ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಮಿಂಚಿದ ಪರಿ ಕಂಡು ಪ್ರೇಕ್ಷಕರಿಗಾಗಿದ್ದ ಬೆರಗಿನ್ನೂ ಹಸಿ ಹಸಿಯಾಗಿದೆ. ಕನ್ನಡದಲ್ಲಿ ಕಿರಿಕ್ ಪಾರ್ಟಿ ಅಂತೊಂದು ಸಿನಿಮಾದಲ್ಲಿ ನಟಿಸಿದ್ದ ಈಕೆ, ಆ ನಂತರ ಏಕಾಏಕಿ ತೆಲುಗಿಗೆ ಹಾರಿದಾಗ ಮೂದಲಿಕೆ ಕೇಳಿ ಬಂದಿದ್ದೇ ಹೆಚ್ಚು. ಆದರೆ, ರಶ್ಮಿಕಾ ಸಾಲು ಸಾಲು ದೊಡ್ಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಲೇ ಸಾಗಿದ್ದಳು. ಹಾಗೆ ಆಕೆ ನಟಿಸಿದ್ದ ಚಿತ್ರಗಳೆಲ್ಲವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಆ ಬಳಿಕ ಒಂದಷ್ಟು ಹಿನ್ನಡೆಯನ್ನೂ ಕಂಡಿದ್ದ ರಶ್ಮಿಕಾ ಇದೀಗ ಬಾಲಿವುಡ್ಡಿಗೆ ಹಾರಿದ್ದಾಳೆ. ಅಲ್ಲಂತೂ ಆರಂಭದಲ್ಲೇ ಸತತವಾಗಿ ಎರಡು ಸೋಲೆದುರಾಗಿದೆ. ಅಚ್ಚರಿಯೆಂದರೆ, ಹೀಗಿದ್ದರೂ ಕೂಢಾ ಕಿರಿಕ್ ಹುಡುಗಿಗೆ ಬೇಡಿಕೆ ತಗ್ಗಿಲ್ಲ!
ಅನಿಮಲ್ ಅಂತೊಂದು ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಳು. ಅದನ್ನು ನಿಕರ್ದೇಶನ ಮಾಡಿದ್ದಾತ ತೆಲುಗುವಾಳ್ಳು ಸಂದೀಪ್ ರೆಡ್ಡಿ ವಂಗಾ. ತೀರಾ ಹಿಂಸೆ, ಕಾಮದ ವಿಜೃಂಭಣೆಯಿಂದ ಕೂಡಿದ್ದ ಆ ಚಿತ್ರಕ್ಕೆ ಛೀಮಾರಿ ಎದುರಾಗಿತ್ತು. ಅದರಲ್ಲೊಂದು ಪಾತ್ರವಾಗಿದ್ದ ರಶ್ಮಿಕಾಗೆ ಹೇಳಿಕೊಳ್ಳುವಂಥಾ ಯಶವೇನು ಸಿಕ್ಕಿಲ್ಲ. ಆದರೆ, ಯಾವಾಗ ರಶ್ಮಿಕಾ ಸಿಕಂದರ್ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಳೋ, ಅದನ್ನು ಕಂಡು ಬಾಲಿವುಡ್ ನಟಿಯರೇ ಅವಾಕ್ಕಾಗಿದ್ದರು. ಯಾಕೆಂದರೆ, ಸಲ್ಮಾನ್ ಖಾನ್ ಗೆ ಜೋಡಿಯಾಗೋ ಅವಕಾಶ ರಶ್ಮಿಕಾಗೆ ಕೂಡಿ ಬಂದಿತ್ತು. ಸಲ್ಮಾನ್ ಮುದುಕನಾಗುತ್ತಾ ಬಂದರೂ ಆತನಿಗೆ ಜೋಡಿಯಾಗಲೊಂದು ಪೈಪೋಟಿ ಇದೆ. ಆ ರೇಸಿನಲ್ಲಿ ರಶ್ಮಿಕಾ ಗೆದ್ದರೂ ಕೂಡಾ ಸಿಕಂದರ್ ಚಿತ್ರ ಮಗುಚಿಕೊಂಡಿತ್ತು.
ಹೀಗೆ ಹಂತ ಹಂತವಾಗಿ ಬಾಲಿವುಡ್ಡಲ್ಲಿ ಎರಡು ಸೋಲುಗಳು ರಶ್ಮಿಕಾಳನ್ನು ಮುತ್ತಿಕೊಂಡಿವೆ. ಇದೆಲ್ಲದರಾಚೆ ಬಹುನಿರೀಕ್ಷಿತ ಕಾಕ್ಟೈಲ್೨ ಚಿತ್ರದಲ್ಲಿ ರಶ್ಮಿಕಾಗೆ ನಾಯಕಿಯಾಗೋ ಅವಕಾಶ ಒಲಿದು ಬಂದಿದೆ. ವರ್ಷಾಂತರಗಳ ಹಿಂದೆ ಕಾಕ್ಟೈಲ್ ಚಿತ್ರ ತೆರೆಗಂಡು ದೊಡ್ಡ ಮಟ್ಟದಲ್ಲಿಯೇ ಗೆದ್ದಿತ್ತು. ಅದರ ಸೀಕ್ವೆಲ್ ನಂತಿರೋ ಎರಡನೇ ಭಾಗದ ಬಗ್ಗೆಯೂ ಒಂದಷ್ಟು ನಿರೀಕ್ಷೆಗಳಿದ್ದಾವೆ. ಈ ಸಿನಿಮಾ ಮೂಲಕವಾದರೂ ಬಾಲಿವುಡ್ಡಲ್ಲಿ ರಶ್ಮಿಕಾಳ ಗೆಲುವಿನ ಪರ್ವ ಶುರುವಾಗಬಹುದೇನೋ ಎಂಬಂಥಾ ನಿರೀಕ್ಷೆಗಳಿದ್ದಾವೆ. ಈ ನಡುವೆ ಪುಷ್ಪಾ೨ ನಂತರದಲ್ಲಿ ತೆಲುಗಿನಲ್ಲಿಯೂ ರಶ್ಮಿಕಾ ಕೊಂಚ ಸುಧಾರಿಸಿಕೊಂಡಿದ್ದಾಳೆ. ತೆಲುಗೂ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೂ ಕಿರಿಕ್ ಹುಡುಗಿಯ ಸ್ಟಾರ್ ಗಿರಿ ಮತ್ತೆ ಚಿಗಿತುಕೊಂಡಂತಿದೆ!