ಇತ್ತೀಚಿನ ವರ್ಷಗಳಲ್ಲಿ ಸಿನಿಮಾವೊಂದು ಎರಡ್ಮೂರು ವಾರಗಳ ಕಾಲ ಸಿನಿಮಾ ಮಂದಿರಗಳಲ್ಲಿ ನೆಲೆ ಕಂಡುಕೊಳ್ಳೋದೇ ಕಷ್ಟ ಎಂಬಂತಾಗಿದೆ. ಇದಕ್ಕೆ ಕಾರಣವಾಗಿರುವುದು ಸಾಲು ಸಾಲು ಸವಾಲುಗಳ ಪಟ್ಟಿ. ಅದೆಲ್ಲವನ್ನೂ ಮೀರಿಕೊಂಡು ಕನ್ನಡ ಚಿತ್ರವೊಂದು ಯಶಸ್ವಿಯಾಗಿ ಐವತ್ತು ದಿನಗಳನ್ನು ದಾಟಿಕೊಳ್ಳೋದಿದೆಯಲ್ಲಾ? ಅದು ಸಿನಿಮಾ ಪ್ರೇಮಿಗಳೆಲ್ಲರ ಪಾಲಿಗೆ ಅಕ್ಷರಶಃ ಸಂಭ್ರಮ. ಡಾರ್ಲಿಂಗ್ ಕೃಷ್ಣ ನಿರ್ದೆಶನ ಮಾಡಿ, ನಾಯಕನಾಗಿ ನಟಿಸಿರುವ ಲವ್ ಮಾಕ್ಟೇಲ್೩ ಚಿತ್ರದ ಮೂಲಕ ಅಂಥಾದ್ದೊಂದು ಸಂಭ್ರಮವೀಗ ದಕ್ಕಿದಂತಾಗಿದೆ. ಈ ವರ್ಷದ ಮೊದಲ ಸೂಪರ್ ಹಿಟ್ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಲವ್ ಮಾಕ್ಟೇಲ್೩ ಇದೀಗ ಐವತ್ತು ದಿನಗಳನ್ನು ಪೂರೈಸಿಕೊಂಡು, ನೂರರ ಗಡಿಯತ್ತ ದಾಪುಗಾಲಿಡುತ್ತಿದೆ!
ಡಾರ್ಲಿಂಗ್ ಕೃಷ್ಣ ಈ ಹಿಂದೆ ಲವ್ ಮಾಕ್ಟೇಲ್ನ ಎರಡು ಸರಣಿಗಳ ಮೂಲಕವೂ ಗೆಲುವು ಕಂಡಿದ್ದರು. ಮೂರನೇ ಆವೃತ್ತಿಯ ಗೆಲುವು ಮಾತ್ರ ಈ ಹಿಂದಿನ ಎರಡು ಗೆಲುವುಗಳನ್ನು ನಿಖರವಾಗಿಯೇ ಮೀರಿಸಿದೆ. ಸಾಮಾನ್ಯವಾಗಿ, ಸೀಕ್ವೆಲ್ಗಳು ಯಶ ಕಾಣೋದೇ ಅಪರೂಪ. ಅಂಥಾದ್ದರಲ್ಲಿ ಒಂದನ್ನೊಂದು ಮೀರಿಸುವಂಥಾ ಮೂರು ಸರಣಿ ಗೆಲುವುಗಳ ಮೂಲಕ ಡಾರ್ಲಿಂಗ್ ಕೃಷ್ಣ ಅಚ್ಚರಿ ಮೂಡಿಸಿರೋದಂತೂ ಸತ್ಯ. ಕೊರೋನಾ ಕಾಲಘಟ್ಟದಲ್ಲಿ ಒಂದಿಡೀ ಸಿನಿಮಾ ರಂಗವೇ ಸ್ತಬ್ಧವಾಗಿದ್ದಾಗ ಲವ್ ಮಾಕ್ಟೇಲ್ ಚಿತ್ರವನ್ನು ಬಿಡುಗಡೆಗೊಳಿಸಿದ್ದವರು ಕೃಷ್ಣ. ಆ ಕಾಲಮಾನದಲ್ಲಿ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ನವ ಚೈತನ್ಯ ತುಂಬಿ ಬಿಟ್ಟಿತ್ತು. ಈ ವರ್ಷದ ಆರಂಭದಲ್ಲಿ ಮೊದಲ ಗೆಲುವಗಿ ದಾಖಲಾಗಿರುವ ಲವ್ ಮಾಕ್ಟೇಲ್೩ ಮೂಲಕವೂ ಅಂಥಾದ್ದೇ ಚೈತನ್ಯ ಕನ್ನಡ ಚಿತ್ರರಂಗದ ನರನಾಡಿಗಳಿಗೆ ಹಬ್ಬಿಕೊಂಡಿದೆ!
ಈ ಆವೃತ್ತಿಯಲ್ಲಿ ಹಿಂದಿನ ಎರಡು ಭಾಗಗಳಿಗಿಂತಲೂ ತೀವ್ರವಾದ ಶೈಲಿಯಲ್ಲಿ ಡಾರ್ಲಿಂಗ್ ಕೃಷ್ಣ ದೃಷ್ಯ ಕಟ್ಟಿದ್ದರು.ಆ ಭಾವುಕ ಕಥೆಗೆ ಪ್ರೇಕ್ಷಕರೆಲ್ಲ ಮಾರು ಹೋಗಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಹಿಡಿಸುವ ಮೂಲಕ ಲವ್ ಮಾಕ್ಟೇಲ್೩ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಮಾರ್ಚ್ ಹತ್ತೊಂಬತ್ತರಂದು ಬಯಸದೇ ಬಂದ ಭಾಗ್ಯವೆಂಬಂತೆ ಈ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿತ್ತು. ಹಾಗಂತ ಆ ಹಾದಿಯೇನು ಸಲೀಸಿನದ್ದಾಗಿರಲಿಲ್ಲ. ಯಾಕೆಂದರೆ, ಧುರಂಧರ್೨ನಂಥಾ ಪ್ಯಾನಿಂಡಿಯಾ ಸಿನಿಮಾದ ರೂಪದಲ್ಲಿ ಮಹಾ ಸವಾಲೆದುರಾಗಿತ್ತು. ಅದರ ಮುಂದೆ ಈ ಸಿನಿಮಾ ನಿಲ್ಲಲು ಸಾಧ್ಯವಾ ಎಂಬ ಆತಂಕಪೂರಿತ ಪ್ರಶ್ನೆಯೊಂದು ಖುದ್ದು ಕನ್ನಡ ಸಿನಿಮಾ ಪ್ರೇಮಿಗಳನ್ನೇ ಗಾಢವಾಗಿ ಕಾಡಿದ್ದು ಸುಳ್ಳಲ್ಲ. ಅದೆಲ್ಲವನ್ನೂ ನೀಗಿಸಿ ಯಶಸ್ವೀ ಪ್ರದರ್ಶನ ನೀಡಿದ್ದ ಲವ್ ಮಾಕ್ಟೇಲ್೩ ಇದೀಗ ಅದೇ ಆವೇಗದೊಂದಿಗೆ ಐವತ್ತು ದಿನಗಳನ್ನು ದಾಟಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಇಂಥಾದ್ದೊಂದು ಸಂಭ್ರಮಕ್ಕೆ ಕಾರಣವಾಗ ಪ್ರೇಕ್ಷಕರಿಗೆಲ್ಲ ಡಾರ್ಲಿಂಗ್ ಕೃಷ್ಣ ಧನ್ಯವಾದ ಸಲ್ಲಿಸಿದ್ದಾರೆ. ಕ್ರಿಸ್ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
keywords: lovemocktail3 #milana nagaraj, darling krishna

