ಡಾರ್ಲಿಂಗ್ ಕೃಷ್ಣ ಹ್ಯಾಟ್ರಿಕ್ ಗೆಲುವಿಗೆ ಮತ್ತಷ್ಟು ಮುದ ಬಂದ ಖುಷಿಯಲ್ಲಿದ್ದಾರೆ. ಇದು ಕೇವಲ ಕೃಷ್ಣ ಮತ್ತು ಲವ್ ಮಾಕ್ಟೇಲ್೩ ಚಿತ್ರತಂಡದ ಖುಷಿಯಲ್ಲ; ಒಂದಿಡೀ ಸಿನಿಮಾ ರಂಗದ ಪಾಲಿನ ಸಂಭ್ರಮವೂ ಹೌದು. ಯಾಕೆಂದರೆ, ಈವತ್ತಿನ ದಿನಮಾನದಲ್ಲಿ ಸಿನಿಮಾವೊಂದು ವಾರದಾಚೆಗೆ ಚಿತ್ರ ಮಂದಿರಗಳಲ್ಲಿ ಉಳಿಯುವುದೇ ಸವಾಲಿನ ಸಂಗತಿ. ಅಂಥಾದ್ದರ ನಡುವೆ ಲವ್ ಮಾಕ್ಟೇಲ್೩ ಆರಂಭದ ಕ್ರೇಜ್ ಅನ್ನೇ ಕಾಪಿಟ್ಟುಕೊಂಡು, ಯಶಸ್ವಿಯಾಗಿ ಇಪ್ಪತೈದು ದಿನ ಪೂರೈಸುತ್ತದೆ ಎಂದರೆ ಅದೇನು ಸಲೀಸಿನ ಸಂಗತಿಯಲ್ಲ. ಆ ಮೈಲಿಗಲ್ಲನ್ನು ದಾಟಿಕೊಳ್ಳುವ ಮೂಲಕ ಲವ್ ಮಾಕ್ಟೇಲ್೩ ಈ ವರ್ಷದ ಮೊದಲ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ!
ಇಂಥಾದ್ದೊಂದು ಅಮೋಘ ಗೆಲುವನ್ನು ಸಾಧ್ಯವಾಗಿಸಿದ ಪ್ರೇಕ್ಷಕರೆಲ್ಲರಿಗೆ ಡಾರ್ಲಿಂಗ್ ಕೃಷ್ಣ ಧನ್ಯವಾದ ಹೇಳಿದ್ದಾರೆ. ಹಾಗೆ ನೋಡಿದರೆ, ಲವ್ ಮಾಕ್ಟೇಲ್೩ಗೆ ಅನಿರೀಕ್ಷಿತವಾಗಿ ಒಂದರ ಹಿಂದೊಂದರಂತೆ ಸಕಾರಾತ್ಮಕ ವಾತಾವರಣ ನಿರ್ಮಾಣಗೊಂಡಿತ್ತು. ಟಾಕ್ಸಿಕ್ನಂಥಾ ಸಿನಿಮಾದ ಬಿಡುಗಡೆ ದಿನಾಂಕ ಏಕಾಏಕಿ ಮುಂದಕ್ಕೆ ಹೋಗಿದ್ದರಿಂದ ಮಾರ್ಚ್ ೧೯ರಂದು ಬಿಡುಗಡೆಗೊಳ್ಳುವ ಯೋಗವೊಂದು ತಂತಾನೇ ದಕ್ಕಿತ್ತು. ಕೆವಿಎನ್ ಸಂಸ್ಥೆ ರಾಜ್ಯಾದ್ಯಂತ ವಿತರಣಾ ಕೈಂಕರ್ಯವನ್ನು ಯಶಸ್ವಿಯಾಗಿ ಮಾಡಿತ್ತು. ಆದರೆ, ಇಂಥಾ ಸಕಾರಾತ್ಮಕ ಪರಿಸರದಲ್ಲಿಯೇ ಧುರಂಧರ್೨ ಎಂಬ ದೊಡ್ಡ ಸವಾಲೂ ಕೂಡಾ ಲಲವವ ಮಾಕ್ಟೇಲ್೩ ಮುಂದೆ ನಿಂತು ಗುಟುರು ಹಾಕಿತ್ತು.
ಇಲ್ಲಿ ಗಮನಿಸಲೇ ಬೇಕಾದ ವಿಚಾರವೊಂದಿದೆ. ಅದೆಂಥಾ ಶುಭ ಘಳಿಗೆಯಲ್ಲಿ ಬಿಡುಗಡೆಗೊಂಡರೂ ಕೂಡಾ ಯಾವುದೇ ಸಿನಿಮಾದ ಆಂತರ್ಯದಲ್ಲಿ ಕಸುವಿಲ್ಲದೇ ಹೋದರೆ ವಾರದೊಪ್ಪತ್ತಿನಲ್ಲಿಯೇ ಸಿನಿಮಾ ಮಂದಿರಗಳಿಂದ ಎಗರಿಕೊಳ್ಳುವಂತಾಗುತ್ತದೆ. ಲವ್ ಮಾಕ್ಟೇಲ್೩ ರೂಪುಗೊಂಡಿರುವ ಪರಿಗೆ ಪ್ರೇಕ್ಷಕರು ಫಿದಾ ಆಗಿದ್ದರಿಂದಲೇ ಧುರಂಧರ್೨ ಎಂಬ ಬಿರುಗಾಳಿಯ ಮುಂದೆ ಲವ್ ಮಾಕ್ಟೇಲ್೩ ಕಾಲೂರಿ ನಿಂತು ಗೆಲುವು ಕಂಡಿದ್ದು ನಿಜಕ್ಕೂ ಬೆರಗಿನ ಸಂಗತಿ. ಯಾವುದೇ ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬಂದಿದ್ದರೆ ಕನ್ನಡದ ಪ್ರೇಕ್ಷಕರು ಯಾವತ್ತಿಗೂ ಕೈಬಿಡೋದಿಲ್ಲ ಎಂಬ ಸತ್ಯ ಲವ್ ಮಾಕ್ಟೇಲ್೩ಗೆ ದಕ್ಕಿದ ರೋಮಾಂಚಕ ಗೆಲುವಿನ ಮೂಲಕ ಮತ್ತೊಮ್ಮೆ ಸಾಬೀತಾಗಿದೆ!
ಈ ವ ರ್ಷ ಆರಂಭವಾದ ನಂತರದಲ್ಲಿ ಎರಡು ತಿಂಗಳ ಕಾಲ ಕನ್ನಡ ಚಿತ್ರರಂಗದಲ್ಲೊಂದು ಶುಷ್ಕ ವಾತಾವರಣವಿತ್ತು. ಲವ್ ಮಾಕ್ಟೇಲ್೩ ಸಮೃದ್ಧ ಗೆಲುವಿನ ಮೂಲಕ ಈ ವರ್ಷದ ಮೊದಲಾರ್ಧಕ್ಕೊಂದು ಲವಲವಿಕೆ ತುಂಬಿದೆ. ಇದರೊಂದಿಗೆ ಚಿತ್ರರಂದ ಪಾಲಿಗೆ ಆಶಾದಾಯಕ ವಾತಾವರಣವೂ ನಿರ್ಮಾಣಗೊಂಡಿದೆ. ಕ್ರಿಸ್ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
keywords: love mocktial3 #grand success #sandalwood #darling krishna, milana nagaraj

