್ರದ ಮೂಲಕ ತನ್ನ ಕನಸಿನ ಹಾದಿ ಸುಗಮವಾಗುತ್ತದೆಂಬ ತುಂಬು ನಂಬಿಕೆ ಶ್ವೇತಾಗಿದೆ. ಈಗಾಗಲೇ ನಾನಾ ಥರದಲ್ಲಿ ಕುತೂಹಲ ಮೂಡಿಸಿರುವ ಲವ್ ಸೀಸನ್ಸ್ ನಾಳೆ ಅಂದರೆ, ಜುಲೈ 3ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
keywords: shwetha koglur, love seasons movie, sandalwood

