ಈಗೊಂದಷ್ಟು ದಿನಗಳಿಂದೀಚೆಗೆ ಪ್ರೇಕ್ಷಕರ ವಲಯದಲ್ಲಿ ಆಸಕ್ತಿ ಕೆರಳಿಸಿರುವ ಚಿತ್ರ `ಅ ಡೇಟ್’. ಈಗಾಗಲೇ ಹಲವಾರು ಕಿರುಚಿತ್ರಗಳ ಮೂಲಕ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸಂಪಾದಿಸಿಕೊಂಡಿದ್ದ ವಿಮಲ್ ರಾಜ್ ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟೀಸರ್ ಈ ಹಿಂದೆ ಬಿಡುಗಡೆಗೊಂಡಿತ್ತು. ಇದೀಗ ಅ ಡೇಟ್ ಸೆಪ್ಟೆಂಬರ್೪ರಂದು ಬಿಡುಗಡೆಗೆ ಸಜ್ಜಾಗಿದೆ. ಇದೇ ಹೊತ್ತಿನಲ್ಲಿ ಚಿತ್ರತಂಡ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ಈ ಸಂಬಂಧವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಟ್ಟಾರೆ ಸಿನಿಮಾ ಬಗೆಗಿನ ಒಂದಷ್ಟು ಆಸಕ್ತಿದಾಯಕ ಅಂಶಗಳನ್ನು ಹಂಚಿಕೊಂಡಿದೆ.
ಕನ್ನಡ ಚಿತ್ರರಂಗಕ್ಕೆ ಅಡಿಗಡಿಗೆ ಹೊಸಬರ ತಂಡಗಳು ಎಂಟ್ರಿ ಕೊಡುತ್ತಿವೆ. ಈ ಮೂಲಕ ಹೊಸತನದ ತಿಳಿಗಾಳಿಯೂ ತಂತಾನೇ ಬೀಸಿಕೊಳ್ಳುತ್ತಿದೆ. ಹೊಸತನದ ಹೊಳಹಿನೊಂದಿಗೆ ಮೂಡಿ ಬಂದಿರುವ ಅ ಡೇಟ್ ಟೀಸರ್ ಕಂಡ ಪ್ರೇಕ್ಷಕರ ಕಡೆಯಿಂದ ಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಅ ಡೇಟ್ ಚಿತ್ರವೂ ಕೂಡಾ ಹೊಸಾ ಬಗೆಯದ್ದೊಂದು ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಬೆಂಗಳೂರಿನ ಭೂಮಿಕೆಯಲ್ಲಿ ಮುಖಾಮುಖಿಯಾಗು ಎರಡು ಜೀವಗಳ ನಡುವೆ, ಒಂದು ದಿನದಲ್ಲ್ಲಿ ಘಟಿಸುವ ರೋಮಾಂಚಕ ಕಥೆಯ ಸುಳಿವನ್ನು ಟ್ರೈಲರ್ ಮೂಲಕ ಕಂಡ ಪ್ರೇಕ್ಷಕರು ಖುಷಿಗೊಂಡಿದ್ದಾರೆ.

ಈ ಟ್ರೈಲರ್ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿಮಲ್ ರಾಜ್ ಎನ್ ಸಿನಿಮಾ ಆರಂಭವಾಗಿದ್ದರ ಹಿಂಚುಮುಂಚಿನ ಒಂದಷ್ಟು ವಿಚಾರಗಳನ್ನು ಜಾಹೀರುಗೊಳಿಸಿದ್ದಾರೆ. ಅದರನ್ವಯ ಹೇಳೋದಾದರೆ, ಕೊರೋನಾ ಕಾಲಘಟ್ಟದಲ್ಲಿ ಅಂದರೆ, ೨೦೨೦ರಲ್ಲಿ ವಿಮಲ್ ರಾಜ್ ಸಿನಿಮಾ ನಿರ್ದೇಶಕರಾಗುವ ಗಟ್ಟಿ ನಿರ್ಧಾರ ಮಾಡಿದ್ದರು. ಈ ಹಂತದಲ್ಲಿ ನಿರ್ಮಾಪಕರನ್ನು ಹುಡುಕುವ ಉದ್ದೇಶದಿಂದಲೇ `ಂ ಆಂಖಿಇ’ ಎಂಬ ಕಿರುಚಿತ್ರವೊಂದನ್ನು ಇಂಗ್ಲಿಷ್ ಭಾಷೆಯನ್ನಿ ರೂಪಿಸಿದ್ದರು. ಆದರೆ, ಅದೇನೇ ಪ್ರಯತ್ನ ಮಾಡಿದರು ನಿರ್ಮಾಪಕರು ಸಿಕ್ಕಿರಲಿಲ್ಲ. ಕಡೆಗೂ ಅದನ್ನು ಯೂಟ್ಯೂಬ್ ಮೂಲಕ ಬಿಡುಗಡೆಗೊಳಿಸಿದ್ದ ವಿಮಲ್ ರಾಜ್ ಅವರಿಗೆ ಅಚ್ಚರಿ ಕಾದಿತ್ತು!
ಯಾಕೆಂದರೆ, ನಿರೀಕ್ಷೆಗೂ ಮೀರಿ ಆ ಕಿರು ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಎಪ್ಪತ್ತೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿತ್ತು. ಓರ್ವ ನಿರ್ದೇಶಕನಾಗಿ ವಿಮಲ್ ರಾಜ್ ಪಾಲಿಗದು ಪ್ರಥಮ ಹೆಜ್ಜೆಯಲ್ಲಿಯೇ ಸಿಕ್ಕ ದೊಡ್ಡ ಭರವಸೆಯಂತೆ ಭಾಸವಾಗಿತ್ತು. ಆ ಬಲದಿಂದಲೇ ಸ್ವತಂತ್ರ ನಿರ್ದೇಶಕರಾಗುವ ಇರಾದೆಯೊಂದಿಗೆ ಈ ಪೂರ್ಣಪ್ರಮಾಣದ ಚಿತ್ರವನ್ನು ವಿಮಲ್ ರಾಜ್ ನಿರ್ಮಾಣ ಮಾಡಿದ್ದಾರೆ. ಸುಜನೀತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈರನ್ನು ನಾಯಕ ನಾಯಕಿಯರನ್ನಾಗಿಸಿ ಈ ಸಿನಿಮಾವನ್ನು ರೂಪಿಸಿದ್ದಾರೆ. ಇದೀಗ ಈ ಟ್ರೈಲರ್ಗೆ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಕಂಡು ಚಿತ್ರತಂಡ ಖುಷಿಗೊಂಡಿದೆ.
ಇದು ಬೆಂಗಳೂರು ಹುಡುಗ ದೆಹಲಿ ಮೂಲದ ಹುಡುಗಿಯನ್ನು ಸಂಧಿಸುವ, ಅವರಿಬ್ಬರ ಸುತ್ತ ಒಂದು ದಿನದಲ್ಲಿ ಘಟಿಸುವ ಕಥೆ ಹೊಂದಿರುವ ಸಿನಿಮಾ ಎಂಬ ವಿಚರವನ್ನೂ ವಿಮಲ್ ರಾಜ್ ಎನ್ ತೆರೆದಿಟ್ಟರು. ೨೦೧೬ರಿಂದೀಚೆಗೆ ಕಿರುಚಿತ್ರಗಳನ್ನು ನಿರ್ದೇಶನ ಮಾಡುತ್ತಾ ಬಂದಿದ್ದ ವಿಮಲ್ ರಾಜ್ ಎನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಹೋಪ್, ಲಾಫಿಂಗ್ ಬುದ್ಧ, ಬಾಸ್ ಥರದ ಚಿತ್ರಗಳಲ್ಲಿ ನಟಿಸಿದ್ದ ಸುಜನೀತ್ ಶೆಟ್ಟಿ ಅ ಡೇಟ್ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಾರದೊಪ್ಪತ್ತಿನಲ್ಲಿಯೇ ಅ ಡೇಟ್ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.
keywords: A DATE movie, vimalraj n, sujanith shetty, ashvini shenoy

