ವಿಮಲ್ ರಾಜ್ ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಅ ಡೇಟ್’ ಚಿತ್ರ ತೆರೆಗಾಣಲು ದಿನವೊಂದು ಮಾತ್ರವೇ ಬಾಕಿ ಉಳಿದುಕೊಂಡಿದೆ. ಒಂದು ಸಣ್ಣ ಕ್ಯಾನ್ವಾಸಿನಲ್ಲಿ ಅಗಾಧ ಅಚ್ಚರಿ ಅರಳಿಕೊಂಡ ಸೂಚನೆ ಹೊತ್ತಿದ್ದ ಟ್ರೈಲರ್ ಮೂಲಕವೇ ಈ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ವಿಶೇಷವೆಂದರೆ, ತಾಜಾತನ ಹೊಂದಿರೋ ಕಥೆಗೆ ಅನುಗುಣವಾಗಿ ನಿರ್ದೇಶಕರು ಕಲಾವಿದರನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಕರಾವಳಿ ಮೂಲದ ಹುಡುಗಿ ಅಶ್ವಿನಿ ಶೆಣೈ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದು ಅಶ್ವಿನಿಯ ಪಾಲಿಗೆ ಅಚಾನಕ್ಕಾಗಿ, ಅಚ್ಚರಿದಾಯಕವಾಗಿ ಒಲಿದ ಅದೃಷ್ಟದಂಥಾ ಅವಕಾಶ!
ನಿರ್ದೇಶಕ ವಿಮಲ್ ರಾಜ್ ಎನ್ ತಾನು ಸಿದ್ಧಪಡಿಸಿದ್ದ ಕಥಾ ನಾಯಕಿಯ ಪಾತ್ರಕ್ಕೆ ಸರಿ ಹೊಂದುವ ಕಲಾವಿದೆಗಾಗಿ ಹುಡುಕಾಟದಲ್ಲಿದ್ದರು. ಯಾಕೆಂದರೆ, ಅದಕ್ಕೆ ಚುರುಕುತನ ಹೊಂದಿರೋ ಹೊಸಾ ಪ್ರತಿಭೆಯ ಅಗತ್ಯವಿತ್ತು. ಇದೇ ಹೊತ್ತಿನಲ್ಲಿ ಇಂಟೀರಿಯರ್ ಡಿಸೈನಿಂಗ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾ, ಬಿಡುವಿನ ವೇಳೆಯಲ್ಲಿ ಸಿನಿಮಾ, ನಾಟಕಗಳನ್ನು ನೋಡೋ ಅತೀವ ಆಸಕ್ತಿ ಹೊಂದಿದ್ದ ಅಶ್ವಿನಿ ಶೆಣೈ ಒಳಗೊಳಗೇ ನಟಿಯಾಗೋ ಕನಸು ಹೊತ್ತು ತಿರುಗಾಡುತ್ತಿದ್ದರು. ಅತ್ತ ಕಂಫರ್ಟ್ ಜೋನಿಗೆ ಜಾರಿಸಿದ್ದ ಕೆಲಸ, ಇತ್ತ ಸಿನಿಮಾ ನಟಿಯಾಗೋ ಕನಸು… ಆ ಕ್ಷಣಕ್ಕೆ ಯಾವ ನಿರ್ಧಾರ ತಳೆಯೋದೆಂಬ ಗೊಂದಲದಲ್ಲಿದ್ದ ಅಶ್ವಿನಿ ಪಾಲಿಗೆ ಅ ಡೇಟ್ ನಾಯಕಿಯಾಗೋ ಅವಕಾಶ ಒಲಿದು ಬಂದಿದ್ದೇ ಒಂದು ಅಚ್ಚರಿ!
ಯಾವ ಸಿನಿಮಾ ತೆರೆಗಂಡರೂ ಕುಟುಂಬ ಸಮೇತರಾಗಿ ನೋಡೋ ಆಸಕ್ತಿ ಹೊಂದಿದ್ದ ಅಶ್ವಿನಿ ಪಾಲಿಗೆ ನಾಟಕ ವೀಕ್ಷಣೆಯೂ ನೆಚ್ಚಿನ ಹವ್ಯಾಸ. ರಂಗಶಂಕರದಲ್ಲಿ ನಿಯಮಿತವಾಗಿ ನಾಟಕ ನೋಡೋ ತುಡಿತ ಹೊಂದಿದ್ದ ಅಶ್ವಿನಿ, ತನ್ನ ಕನಸಿನ ಹಾದಿ ರಂಗಶಂಕರದ ಪರಿಸದಲ್ಲಿಯೇ ತೆರೆದುಕೊಂಡೀತೆಂಬ ಸಣ್ಣ ಕಲ್ಪನೆಯನ್ನೂ ಹೊಂದಿರಲಿಲ್ಲ. ಕೋವಿಡ್ ಕಂಟಕ ಕಳೆಯುತ್ತಿದ್ದ ದಿನಗಳಲ್ಲಿಯೇ ಅದೊಂದು ದಿನ ಅಶ್ವಿನಿ ತಂಗಿಯೊಂದಿಗೆ ರಂಗಶಂಕರದಲ್ಲೊಂದು ನಾಟಕ ನೋಡಲು ತೆರಳಿದ್ದರಂತೆ. ಅದೇ ದಿನ ಮತ್ತೊಂದು ನಾಟಕ ನೋಡಲು ತೆರಳುವಾಗ `ನನಗೂ ಕೂಡಾ ಯಾರಾದರೂ ಸಿನಿಮಾದಲ್ಲಿ ನಟಿಸೋ ಅವಕಾಶ ಕೊಟ್ರೆ ಎಷ್ಟು ಚೆನ್ನಾಗಿರುತ್ತೆ’ ಎಂಬಂತೆ ತಂಗಿಯ ಬಳಿ ಆಸೆ ಹೇಳಿಕೊಂಡಿದ್ದರಂತೆ. ಹಾಗೆ ಎರಡನೇ ನಾಟಕ ನೋಡಿ ಹೊರ ಬರುವ ಹೊತ್ತಿಗೆಲ್ಲ ಅಶ್ವಿನಿ ಬಯಸಿದ್ದ ಅವಕಾಶ ತಾನೇ ತಾನಾಗೆ ಎದುರುಗೊಂಡಿತ್ತು!
ಅಶ್ವಿನಿಯನ್ನು ನೋಡಿದ ಅ ಡೇಟ್ ತಂಡದವರೊಬ್ಬರು ಈ ಸಿನಿಮಾ ನಿರ್ದೇಶಕರ ನಂಬರ್ ಕೊಟ್ಟು ಸಂಪರ್ಕಿಸುವಂತೆ ಹಜೇಳಿದ್ದರಂತೆ. ಆ ಬಳಿಕ ನಿರ್ದೇಶಕರನ್ನು ಬೇಟಿಯಾದಾಗ ಆಡಿಷನ್ನಿನಲ್ಲಿ ಭಾಗಿಯಾಗೋ ಅವಕಾಶ ಕೂಡಿ ಬಂದಿತ್ತು. ಅದಾಗಲೇ ನಯಕಿಯ ಪಾತ್ರಕ್ಕಾಗಿ ಸಾಕಷ್ಟು ಯುವತಿಯರು ಆಡಿಷನ್ನಿನಲ್ಲಿ ಭಾಗಿಯಾಗಿದ್ದರು. ಏಕಾಏಕಿ ಪೇಜುಗಟ್ಟಲೆ ಡೈಲಾಗು, ಸನ್ನಿವೇಶ ಅರಗಿಸಿಕೊಂಡು, ಅದಕ್ಕೆ ತಕ್ಕುದಾದ ಭಾವದೊಂದಿಗೆ ನಟಿಸಲು ತುಸು ಹಿಂಜರಿಕೆ ಕಾಡಿದರೂ, ಅಶ್ವಿನಿ ತಕ್ಕಮಟ್ಟಿಗೆ ಆಡಿಷನ್ನಿನಲ್ಲಿ ಪ್ರದರ್ಶನ ಕೊಟ್ಟಿದ್ದರು. ಅದಾಗಿ ದಿನ ಕಳೆಯುವಷ್ಟರಲ್ಲಿ ನಿರ್ದೇಶಕರ ಕಡೆಯಿಂದ ಮತ್ತೊಮ್ಮೆ ಆಡಿಷನ್ ಕೊಡುವಂತೆ ಕರೆ ಬಂದಿತ್ತು. ಆ ಆಡಿಷನ್ ಮೂಲಕ ಅ ಡೇಟ್ ನಾಯಕಿಯಾಗಿ ಅಶ್ವಿನಿ ಆಯ್ಕೆಯಾಗಿದ್ದರು.
ಅದಾದ ನಂತರ ಒಂದಷ್ಟು ದಿನಗಳ ಕಾಲ ವರ್ಕ್ಶಾಪ್ ಮೂಲಕ ಪಳಗಿಕೊಂಡಿದ್ದ ಅಶ್ವಿನಿ, ಅ ಡೇಟ್ ನಾಯಕಿಯಾಗಿ ನಟನೆಯ ಅಖಾಡಕ್ಕಿಳಿದಿದ್ದರು. ಸಾಮಾನ್ಯವಾಗಿ ಸಿನಿಮಾ ಸೆಟ್ಟೆಂದರೆ ಒಂದು ಸಿದ್ಧಸೂತ್ರದ ಕಲ್ಪನೆ ಇರುತ್ತೆ. ಆದರೆ ಅ ಡೇಟ್ ಚಿತ್ರೀಕರಣದ ವಾತಾವರಣ ಅದೆಲ್ಲದಕ್ಕಿಂತ ಭಿನ್ನವಾಗಿತ್ತು. ಅದು ನಿರ್ದೇಶಕರು, ನಾಯಕ, ನಾಯಕಿ, ಮತ್ತು ಸೀಮಿತ ತಂತ್ರಜ್ಞರು ಮಾತ್ರವೇ ಇದ್ದ ಪುಟ್ಟ ತಂಡ. ಅಲ್ಲಿ ನಿರ್ದೇಶಕ, ಹೀರೋ ಹೀರೋಯಿನ್ ಎಂಬಂಥಾ ಪ್ರತಿಷ್ಠೆಗಳಿರಲಿಲ್ಲ. ಅಲ್ಲಿದ್ದದ್ದು ಪ್ರಾಂಜಲ ಸಿನಿಮಾ ಪ್ರೇಮ ಮಾತ್ರ. ಯಾವ ಹಮ್ಮುಬಿಮ್ಮೂ ಇಲ್ಲದೆ, ಪ್ರತಿಯಿಒಂದು ಕೆಲಸಗಳನ್ನು, ಎಲ್ಲರೂ ಕೂಡಿ ಮಾಡುತ್ತಾ, ಐವತೈದಕ್ಕೂ ಹೆಚ್ಚು ಲೊಕೇಷನ್ನುಗಳಲ್ಲಿ ಚಿತ್ರೀಕರಣ ನಡೆಸಿದ ರೀತಿ ಅಶ್ವಿನಿಯನ್ನು ಸೆಳೆದಿದೆ. ಈ ಮೂಲಕ ಸಿನಿಮಾ ರೂಪಿಸುವ ಬಗೆಗಿನ ಅಗಾಧ ಅನುಭವವೂ ಇಡಿಯಾಗಿ ದಕ್ಕಿದೆ.
ಅ ಡೇಟ್ ಚಿತ್ರದ ತನ್ನ ಪಾತ್ರ ನೋಡುಗರಿಗೆ ಹಿಡಿಸೋದು ಮಾತ್ರವಲ್ಲದೇ, ಒಂದಿಡೀ ಸಿನಿಮಾ ವಿಶಿಷ್ಠ ಅನುಭೂತಿ ತುಂಬಲಿದೆ ಎಂಬ ತುಂಬು ನಂಬಿಕೆಯೂ ಅಶ್ವಿನಿ ಶೆಣೈಗಿದೆ. ಮೂಲತಃ ಉಡುಪಿಯವರಾದ ಅಶ್ವಿನಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ಶಾಲಾ ಕಾಲೇಜು ದಿನಗಳಲ್ಲಿಯೇ ಅತೀವ ಸಿನಿಮಾಸಕ್ತಿ ಹೊಂದಿದ್ದ ಆಕೆಗೆ, ಕಾಲೇಜು ಕಲಿಕೆಯ ಸಂದರ್ಭದಲ್ಲಿಯೇ ಸೀರಿಯಲ್ನಲ್ಲಿ ನಟಿಸೋ ಅವಕಾಶ ಕೂಡಿ ಬಂದಿತ್ತಂತೆ. ಆದರೆ, ಅದರಲ್ಲೊಂದೆರಡು ಅವಕಾಶಗಳ ಅಚಾನಕ್ಕಾಗಿ ಕೈ ತಪ್ಪಿದ್ದವು. ಅದೆಲ್ಲವನ್ನೂ ಕಂಡಿದ್ದ ಹೆತ್ತವರು ಸಿನಿಮಾ ಆಗಿಬರುವ ವಿಚಾರವಲ್ಲ ಎಂಬ ತೀರ್ಮಾನಕ್ಕೆ ಬಂದು, ಓದಿನತ್ತ ಗಮನ ಹರಿಸುವಂತೆ ಮಾರ್ಗದರ್ಶನ ನೀಡಿದ್ದರಂತೆ.
ಆದರೆ, ಇದೀಗ ಅಚಾನಕ್ಕಾಗಿಯೇ ಸಿಕ್ಕ ಅ ಡೇಟ್ ಚಿತ್ರದ ಅವಕಾಶ, ಮೊದಲ ಹೆಜ್ಜೆಯಲ್ಲಿಯೇ ಅಶ್ವಿನಿ ಶೆಣೈರನ್ನು ನಾಯಕಿಯ ಪಟ್ಟಕ್ಕೇರಿಸಿದೆ. ಅ ಡೇಟ್ ರೂಪುಗೊಳ್ಳುವ ಘಟ್ಟದಲ್ಲಿಯ ಅವರೊಳಗಿದ್ದ ಗೊಂದಲಗಳೆಲ್ಲವೂ ಪರಿಹಾರವಾಗಿ,ತನ್ನ ಭವಿಷ್ಯವನ್ನು ಸಿನಿಮಾ ರಂಗದಲ್ಲಿಯೇ ರೂಪಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಸದ್ಯಕ್ಕೆ ಅ ಡೇಟ್ ಪ್ರಭೆಯಲ್ಲಿಯೇ ಒಂದಷ್ಟು ಅವಕಾಶಗಳು ಅಶ್ವಿನಿಯನ್ನು ಅರಸಿ ಬಂದಿವೆ. ತನಗೆ ಹೊಳೆದ ಕಥಾ ಎಳೆಯೊಂದಕ್ಕೆ ಬರಹಗಾರರ ಮೂಲಕ ಜೀವ ತುಂಬುವ ಕಾರ್ಯವೂ ಅಂತಿಮ ಘಟ್ಟಕ್ಕೆ ತಂದುಕೊಂಡಿದ್ದಾರೆ. ಒಟ್ಟಾರೆಯಾಗಿ ಅ ಡೇಟ್ ಚಿತ್ರದ ಮೂಲಕ ಅಶ್ವಿನಿ ಶೆಣೈ ಹಾದಿ ನಿಚ್ಚಳವಾಗಿದೆ. ಈ ಸಿನಿಮಾದ ಗೆಲುವಿನೊಂದಿಗೆ, ನಟಿಯಾಗಿ ತನ್ನ ಗಡೆಲುವಿನ ಯಾನ ಶುರುವಾಗುವ ಗಾಢ ನಿರೀಕ್ಷೆ ಅಶ್ವಿನಿ ಶೆಣೈರದ್ದು…
keywords: a date movie, ashwini shenoy, sandalwood, kfi

