ಬಿಗ್ಬಾಸ್ ಎಂಬ ಸಾಂಕ್ರಾಮಿಕ ಸೋಂಕೊಂದು ಕರ್ನಾಟಕಕ್ಕೆ ತಗುಲಿಕೊಂಡು ಹದಿಮೂರು ವರ್ಷ ಕಳೆದಿದೆ. ಅಂಥಾ ಸೋಂಕನ್ನು ವರ್ಷಾವರ್ಷ ಮಾಲೀಷು ಮಾಡುತ್ತಾ ಕಾಪಾಡಿಕೊಳ್ಳುತ್ತಲೇ, ತಲೆತಿರುಕ ಆಸಾಮಿಗಳನ್ನು ಸೆಲೆಬ್ರಿಟಿಗಳನ್ನಾಗಿಸಿ ಬೀದಿಗೆ ಬಿಟ್ಟ ಖ್ಯಾತಿ ಕಲಿಚ್ಚಾ ಸುದೀಪನಿಗಲ್ಲದೆ ಮತ್ಯಾರಿಗೆ ಸಿಗಲು ಸಾಧ್ಯ? ನಿಜ, ಆರಂಭಿಕವಾಗಿ, ನಡುವಲ್ಲೊಂದಷ್ಟು ಸೀಜನ್ನುಗಳು ಕೊಂಚ ಸಹನೀಯವಾಗಿದ್ದವು. ಕಳೆದ ಸೀಸನ್ನು ಗಿಲ್ಲಿ ನಟನೆಂಬ ಪರಮ ಸೋಂಭೇರಿಯೊಬ್ಬನ ಸೆನ್ಸ್ ಆಫ್ ಹ್ಯೂಮರ್, ಕಾಮಿಡಿ ಟೈಮಿಂಗಿನಿಂದಲೇ ಬಚಾವಾಗಿತ್ತು. ಈ ಬಾರಿ ಹದಿಮೂರನೇ ಆವೃತ್ತಿಯಂತೂ ಪಾರಂಪರಿಕ ಬಿಗ್ಬಾಸ್ ಪ್ರೇಕ್ಷಕ ವಲಯದಲ್ಲಿಯೇ ಅಕ್ಷರಶಃ ಅಸಹ್ಯ ಹುಟ್ಟಿಸಿ ಬಿಟ್ಟಿದೆ!
ಈ ಸೀಜನ್ನಿನ ಆರಂಭದಲ್ಲಿಯೇ ಅಗ್ನಿ ಪರೀಕ್ಷೆ ಅಂತೊಂದು ಆಡಿಷನ್ ಪ್ರಹಸನ ನಡೆದಿತ್ತು. ಅದೂ ಕೂಡಾ ವಾಹಿನಿಯ ಟಿಆರ್ಪಿ ಗಿಮಿಕ್ಕೆಂಬುದು ಖುದ್ದು ಪ್ರೇಕ್ಷಕರಿಗೇ ಅರ್ಥವಾಗಿತ್ತು. ಅಂಥಾ ಅಗ್ನಿ ಪರೀಕ್ಷೆ ಎಂಬೋ ಡೌಲಿನ ಮೂಲಕ ಉದಯಿಸಿದ್ದ ಪ್ರಖಾಂಡ ಪ್ರತಿಭೆ ಮಂಜ ಅಲಿಯಾಸ್ ಮಾಡರ್ನ್ ಮಹಾಕವಿ ಮಂಜ. ಅದ್ಯಾವ ತಲೆಕೆಟ್ಟವನು ಇವನನ್ನು ಕವಿ ಅಂದನೋ ಭಗವಂತನೇ ಬಲ್ಲ; ಬಿಟ್ಟಿ ಪ್ರಾಸಗಳನ್ನು ಒದರುತ್ತಾ, ಅದನ್ನೇ ಜ್ಞಾನಪೀಠ ರೇಂಜಿನ ಕವಿತೆ ಎಂಬ ಭ್ರಮ ಹೊತ್ತುಕೊಂಡಿರೋ ಈತ ಪಕ್ಕಾ ಸೈಕೋನಂತೆ ಎಗರಾಡೋದೇ ಬಿಗ್ ಬಾಸ್ ಮಂದಿಗೆ ಸರಕಾಗಿ ಬಿಟ್ಟಿತ್ತು. ಆ ಬಲದಿಂದಲೇ ಈತ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ.
ಇಂಥಾ ಮಂಜ ಪ್ರತೀ ವಾರವೂ ತನ್ನ ಕೆಟ್ಟಾ ಕೊಳಕು ಪದಪುಂಜಗಳು, ಸೈಕೋ ಮನಃಸ್ಥಿತಿಯಿಂದ ಬಿಗ್ಬಾಸ್ ಪ್ರೇಕ್ಷಕರನ್ನು ರೊಚ್ಚಿಗೆಬ್ಬಿಸಿದ್ದ. ಈ ಕೊಳಕು ನಾಲಗೆಯ ಕಾರಣದಿಂದಲೇ ಹೊರದಬ್ಬಿಸಿಕೊಂಡಿದ್ದ. ಇಂಥಾ ಸೈಕೋ ಎಲಿಮೆಂಟು ಹೊರ ಹೋಗುಯತ್ತಲೇ, ಬಿಗ್ಬಾಸ್ ಟಿಆರ್ಪಿ ಇಳಿಯಿತೋ ಗೊತ್ತಿಲ್ಲ; ವಾರದೊಪ್ಪತ್ತಿನಲ್ಲಿಯೇ ಮತ್ತೆ ಮಂಜುನಿಗೆ ವಿಶೇಷ ಎಂಟ್ರಿ ಕೊಡಲಾಗಿತ್ತು. ಎರಡನೇ ಅವಕಾಶ ಸಿಕ್ಕಿದರೆ ಧ್ವಂಸ ಗ್ಯಾರೆಂಟಿ ಅಂತೆಲ್ಲ ಪುಂಗುತ್ತಿದ್ದ ಸೈಕೋ ಹುಂಜ, ಮತ್ತೊಮ್ಮೆ ಎಂಟ್ರಿ ಕೊಟ್ಟ ನಂತರ ಘಾಟಿ ಹ್ಯಾಟೆಯಂತಿದ್ದ ಗಾನವಿಯ ಹಿಂದೆ ಸುತ್ತಕಲಾರಂಭಿಸಿದ್ದ. ಧ್ವಂಸವಾಗಿದ್ದು ಬಿಗ್ಬಾಸ್ ಮಂದಿಯ ಭ್ರಮೆಯಷ್ಟೆ!
ಇಂಥಾ ಸೈಕಿಕ್ ಆಸಾಮಿಗಳನ್ನು ಸಮಾಜದ ಕಣ್ಣಿಗೆ ಒಳ್ಳೆಯವರೆಂಬಂತೆ ಬಿಂಬಿಸುವ ಕಿಚ್ಚನ ಕಸರತ್ತು ನಿಜಕ್ಕೂ ರೇಜಿಗೆ ಮೂಡಿಸುತ್ತೆ. ಪ್ರತೀ ವಾರ ಸ್ಪರ್ಧಿಗಳು ಮನೆತುಂಬಾ ವಿಕಾರಗಳನ್ನ ವಿಸರ್ಜಿಸಿ ಗಬ್ಬೆಬ್ಬಿಸಿರುತ್ತಾರೆ. ವಾರದ ಕೊನೆಯಲ್ಲಿ ಅದನ್ನೆಲ್ಲ ಕ್ಲೀನು ಮಾಡುವಂತೆ ಕಿಚ್ಚನ ಎಂಟ್ರಿ ಯಾಗುತ್ತೆ. ಇದೆಲ್ಲ ಸುದೀಪ್ಗೆ ಬೇಕಿತ್ತಾ? ಇದು ಖಂಡಿತವಾಗಿಯೂ ಕಿಚ್ಚನ ಘನತೆಗೆ ತಕ್ಕುದಾದ ಕಸುಬಲ್ಲ. ಹಾಗಂತ ಆತನನ್ನು ಆರಾಧಿಸುವ ಮಂದಿಯೇ ಅಸಹನೆಗೀಡಾಗಿದ್ದಾರೆ. ಬಿಗ್ಬಾಸ್ ವೇದಿಕೆಯಲ್ಲಿನ ಕಸರತ್ತುಗಳ ಕಾರಣದಿಂದಲೇ ಟ್ರೋಲುಗಳುಇಗೆ ಆಹಾರವಾಗುತ್ತಿರೋ ಕಿಚ್ಚನ ದುರ್ವಿಧಿ ಕಂಡು ಖುದ್ದು ಅಭಿಮಾನಿಗಳೇ ಬೇಸರಿಸಿಕೊಂಡಿದ್ದಾರೆ. ಈ ಬಾರಿಯಾದರೂ ಸದರಿ ಕಾರ್ಯಕ್ರಮದ ಸಾರಥ್ಯದಿಂದ ಕಿಚ್ಚ ಹಿಂದೆ ಸರಿಯುವಂತಾದರೆ, ಕರ್ನಾಟಕಕ್ಕೆ ಅಮರಿಕೊಂಡಿರುವ ಕೆಟ್ಟ ಸಾಂಕ್ರಾಮಿಕವೊಂದು ತೊಲಗಿದಂತಾಗುತ್ತದೆ. ಹಾಗಂತ ಪ್ರೇಕ್ಷಕರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ!

