ಕನ್ನಡದ ರಿಯಾಲಿಟಿ ಶೋಗಳ ಬಗ್ಗೆ ಈಗ ದಶದಿಕ್ಕುಗಳಿಂದಲೂ ಅಪಸ್ವರಗಳು ಕೇಳಿ ಬರುತ್ತಿವೆ. ಅಲ್ಲೆಲ್ಲೋ ಕಾಡಿನ ಗರ್ಭದಲ್ಲಿದ್ದ ಹುಡುಗರನ್ನು ಹುಡುಕಿ ತಂದು, ಒಂದಷ್ಟು ಮೆರೆದಾಡಿಸಿ, ಎಲ್ಲ ಮುಗಿದ ಮೇಲೆ ಅನಾಥರನ್ನಾಗಿಸುವ ಖಯಾಲಿಯೊಂದು ದಶಕದ ಹಿಂದೆ ಶುರುವಾಗಿತ್ತು. ಅದರ ಘೋರ ಪರಿಣಾಮವೆಂಬಂತೆ ಬುಡಕಟ್ಟು ಹಾಡಿಯ ಹುಡುಗ ರಾಜೇಶ ಜೀವ ಚೆಲ್ಲಿದ್ದ. ಇದೀಗ ಕಾಮಿಡಿ ಕಿಲಾಡಿಗಳು ಶೋ ಮೂಲಕ ಹೆಸರಾಗಿದ್ದ ರಂಗಭೂಮಿ ಪ್ರತಿಭೆ ಚಂದ್ರಶೇಖರ್ ಸಿದ್ಧಿಯ ಬಲಿಯಾಗಿದೆ. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಮಾಹಿತಿ ಜಾಹೀರಾಗಿದೆ. ಹಾಗೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದೆ ಕೌಟುಂಬಿಕ ಕಾರಣಗಳೂ ಇರಬಹುದೆಂಬ ದಿಕ್ಕಿನಲ್ಲೀಗ ಚರ್ಚೆಗಳು ಶುರುವಾಗಿವೆ. ಆದರೆ, ಅದರ ಹಿಂದಿರೋ ನೆರಳು ಬಣ್ಣದ ಜಗತ್ತಿನ ಭ್ರಾಮಕ ಸುಳಿಗೆ ಸಿಕ್ಕಿ ನರಳಿದ ನಿಸ್ಸಹಾಯಕ ಮನಃಸ್ಥಿತಿ ಎಂಬುದು ಕಟು ವಾಸ್ತವ!
ಚಂದ್ರಶೇಖರ ಸಿದ್ಧಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ವಜ್ರಳ್ಳಿಯ ಚಿಮನಹಳ್ಳಿ ಎಂಬ ಪುಟ್ಟ ಊರಿನವನು. ಸಿದ್ಧಿ ಜನಾಂಗ ಆ ಭಾಗದಲ್ಲಿ ಕಾಡಿನೊಂದಿಗೆ ಬದುಕು ಹೊಸೆದುಕೊಂಡು ಬಂದಿದೆ. ಈಗ ಒಂದಷ್ಟು ರೂಪಾಂತರಗಳಾಗಿದ್ದರೂ ಕೂಡಾ ಆರ್ಥಿಕ ಸಂಕಷ್ಟ ಆ ಸಮುದಾಯವನ್ನು ಬಿಡದೇ ಕಾಡುತ್ತಿದೆ. ಅಂಥಾ ಕುಟುಂಬದಲ್ಲಿ ಜನಿಸಿದ್ದ ಚಂದ್ರಶೇಖರ ಸಿದ್ಧಿ ನೀನಾಸಂನಲ್ಲಿ ರಂಗ ತರಬೇತಿ ಪಡೆದುಕೊಂಡಿದ್ದ. ನಟನಾಗಿ ಹೆಸರು ಮಾಡುವ ಸಹಜವಾದ ಕನಸು ಹೊಂದಿದ್ದ ಆತನಿಗೆ ಕಾಮಿಡಿ ಕಿಲಾಡಿಗಳು ಶೋನಲ್ಲಿ ಮಿಂಚುವ ಅವಕಾಶ ಸಿಕ್ಕಿತ್ತು. ಆ ಯಶಸ್ಸಿನ ಪ್ರಭೆಯಲ್ಲಿಯೇ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದ ಸಿದ್ಧಿಗೆ ನಟನಾಗಿ ನೆಲೆಗೊಳ್ಳುವ ಸವಾಲೆದುರಾಗಿತ್ತು.
ಸಾಮಾನ್ಯವಾಗಿ ಹೀಗೆ ಪ್ರಸಿದ್ಧಿ ಪಡೆದ ನಂತರ ಊರ ಕಡೆ ಸಹಜವಾಗಿಯೇ ಒಂದಷ್ಟು ಹವಾ ಸೃಷ್ಟಿಯಾಗುತ್ತೆ. ಅಂಥಾದ್ದರ ನಡುವೆ ಅವಕಾಶಗಳಿಲ್ಲದೆ, ಸೋತು ಹುಟ್ಟಿದೂರಿಗೆ ಹಿಂತಿರುಗೋದು ಒಂದು ರೀತಿಯ ನರಕ. ಅಂಥಾದ್ದೊಂದು ಯಾತನೆಯನ್ನ ಈ ಹುಡುಗ ಚಂದ್ರಶೇಖರ ಸಿದ್ಧಿ ಅನುಭವಿಸುವಂತಾಗಿತ್ತು. ಮದುವೆಯಾದದ್ದರಿಂದ ಕುಟುಂಬದ ಜವಾಬ್ದಾರಿಯೂ ಆತನ ಹೆಗಲೇರಿತ್ತು. ಊರ ಸಾಹುಕಾರರ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗೋದರ ಹೊರತಾಗಿ ಮತ್ಯಾವ ಆಯ್ಕೆಗಳೂ ಆತನ ಮುಂದಿರಲಿಲ್ಲ. ತಾನು ನಟನಾಗಿ ಪ್ರವರ್ಧಮಾನಕ್ಕೆ ಬರಲಾಗದ ಸಂಕಟ, ಅವಕಾಶಗಳಿಲ್ಲದ ಅವಮಾನ ಖಿನ್ನತೆಯಾಗಿ ಕೊಲ್ಲಲಾರಂಭಿಸಿತ್ತಾ? ಇದರ ಫಲವಾಗಿಗೆ ಮೊಳೆತುಕೊಂಡ ಕೌಟುಂಬಿಕ ಕಾಳಗವೂ ಸೇರಿಕೊಂಡು ಈ ಹುಡುಗನನ್ನು ಬಲಿ ಹಾಕಿರುವ ಸಾಧ್ಯತೆಗಳೇ ಹೆಚ್ಚು. ಖ್ಯಾತಿಯೆಂಬುದು ಎಷ್ಟು ಆಕರ್ಷಕವೋ, ಅಷ್ಟೇ ಕ್ರೂರವೂ ಹೌದು. ಈ ವಿಚಾರ ರಾಜೇಶನ ವಿಚಾರದಲ್ಲಿ ಸಾಬೀತಾಗಿತ್ತು. ಆ ಸೂತಕವೀಗ ಚಂದ್ರಶೇಖರ ಸಿದ್ಧಿಯ ನಿರ್ಗಮನದ ಮೂಲಕ ಮತ್ತೆ ಮರುಕಳಿಸಿದೆ!