ಸಿನಿಮಾ ರಂಗಕ್ಕೂ ಮೌಢ್ಯಗಳಿಗೂ ಅವಿನಾಭಾವ ನಂಟಿದೆ. ಈ ವಿಚಾರದಲ್ಲಿ ರಾಜಕಾರಣಿಗಳನ್ನೇ ಸರಿಗಟ್ಟುವಂತೆ ಬಹತೇಕ ಚಿತ್ರರಂಗಗಳ ನಟ ನಟಿಯರು ಮೌಢ್ಯಗಳಿಗೆ ವಶವಾದ ಉದಾಹರಣೆ ಸಾಕಷ್ಟಿದೆ. ತೀರಾ ಸಂಡಾಸಿಗೆ ಹೋಗುವಾಗಲೂ ಲಿಂಬೆಹಣ್ಣು ಕೈಲಿಟ್ಟುಕೊಳ್ಳೋ ರೇವಣ್ಣನಂಥಾ ಎಲಿಮೆಂಟುಗಳನ್ನು ಕಾಣುತ್ತಿರುವ ನಮ್ಮ ಪಾಲಿಗೀಗ ಮೌಢ್ಯವೊಂದು ಮ್ಯಾಟರೇ ಅಲ್ಲ ಎಂಬಂತಾಗಿದೆ. ಆದರೆ, ಅಸಲೀ ಭಕ್ತಿಗೆ ಅವಮಾನದಂತಿರೋ ಇಂಥಾ ಮೌಢ್ಯಗಳು ನಮ್ಮಲ್ಲಿಗೆ ಮಾತ್ರವೇ ಸೀಮಿತವಾಗಿಲ್ಲ. ನೆರೆಯ ಸಿನಿಮಾ ರಂಗದ ದೊಡ್ಡ ನಟ ನಟಿಯರೇ ಮೂಢ ನಂಬಿಕೆಗಳ ಕೈಗೆ ಬುದ್ಧಿ ಕೊಟ್ಟು ಅದ್ಯಾರ್ಯಾರೋ ತಲೆಮಾಸಿನ ಜ್ಯೋತಿಷಿಗಳನ್ನು ಉದ್ಧಾರವಾಗಿಸಿದ್ದಾರೆ. ಇಂಥ ನಂಬಿಕೆಯಿಂದಲೇ ಅನೇಕ ನಟರು ಸೂಪರ್ ಹಿಟ್ ಆಗಬಹುದಾದ, ಭಿನ್ನವಾಗಿ ನೆಲೆ ಕಂಡುಕೊಳ್ಳಬಹುದಾದ ಸಿನಿಮಾಗಳನ್ನು ಬೇಕೆಂತಲೇ ಕೈಬಿಟ್ಟು ಪರಿತಪಿಸಿದ್ದಾರೆ. ಆ ಸಾಲಿನಲ್ಲಿ ತೆಲುಗಿನ ಖ್ಯಾತ ಕಾಮಿಡಿ ಸ್ಟಾರ್ ಬಾಲಯ್ಯನ ಹೆಸರೂ ಮುಂಚೂಣಿಯಲ್ಲಿದೆ!
ಬಾಲಯ್ಯನ ಅಧ್ಯಾತ್ಮಿಕ ನಂಬಿಕೆಗಳು ಎಲ್ಲರಿಗೂ ಚಿರಪರಿಚಿತ. ಆದರೆ, ಪ್ರತಿಯೊಂದಕ್ಕೂ ಜ್ಯೋತಿಷಿಗಳ ಮೊರೆ ಹೋಗುವ ಆತನ ಗುಣದ ಬಗ್ಗೆ ಆಪ್ತ ವಲಯಕ್ಕೆ ಮಾತ್ರವೇ ಗೊತ್ತಿತ್ತು. ಹಿರಿಯ ನಿರ್ದೇಶಕ ಕೋಡಿ ರಾಮಕೃಷ್ಣ ಸಂದರ್ಶನವೊಂದರ ಮೂಲಕ ಹಂಚಿಕೊಂಡಿರುವ ಒಂದಷ್ಟು ವಿಚಾರಗಳ ಮೂಲಕ ಬಾಲಯ್ಯನ ಜ್ಯೋತಿಷ್ಯ ಪ್ರೇಮ ಮತ್ತು ಅದರಿಂದ ಸಿನಿಮಾವೊಂದರ ಮೇಲಾಗಿದ್ದ ಪರಿಣಾಮಗಳ ಕಥೆಯನ್ನು ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ಒಂದು ಸಿನಿಮಾವನ್ನು ಒಪ್ಪಿಕೊಳ್ಳೋದರಿಂದ ಮೊದಲ್ಗೊಂಡು ಎಲ್ಲ ವಿಚಾರದಲ್ಲಿಯೂ ಬಾಲಯ್ಯ ಜ್ಯೋತಿಷ್ಯದ ಮೊರೆ ಹೋಗುತ್ತಾ ಬಂದಿದ್ದಾರೆ. ಇದರ ಫಲವಾಗಿಯೇ ಒಂದಷ್ಟು ಹಿಟ್ ಸಿನಿಮಾಗಳನ್ನೂ ಕೈಯಾರೆ ಕಡೆಗಣಿಸಿದ್ದಾರೆ.
ಕೋಡಿ ರಾಮಕೃಷ್ಣ ನಿರ್ದೇಶನದ ಸಿನಿಮಾ ಮೂಲಕವೇ ವೃತ್ತಿ ಜೀವನದ ಹಿಟ್ ಅನುಭೂತಿಯನ್ನು ಸವಿದಿದ್ದವರು ಬಾಲಕೃಷ್ಣ. ಆ ನಂತರದಲ್ಲಿ ರಾಮಕೃಷ್ಣ ಜಾನಪದ ಕಥೆಯಾಧಾರಿತವಾದ ವಿಕ್ರಮ ಸಿಂಹ ಭೂಪತಿಯನ್ನು ಅಣಿಗೊಳಿಸಿದ್ದರು. ಬಾಲಯ್ಯ ಕೂಡಾ ಖುಷಿಯಿಂದಲೇ ಆ ಸಿನಿಮಾ ಭಾಗವಾಗಿದ್ದರು. ಈ ಹಿಂದೆ ಎಂದೂ ಬಾಲಯ್ಯ ಇಂಥಾ ಸಿನಿಮಾದಲ್ಲಿ ನಟಿಸಿರಲಿಲ್ಲ. ಆದರೆ, ಚಿತ್ರೀಕರಣ ಅರವತ್ತು ಭಾಗದಷ್ಟು ಮುಗಿಯೋ ಹೊತ್ತಿಗೆಲ್ಲ ನಿರ್ಮಾಪಕ ಗೋಪಾಲರೆಡ್ಡಿಗೆ ಅನಾರೋಗ್ಯ ಕಾಡಿತ್ತು. ಅದಾದದ್ದೇ ಬಾಲಯ್ಯ ಜ್ಯೋತಿಷಿಯೋರ್ವನ ಬಳಿ ಓಡಿದ್ದರಂತೆ. ಆ ಜ್ಯೋತಿಷಿಯ ಆದೇಶದಂತೆ ಬಾಲಯ್ಯ ಏಕಾಏಕಿ ಭೂಪತಿ ಚಿತ್ರವನ್ನು ಕೈ ಬಿಟ್ಟಿದ್ದರು. ಅದೆಷ್ಟೇ ಅಲವತ್ತುಕೊಂಡರೂ ನಟಿಸಲು ಒಪ್ಪಲೇ ಇಲ್ಲ. ಒಂದು ವೇಳೆಬ ಪೂರ್ಣಗೊಳಿಸಿದ್ದರೆ, ಆ ಸಿನಿಮಾ ಸೂಪರ್ ಹಿಟ್ಟಾಗುತ್ತಿತ್ತೆಂಬುದು ರಾಮಕೃಷ್ಣರ ನಂಬಿಕೆ. ಬಾಲಯ್ಯ ಇದುವರೆಗೂ ತನ್ನ ವೃತ್ತಿ ಬದುಕಿನಲ್ಲಿ ಇಂಥಾ ಹಿಟ್ ಆಗಬಹುದಾದ ಅನೇಕ ಸಿನಿಮಾಗಳನ್ನು ಕವಡೆಯಾಟ ನಂಬಿ ಕೈಬಿಟ್ಟಿದ್ದಾರಂತೆ!
keywords: balayya, nandamoori balakrishna, kodi ramakrishna

