ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್೫ ಬಗೆಗೀಗ ಭಾರೀ ಚರ್ಚೆಗಳು ನಡೆಯುತ್ತಿವೆ. ಹೆಚ್ಚೇನಲ್ಲ; ಈಗ್ಗೆ ಏಳೆಂಟು ವರ್ಷಗಳ ಹಿಂದೆ ಹೊಸಾ ಹೊಸ ಕಾರ್ಯಕ್ರಮಗಳ ಮೂಲಕ, ರಿಯಾಲಿಟಿ ಶೋಗಳ ಮೂಲಕ ಸಂಚಲನ ಸೃಷ್ಟಿಸಿದ್ದ ವಾಹಿನಿ ಜೀ ಕನ್ನಡ. ಪ್ರತಿಯೊಂದರಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಪ್ರೇಕ್ಷಕರ ಮನಗೆಲ್ಲುವಂತೆ ಈ ವಾಹಿನಿಯನ್ನು ಕಟ್ಟಿ ನಿಲ್ಲಿಸಿದ್ದ ಕೀರ್ತಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ಗೆ ಸಲ್ಲುತ್ತೆ. ಎಲ್ಲ ಸ್ಪರ್ಧೆಯನ್ನು ಕ್ರಿಯೇಟಿವಿಟಿಯ ಮೂಲಕವೇ ಎದುರಿಸಿ ಒಂದು ವಾಹಿನಿಯನ್ನು ಕಟ್ಟಿ ನಿಲ್ಲಿಸೋದಿದೆಯಲ್ಲಾ? ಅದು ನಿಜಕ್ಕೂ ಒಂದು ಸಾಹಸ. ಈ ನಿಟ್ಟಿನಲ್ಲಿ ಯುವ ಸಾಹಸಿಯಾಗಿ ಕಂಡಿದ್ದ ರಾಘವೇಂದ್ರ ಬರಬರುತ್ತಾ ಟಿಆರ್ಪಿ ಮರ್ಜಿಗೆ ಒರಗಿಕೊಂಡು ಹಂತ ಹಂತವಾಗಿ ಅಧ್ವಾನವೆಬ್ಬಿಸುತ್ತಾ ಬರಲಾರಂಭಿಸಿದ್ದರು. ಈಗಂತೂ ಯಾವ ವಾಹಿನಿಯನ್ನು ಉತ್ತುಂಗಕ್ಕೇರಿಸಿದ್ದರೋ, ಅದನ್ನು ಕೀಳು ಅಭಿರುಚಿಯ ಪಾತಾಳಕ್ಕಿಳಿಸಿದ ಕುಖ್ಯಾತಿಯೂ ರಾಘವೇಂದ್ರ ಹುಣಸೂರ್ ಖಾತೆಗೆ ಜಮೆಯಾಗಿ ಬಿಟ್ಟಿದೆ!
ಅಷ್ಟಕ್ಕೂ ಇತ್ತೀಚಿನ ಸೀಜನ್ನುಗಳ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಥರ್ಡ್ಗ್ರೇಡ್ ಹಾಸ್ಯಗಳ ಮೂಲಕ ಮಾನ ಕಳೆದುಕೊಂಡಿತ್ತು. ತೋಳಲ್ಲಿ ರಾಘವೇಂದ್ರ ಸ್ವಾಮಿಗಳ ಭಾವಚಿತ್ರ ಹಚ್ಚೆ ಹಾಕಿಸಿಕೊಂಡು, ಸೋಶಿಯಲ್ ಮೀಡಿಯಾ ಮೂಲಕ ಅಬ್ರಕದಬ್ರ ಕನ್ನಡದಲ್ಲಿ ಏನೇನೋ ಬೋಧಿಸುವ ಜಗ್ಗೇಶ್ ಜಡ್ಜ್ ಆಗಿ ಆ ಕಾರ್ಯಕ್ರಮವನ್ನು ಮತ್ತಷ್ಟು ಹಡಾಲೆಬ್ಬಿಸಿದ್ದು ದುರಂತ ವಾಸ್ತವ. ಇದೆಲ್ಲ ಆಗಿ ಒಂದಷ್ಟು ಕಾಲದ ನಂತರ ಶುರುವಾಗಿದ್ದ ಸೀಜನ್೫ರಲ್ಲಿ ಅಸಲೀ ಹಾಸ್ಯದ ಸ್ವಾದವಿರಬಹುದೆಂಬ ಕ್ಷೀಣ ನಿರೀಕ್ಷೆಯೊಂದು ಪ್ರೇಕ್ಷಕರಲ್ಲಿದ್ದದ್ದು ಸತ್ಯ. ಅದು ಮೊದಲ ಒಂದಷ್ಟು ಎಪಿಸೋಡುಗಳಲ್ಲಿಯೇ ನೇಣು ಹಾಕಿಕೊಂಡಿತ್ತು. ಇದೀಗ ಟಿಆರ್ಪಿ ತಲುಬಿಗಾಗಿ ಈ ಕಾರ್ಯಕ್ರಮದ ಆಯೋಜಕರು ತುಳಿದಿರುವ ಹಾದಿ ಇದೆಯಲ್ಲಾ? ಅದರ ವಿರುದ್ಧ ಪ್ರಜ್ಞಾವಂತರೆಲ್ಲ ಕೊತಗುಡಲಾರಂಭಿಸಿದ್ದಾರೆ.
ಇದು ಹೇಳಿಕೇಳಿ ಸೋಶಿಯಲ್ ಮೀಡಿಯಾ ಜಮಾನ. ಇಲ್ಲಿ ಒಳ್ಳೆ ಸರಕುಗಳಿಗಿಂತಲೂ, ಕೆಟ್ಟದ್ದೇ ಹೆಚ್ಚಾಗಿ ಬಿಕರಿಯಾಗುತ್ತವೆ. ಪೆಕರು ಪೆಕರಾಗಿ ಡೈಲಾಗು ಉದುರಿಸಿದಾತ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಎಂಬ ಭ್ರಮೆಗೆ ಬಲಿಯಾಗುತ್ತಾನೆ. ಚೆಂದದ ಹಾಡನ್ನು ದ್ರಾಬೆಯಂತೆ ಹಾಡಿದ ಎಳಸು ಹುಡುಗಿಯೊಬ್ಬಳು ಸೆಲೆಬ್ರಿಟಿಯಂತೆ ಮಿಂಚುತ್ತಾಳೆ. ಅವಳ್ಯಾರೋ ದೆವ್ವ ಮೆಟ್ಟಿಸಿಕೊಂಡವಳಂತೆ ವಿಕಾರವಾಗಿ ಅರಚಾಡುತ್ತಾಳೆ. ಮತ್ಯಾವನೋ ಬಟ್ಟೆ ಹರಿದುಕೊಂಡು ಕುಣಿದಾಡುತ್ತಾನೆ. ಇಂಥಾ ಕಿತಾಪತಿಗಳನ್ನೆಲ್ಲ ನಿರ್ಲಕ್ಷ್ಯ ಮಾಡಿದರೆ, ಈ ಬಗೆಯ ವಿಕೃತಿಗಳಿಗೆ ಮಾರುಕಟ್ಟೆಯಿಲ್ಲ ಎಂಬ ಸಂದೇಶವನ್ನ ತಣ್ಣಗೆ ರವಾನಿಸಿದಂತಾಗುತ್ತೆ. ಮತ್ತೊಂದಷ್ಟು ಕೀಟಬಾಧೆಯಿಂದ ಈ ಸಮಾಜ ತಪ್ಪಿಸಿಕೊಂಡಂತಾಗುತ್ತೆ.
ಆದರೆ, ರಾಘವೇಂದ್ರ ಹುಣಸೂರನ ಸಾರಥ್ಯದಲ್ಲಿ ಇಂಥಾ ಎಳಸುಯ ಕುನ್ನಿಗಳಿಗೆ ಕಾಮಿಡಿ ಕಿಲಾಡಿಯಂಥಾ ದೊಡ್ಡ ವೇದಿಕೆ ಕಲ್ಪಸಲಾಗುತ್ತಿದೆ. ಇದಕ್ಕಿಂತಲೂ ದುರಂತ ಬೇರೇನಿರಲು ಸಾಧ್ಯ? ಅದ್ಯಾರೋ ಹುಡುಗಿಯೊಬ್ಬಳಿ ಹೂವಿನ ಬಾಣದಂತೆ ಎಂಬ ಹಾಡನ್ನು ಅಪಭ್ರಂಶಗೊಳಿಸಿ ಹಾಡುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದಳು. ಅದರ ಮೂಲಕ ಆಕೆಗೆ ಸಿಕ್ಕ ಭ್ರಾಮಕ ಪಬ್ಲಿಸಿಟಿ ಕಂಡ ಪ್ರಜ್ಞಾವಂತರು ಸೋಶಿಯಲ್ ಮೀಡಿಯಾ ಮೂಲಕವೇ ತಿಳಿ ಹೇಳಲು ಪ್ರಯತ್ನಿಸಿದ್ದರು. ಆದರೀಗ ಕಾಮಿಡಿ ಕಿಲಾಡಿ ಶೋನಲ್ಲಿ ಆ ಹುಡುಗಿಗೆ ಅವಕಾಶ ಕೊಡಲಾಗಿದೆ. ಇದಕ್ಕಿಂತಲೂ ಭೀಕರ ವಿಚಾರವೆಂದರೆ, ಗಾಂಜಾ ಗಿರಾಕಿಯಂತೆ ಕಾಣುವ ಅಮುಕುಡುಮುಕುವನ್ನು ಕೂಡಾ ಕಾಮಿಡಿ ಕಿಲಾಡಿಗಳ ದೊಡ್ಡಿಗೆ ಸೇರಿಸಿಕೊಳ್ಳಲಾಗಿದೆ.
ಧ್ರುವ ಸರ್ಜಾನ ಮನೆ ಮುಂದೆ ನಿಂತು ಅರ್ಥವಿಲ್ಲದೆ ಅರಚಾಡುವ ಮೂಲಕ ಮುನ್ನೆಲೆಗೆ ಬಂದಿದ್ದವನು ಅಮುಕುಡುಮುಕು. ಇಂಥವನು ಆ ನಂತರ ಸೋಶಿಯಲ್ ಮೀಡಿಯಾದ ಚಪ್ರಿ ಗ್ಯಾಂಗುಗಳ ನಡುವೆ ಕಾಣಿಸಿಕೊಳ್ಳಲಾರಂಭಿಸಿದ್ದ. ಕಷ್ಟಪಟ್ಟು ದುಡಿಯೋ ಯೋಗ್ಯತೆಯಿಲ್ಲದೆ ತಿರ್ಕೆ ಶೋಕಿ ಅಂಟಿಸಿಕೊಂಡಿರೋ ಇವನೊಳಗೆ ಜಗ್ಗೇಶ್, ಯೋಗರಾಜ ಭಟ್ ಥರದವರಿಗೆ ಅದೆಂಥಾ ಪ್ರತಿಭೆ ಕಾಣಿಸಿತೋ ಭಗವಂತನೇ ಬಲ್ಲ. ಕಡೆಗೂ ಈ ಕ್ರಿಮಿ ಕಾಮಿಡಿ ಕಿಲಾಡಿಗಳ ವೇದಿಕೆಯಲ್ಲಿ ಪಿತಗುಡಲಾರಂಭಿಸಿದೆ. ಈತನ ಪುಟಗೋಸಿ ಕಾಮಿಡಿಗೆ ಜಗ್ಗೇಶಿ ಮೈಕುಲುಕಿಸಿ ನಗುತ್ತೆ. ಯೋಗರಾಜ ಭಟ್ಟರ ಮುಖದಲ್ಲೂ ಒಂದು ಯಾಂತ್ರಿಕ ನಗೆ ಕಾಣಿಸಿಕೊಳ್ಳುತ್ತೆ. ಆದರೆ, ದುರ್ಬೀನು ಹಾಕಿ ಹುಡುಕಿದರೂ, ಮನೋರಂಜನೆಯ ಅಭಿರುಚಿಯನ್ನೇ ಹಾಳುಗೆಡವಿದ ಪಾಪಪ್ರಜ್ಞೆ ಮಾತ್ರ ಕಾಣಿಸುತ್ತಿಲ್ಲ.
ಈ ಹಿಂದೆ ಶೋ ಒಂದಕ್ಕೆ ಪ್ರಸಿದ್ಧ ಯೂಟ್ಯೂಬರ್ ಡಾಕ್ಟರ್ ಬ್ರೋನನ್ನು ಏಕೆ ಕರೆಸುತ್ತಿಲ್ಲ ಅಂತೊಂದು ಪ್ರಶ್ನೆ ರಾಘವೇಂದ್ರ ಹುಣಸೂರನಿಗೆ ಎದುರಾಗಿತ್ತು. ಆಗ ಹುಣಸೂರ ನಿಮ್ಮಜ್ಜಿಗೆ ಡಾ ಬ್ರೋ ಗೊತ್ತಾ ಅಂತ ಮರು ಪ್ರಶ್ನೆ ಎಸೆಯುವ ಮೂಲಕ ವಿವಚಾದಕ್ಕೀಡಾಗಿದ್ದರು. ಬಹುಶಃ ಈ ಅಮುಕುಡುಮುಕು ಥರದ ಪೀಡೆಗಳೆಲ್ಲ ರಾಘವೇಂದ್ರದ ಅಜ್ಜಿಗೆ ಗೊತ್ತಿರಬಹುದು. ಆ ಕಾರಣದಿಂದಲೇ ಕಾಮಿಡಿ ಕಿಲಾಡಿಗಳು ಶೋನಲ್ಲಿ ಅವಕಾಶ ಕೊಟ್ಟಿರಬಹುದೇನೋ… ಇಂಥಾ ಅಯೋಗ್ಯ ನಡೆಯ ಮೂಲಕ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಗಂಭೀರವಾಗಿಯೇ ನಗೆಪಾಟಲಿಗೀಡಾಗಿದೆ. ಅಮುಕುಡುಮುಕು ಮುಂತಾದ ಅಯೋಗ್ಯರಿಗೆ ವೇದಿಕೆ ಕಲ್ಪಿಸೋದಿದೆಯಲ್ಲಾ? ಅದು ಕಲೆಗೆ ಮಾಡೋ ಅಸಲಿ ಅವಮಾನ. ಇಂಥಾ ಶೋಗಳ ಆಡಿಷನ್ನಿನಲ್ಲಿ ನಿಂತು ಅವಕಾಶ ಸಿಗದೆ ನೊಂದ ಅದೆಷ್ಟೋ ಜೀವಗಳ ಶಾಪ ಖಂಡಿತವಾಗಿಯೂ ಈ ಶೋನ ಭಾಗವಾಗಿರುವವರಿಗೆ ತಟ್ಟದಿರೋದಿಲ್ಲ.
ಈ ನಡೆಯ ಮೂಲಕ ವಿಕೃತ ವರ್ತನೆ, ಅತಿರೇಕ, ಹಾರಾಟ, ಚೀರಾಟಗಳೇ ಪ್ರಸಿದ್ಧಿಗಿರುವ ಮಾರ್ಗ ಎಂಬ ನಿರ್ಧಾರಕ್ಕೆ ಹೊಸಾ ತಲೆಮಾರು ಒಗ್ಗಿಕೊಳ್ಳುವ ಅಪಾಯವಿದೆ. ಚಿತ್ರ ವಿಚಿತ್ರ ವರ್ತನೆಗಳಿಂದಲೇ ಮುನ್ನೆಲೆಗೆ ಬಂದಿರುವವರನ್ನೇ ಆಯ್ಕೆ ಮಾಡೋದಾದರೆ ಯಾವ ಸೌಭಾಗ್ಯಕ್ಕೆ ಆಡಿಷನ್ನಿನ ನಾಟಕವಾಡುತ್ತೀರಿ? ನಿಜವಾದ ಕಲೆಯನ್ನು ಎದೆಯೊಳಗಿಟ್ಟುಕೊಂಡು ಅವಕಾಶಕ್ಕಾಗಿ ಕಾಯೋ ಜೀವಗಳನ್ನು ಯಾಶಕೆ ನಿರಾಸೆಗೀಡು ಮಾಡುತ್ತೀರಿ? ಹಾಡೊಂದನ್ನು ಮನ ಬಂದಂತೆ ಒರಲುವುದೇ ಪ್ರಸಿದ್ಧಿಯ ಫಾರ್ಮುಲಾಶ ಅಂತಾದರೆ, ಯಾವ ಮುಖವಿಟ್ಟುಕೊಂಡು ನಿಮ್ಮದೇ ವಾಹಿನಿಯಲ್ಲಿ ಸರೆಗಮಪದಂಥಾ ಶೋಗಳನ್ನು ನಡೆಸುತ್ತೀರಿ? ಹಿರಿಯರಾದ ಜಗ್ಗೇಶ್, ಯೋಗರಾಜ ಭಟ್ ಮೆದುಳೇನು ಬಾಟಮ್ಮಿಗಿಳಿದಿದೆಯಾ? ಇಂಥಾ ಅಧ್ವಾನಗಳನ್ನೇ ಕಾಮಿಡಿಯಾಗಿಸಿ ಕಾಸು ಗುಂಜಲು ನಿಂತಿದ್ದೀರೆಂದರೆ ನಿಮ್ಮಂಥಾ ಕಲಾ ದ್ರೋಹಿಗಳು ಮತ್ಯಾರಿರಲು ಸಾಧ್ಯ? ರಾಘವೇಂದ್ರ ಹುಣಸೂರ್ಗೆ ಮಾನ ಮರ್ಯಾದೆಗಳ ಪರಿಚಯವಿದ್ದರೆ ಮೊದಲು ಇಂತಾ ಅಧ್ವಾನಗಳಿಗೆ ಬ್ರೇಕ್ ಹಾಕಲಿ. ಹಾಗಂತ ಪ್ರೇಕ್ಷಕರೇ ಒತ್ತಾಯಿಸುತ್ತಿದ್ದಾರೆ!
keywords: comedy, kkhiladigalu, season5, jaggesh, raghavendra, hunasur, yogaraj bhat, amukudumuku, zee kannada, cinishodha

