ನಮ್ಮ ಕಣ್ಣೆದುರೇ ಕದಲುವ ಕಥನಗಳನ್ನು ಮನಸಿಗಿಳಿಯುವಂತೆ ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿರುವವರು ಸಿದ್ದು ಪೂರ್ಣಚಂದ್ರ. ಇತ್ತೀಚೆಗಷ್ಟೇ ಬ್ರಹ್ಮ ಕಮಲ ಚಿತ್ರದೊಂದಿಗೆ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಅವರೀಗ, ಪುಟ್ಟಣ್ಣನ ಕತ್ತೆ ಎಂಬ ಮತ್ತೊಂದು ಸೂಕ್ಷ್ಮ ಕಥನದೊಂದಿಗೆ ಪ್ರೇಕ್ಷಕರನ್ನು ಅಚ್ಚರಿಗೊಳಿಸಲು ಅಣಿಗೊಂಡಿದ್ದಾರೆ. ಇದೇ ಹೊತ್ತಿನಲ್ಲಿ ಪುಟ್ಟಣ್ಣನ ಕತ್ತೆ ಚಿತ್ರ ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್ಗೆ ಆಯ್ಕೆಯಾದ ಸಂಭ್ರಮದ ಸುದ್ದಿಯೊಂದು ಜಾಹೀರಾಗಿದೆ!
ಸಿದ್ದು ಪೂರ್ಣಚಂದ್ರ ನಿರ್ದೇಶನದ ಪುಟ್ಟಣ್ಣನ ಕತ್ತೆ ಚಿತ್ರ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್ಗೆ ಆಯ್ಕೆಯಾಗಿರೋದು ಕನ್ನಡಿಗರೆಲ್ಲರ ಪಾಲಿಗೆ ಹೆಮ್ಮೆಯ ವಿಚಾರ. ಯಾಕೆಂದರೆ, ಮೆಲ್ಬೋರ್ನ್ ಫಿಲಂ ಫೆಸ್ಟಿವಲ್ಗೆ ಸಿನಿಮಾವೊಂದು ಆಯ್ಕೆಯಾಗೋ ಪ್ರಕ್ರಿಯೆ ಅತ್ಯಂತ ಕಠಿಒಣವಾಗಿರುತ್ತದೆ. ಇಡೀ ವಿಶ್ವದ ನಾನಾ ದೇಶಗಳ, ಭಾಷೆಗಳ ಸಿನಿಮಾಗಳು ಆ ರೇಸಿನಲ್ಲಿರುತ್ತವೆ. ಅಂಥಾ ತುರುಸಿನ ಸ್ಪರ್ಧೆಯನ್ನು ಕಂಟೆಂಟಿನ ಬಲದಿಂದ ಮಾತ್ರವೇ ಗೆದ್ದುಕೊಳ್ಳಲು ಸಾಧ್ಯ. ಅಂಥಾ ಸ್ಪರ್ಧೆಯನ್ನು ದಾಟಿಕೊಂಡು ಪುಟ್ಟಣ್ಣನ ಕತ್ತೆ ಚಿತ್ರ ಆಯ್ಕೆಯಾಗಿದೆ ಎಂದರೆ, ಅದು ಖಂಡಿತವಾಗಿಯೂ ಕನ್ನಡ ಚಿತ್ರರಂಗದ ಪಾಲಿಗೂ ಹೆಮ್ಮೆಯ ವಿಚಾರ.
ಬೆಂಗಳೂರಿನಂಥಾ ನಗರಗಳಲ್ಲಿ ಕತ್ತೆ ಹಾಲು ಮಾರುವವರು ಆಗಾಗ ಕಾಣಿಸಿಕೊಳ್ಳುತ್ತಾರೆ. ಅದ್ಯಾವುದೋ ಹಳ್ಳಿಯೊಂದರಿಂದ ಹಾಗೆ ಕತ್ತೆಯೊಂದಿಗೆ ಪಟ್ಟಣ ಸೇರಿಕೊಂಡವನ ಸುತ್ತ ಘಟಿಸುವ ಆಸಕ್ತಿದಾಯಕ ಕಥೆ ಈ ಸಿನಿಮಾದ ಆಂತರ್ಯದಲ್ಲಿದೆ. ಕನ್ನಡದ ಮಟ್ಟಿಗೆ ಕತ್ತೆಯೊಂದನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಂಡ ಮೊದಲ ಚಿತ್ರವೆಂಬ ಹೆಗ್ಗಳಿಕೆಗೂ ಪುಟ್ಟಣ್ಣನ ಕತ್ತೆ ಚಿತ್ರ ಪಾತ್ರವಾಗುತ್ತದೆ. ಭೀಮೇಶ್ ಗೌಡ ಈ ಕಥನದ ಆತ್ಮದಂಥಾ ಪುಟ್ಟಣ್ಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನೀಶ್ ಆರ್ಯನ್ ಈ ಸಿನಿಮಾದ ನಾಯಕನಾಗಿ, ಸಂಕೀರ್ಣವಾದೊಂದು ಪಾತ್ರದಲ್ಲಿ ನಟಿಸಿದ್ದಾರೆ.
ಪೂರ್ಣಚಂದ್ರ ಫಿಲಂಸ್ ಬ್ಯಾನರಿನಡಿಯಲ್ಲಿ ತನ್ಮಯ್ ಎಸ್ ಗೌಡ ನಿರ್ಮಾಣ ಮಾಡಿರುವ, ಸಿದ್ದು ಪೂರ್ಣಚಂದ್ರ ಕಥೆ ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಅನೀಶ್ ಆರ್ಯನ್, ಭೀಮೇಶ್ ಗೌಡ, ಎನ್.ಟಿ ರಾಮಸ್ವಾಮಿ, ಕವಿತಾ ಕಂಬಾರ್, ವಿಭಾ, ಕಲಾರತಿ ಮಹದೇವ್, ರೋಹಿಣಿ, ರಶ್ಮಿ ಮೈಸೂರ್, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ, ದೀಪು ಸಿ.ಎಸ್ ಸಂಕಲನ ಈ ಚಿತ್ರಕ್ಕಿದೆ.
keywords: puttannana katthe, siddu poornachandra, sandalwood

