ರಕ್ತಚಂದನ ಕಳ್ಳ ಸಾಗಣೆಯನ್ನು ಕೇಂದ್ರವಾಗಿರಿಸಿಕೊಂಡಿದ್ದ ಪುಷ್ಪಾ ಸರಣಿಯ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ದಾಖಲೆಯನ್ನೇ ಬರೆದಿವೆ. ಇಲ್ಲಿ ರಕ್ತಚಂದನ ದಂಧೆಕೋರನನ್ನೇ ಹೀರೋ ಆಗಿ ಮೆರೆಸಿರೋದರ ವಿರುದ್ಧ ಒಂದಷ್ಟು ವಿರೀಧಗಳೂ ವ್ಯಕ್ತವಾಗುತ್ತಿವೆ. ಆದರೆ, ಅದೆಲ್ಲದರಾಚೆಗೆ ಒಂದು ಸಿನಿಮಾವಾಗಿ ಪುಷ್ಪ ಸರಣಿಯ ಗೆಲುವು ಸಲೀಸಾಗಿ ಸರಿಗಟ್ಟುವಂಥಾದ್ದಲ್ಲ. ಇದೆಲ್ಲದರ ನಡುವೆಯೇ ಕಾಡ ಗರ್ಭದ ಕಥಾನಕದ ಸುಳಿವಿನೊಂದಿಗೆ ಮೆಲಯಾಐಂ ಚಿತ್ರದ ಟೀಸರ್ ಒಂದು ದೇಶಾದ್ಯಂತ ಸದ್ದು ಮಾಡಲಾರಂಭಿಸಿದೆ. ಪೌಲ್ ಜಾರ್ಜ್ ನಿರ್ದೇಶನದ ಈ ಟೀಸರ್ ಪ್ಯಾನಿಂಡಿಯಾ ಮಟ್ಟದಲ್ಲಿ ಸಂಚಲನ ಮೂಡಿಸಿದೆ.
ಸದರಿ ಟೀಸರ್ನಲ್ಲಿ ಕಟ್ಟಾಳನ್ ಚಿತ್ರದ ಕಥಾ ಎಳೆಯ ಸ್ಪಷ್ಟ ಚಿತ್ರಣ ಸಿಕ್ಕಿದೆ. ಆನೆ ದಂತ ಕಳ್ಳತನ ಎಂಬುದು ಭಾರತದ ಮಟ್ಟಿಗೆ ಹೊಸತೇನಲ್ಲ. ಪಶ್ಚಿಮ ಘಟ್ಟಗಳ ಬೆಟ್ಟ ಸಾಲಿನಲ್ಲಿರುವ ಕೇರಳ ಕೂಡಾ ಆನೆಗಳ ಆವಾಸಸ್ಥಾನ. ಇಂಥಾ ಕಾಡೊಳಗೆ ಒಂದು ಕಾಲದವರೆಗೂ ಆನೆಗಳ ದಂತ ಕಳ್ಳತನದ ದಂಧೆ ಎಗ್ಗಿಲ್ಲದೆ ನಡೆದಿತ್ತು. ಆದರೆ, ಈ ದಂಧೆ ನಡೆಯುವ ರೀತಿ ನಿಜಕ್ಕೂ ಭಯಾನಕವಾಗಿದೆ. ನಿರ್ದೇಶಕರು ಅಂಥಾ ರೋಚಕ ಕಥಾ ಹಂದರದೊಂದಿಗೆ ಕಟ್ಟಾಳನ್ ಚಿತ್ರವನ್ನು ಕಟ್ಟಿ ಕೊಟ್ಟಿರುವ ಲಕ್ಷಣಗಳು ಟೀಸರ್ನಲ್ಲಿ ಢಾಳಾಗಿಯೇ ಕಾಣಿಸಿದೆ. ಆನೆಯಂಥಾ ದೈತ್ಯ ಪಾಣಿಗಳನ್ನೇ ಕೊಂದು, ದಂತ ಕಿತ್ತು, ಅದನ್ನು ಕಾಡಾಚೆಗೆ ಸಾಗಿಸುವ ರಣ ರೋಚಕ ಕಥೆನ ಕಟ್ಟಾಳನ್ನಲ್ಲಿ ಅಡಕವಾಗಿರುವಂತಿದೆ.
ಅಂದಹಾಗೆ, ಈ ಚಿತ್ರದಲ್ಲಿ ಆಂಟನಿ ವಗೀಸ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಪುಷ್ಪಾ ಚಿತ್ರದಲ್ಲಿ ನಟಿಸಿದ್ದ ಸುನೀಲ್, ಕಬೀರ್ ಸಿಂಗ್, ದುಶಾರಾ ವಿಜಯನ್ ಮುಂತಾದವರ ತಾರಾಗಣವಿದೆ. ವಿಶೇಷವೆಂದರೆ ಕನ್ನಡದ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅದರ ಝಲಕ್ಕುಗಳನ್ನು ಕೇಳಿ ಸಿನಿಮಾಸಕ್ತರು ಥ್ರಿಲ್ ಆಗಿರೋದಂತೂ ಸತ್ಯ. ಕ್ಯೂಬ್ ಎಂಟರ್ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಶರೀಫ್ ಮಿಒಹಮದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೇ ಮೇ ೧೬ರಂದು ಮಲೆಯಾಳಂ, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲಲಿ ಈ ಚಿತ್ರ ಬಿಡುಗಡೆಗೊಳ್ಳಲಿದೆ.
keywords: kattalan, maleyalam, pushpa, pushpa2, bollywood

