ಚುಮುಚುಮು ಚಳಿ ಬೆಂಗಳೂರನ್ನು ಆವರಿಸಿಕೊಳ್ಳುವ ಘಳಿಗೆಯನ್ನು ಮಾಂತ್ರಿಕ ಸಂಗೀತ ಕಾರ್ಯಕ್ರಮವೊಂದರ ಮೂಲಕ ಬೆಚ್ಚಗಾಗಿಸಲು ಮುಹೂರ್ತ ನಿಗಧಿಯಾಗಿದೆ. ಈಗಾಗಲೇ ಅನೇಕ ಸಂಗೀತ ಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯಶ ಕಂಡಿರುವ ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ U೧ಟಿiveಡಿse ಟೂರ್ ಎಂಬ ಪರಿಕಲ್ಪನೆಯಡಿಯಲ್ಲಿ ದೊಡ್ಡ ಮಟ್ಟದಲ್ಲೊಂದು ಕಾರ್ಯಕ್ರಮಕ್ಕೆ ಅಖಾಡ ಸಜ್ಜುಗೊಳಿಸಿದೆ. ಇದೇ ಡಿಸೆಂಬರ್ ೫ರಂದು ನಡೆಯಲಿರುವ ಈ ಮ್ಯೂಸಿಕ್ ಕಾನ್ಸರ್ಟ್ ಬಗ್ಗೆ ಪತ್ರಿಕಾಗೋಷ್ಠಿಯ ಮೂಲಕ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಅಂದಹಾಗೆ, ದೇಶ ವಿದೇಶಗಳಲ್ಲಿ ಹೆಸರಾಗಿರುವ ಖ್ಯಾತ ಸಂಗೀತ ನಿರ್ದೇಶಕ, ಗಾಯಕ, ಗೀತರಚನೆಕಾರ ಯುವನ್ ಶಂಕರ್ ರಾಜಾ ಈ ಮ್ಯೂಸಿಕ್ ಕಾನ್ಸರ್ಟ್ನ ಪ್ರಧಾನ ಆಕರ್ಷಣೆ. ಆ ದಿನ ನಾಲಕ್ಕು ಗಂಟೆಗಳ ಕಾಲ ನಿರಂತರವಾಗಿ ಯುವನ್ ಶಂಕರ್ ರಾಜಾ ಸಾರಥ್ಯದಲ್ಲಿ ಸಂಗೀತ ಸುಗ್ಗಿ ವೀಕ್ಷಕರ ಮುಂದೆ ತೆರೆದುಕೊಳ್ಳಲಿದೆ. ಈ ಪತ್ರಿಕಾಗೋಷ್ಠಿಯ ಮೂಲಕ ಯುವನ್ ಶಂಕರ್ ರಾಜಾ, ನಾಯ್ಸ್ ಸಂಸ್ಥೆ ಮತ್ತು ಈ ಇವೆಂಟ್ನ ಸಹಭಾಗಿತ್ವ ಹೊಂದಿರುವ ಸುಮಂತ್ ಟಿವಿ ಮುಖ್ಯಸ್ಥರು ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಈ ಪತ್ರಿಕಾಗೋಷ್ಠಿಯ ಕೇಂದ್ರ ಬಿಂದುವಾಗಿದ್ದ ಯುವನ್ ಶಂಕರ್ ರಾಜಾ `ಬೆಂಗಳೂರು ನನ್ನ ಪಾಲಿಗೆ ಪ್ರಿಯವಾದ ಊರು. ಇಲ್ಲಿ ನಡೆಯುತ್ತಿರೋ ಈ ಮ್ಯೂಸಿಕ್ ಕಾನ್ಸರ್ಟ್ನಲ್ಲಿ ಪಾಲ್ಗೊಳ್ಳಲು ಸಂತಸವಾಗುತ್ತಿದೆ. ಈ ಸಂಗೀತ ಕಾರ್ಯಕ್ರಮ ವಿಭಿನ್ನವಾದ ಸಂಗೀತ ಸಂಯೋಜನೆ, ವೇದಿಕೆ, ಗಾಯಕರು, ತಾಂತ್ರಿಕ ವರ್ಗದಿಂದ ಕಳೆಗಟ್ಟಿಕೊಳ್ಳಲಿದೆ’ ಎನ್ನುತ್ತಲೇ, ಒಟ್ಟಾರೆ ಕಾರ್ಯಕ್ರಮದ ಸ್ಪಷ್ಟ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲಿ ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಸಿಇಓ ವಿಕಾಸ್ ಮತ್ತು ಸಿಓಓ ಅಪರ್ಣಾ ಭಾಗಿಯಾಗಿದ್ದರು.

ನಾಯ್ಸ್ ಎಂಟರ್ಟೈನ್ಮೆಂಟ್ ಸಿಎಫ್ಓ ಸುರೇಶ್ ಗೌಡ ಸದರಿ ಮ್ಯೂಸಿಕ್ ಕಾನ್ಸರ್ಟ್ನ ರೂಪುರೇಷೆ, ಈ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಸವಿವರವಾಗಿ ಹಂಚಿಕೊಂಡಿದ್ದಾರೆ. ಅವರ ಮಾತಿನನ್ವಯ ಹೇಳೋದಾದರೆ, ನಾಯ್ಸ್ ಎಂಟರ್ಟೈನ್ಮೆಂಟ್ ಎಂಬುದು ಬೆಂಗಳೂರು ಮೂಲದ ಸಂಸ್ಥೆ. ಬೇರೆ ಬೇರೆ ಭಾಷೆಗಳ ಮ್ಯೂಸಿಕ್ ಇವೆಂಟುಗಳನ್ನು ವಿಶ್ವದ ಉದ್ದಗಲಕ್ಕೂ ಆಯೋಜಿಸುವ ಮಹತ್ವಾಕಾಂಕ್ಷೆ ಹೊಂದಿರೋ ಈ ಸಂಸ್ಥೆ ಈಗಾಗಲೇ ವಿಜಯ ಪ್ರಕಾಶ್, ಶಾನ್, ರಾಜೇಶ್ ಕೃಷ್ಣನ್ ಮುಂತಾದ ಗಾಯಕರ ಸಂಗೀತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಮುಂದಿನ ದಿನಗಳಲ್ಲಿ ಹರಿಹರನ್ರಂಥಾ ಮೇರು ಗಾಯಕರ ಲೈವ್ ಮ್ಯೂಸಿಕ್ ಕಾನ್ಸರ್ಟ್ಗಳಿಗೂ ಸಿದ್ಧತೆ ನಡೆಯುತ್ತಿದೆ. ಡಿಸೆಂಬರ್ ೫ರಂದು ಮ್ಯೂಸಿಕ್ ಕಾನ್ಸರ್ಟ್ ಬೆಂಗಳೂರಿನ ನೈಸ್ ಗ್ರೌಂಡಿನಲ್ಲಿ ನಡೆಯಲಿದೆ. ಹೆಚ್ಚು ಸಂಗೀತಾಸಕ್ತರು ಸೇರಬೇಕೆಂಬ ಉದ್ದೇಶದಿಂದ ಟಿಕೆಟ್ ಬೆಲೆಯನ್ನು 699ರಿಂದ ಆರಂಭಿಸಲಾಗಿದೆ. ಅದರ ಮೊತ್ತ 3000ದವರೆಗೂ ಇರಲಿದೆ. ಈ ಕಾರ್ಯಕ್ರಮದ ನಂತರದಲ್ಲಿ ಕನ್ನಡ ಹಬ್ಬದಂಥಾ ಮತ್ತೊಂದಷ್ಟು ಪ್ರಯೋಗಾತ್ಮಕ ಈವೆಂಟುಗಳನ್ನು ನಡೆಸಲು ಇಚ್ಛಿಸಿರೋದಾಗಿಯೂ ಸುರೇಶ್ ಗೌಡ ಹೇಳಿಕೊಂಡಿದ್ದಾರೆ.
ನಾಯ್ಸ್ ಎಂಟರ್ಟೈನ್ಮೆಂಟ್ ಲೈವ್ ಮ್ಯೂಸಿಕ್ ಕಾನ್ಸರ್ಟ್ಗೆ ಸುಮನ್ ಟಿವಿ ಡಿಜಿಟಲ್ ಪಾರ್ಟ್ನರ್ ಆಗಿ ಕಾರ್ಯನಿರ್ವಹಿಸಲಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಸುಮನ್ ಟಿವಿ ಮುಖ್ಯಸ್ಥರಾದ ಯುಗಂಧರ್ ಪೂಲಾ ಮತ್ತೊಂದಷ್ಟು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ಪ್ರಕಾರವಾಗಿ, ಈ ಕಾರ್ಯಕ್ರಮದ ಪ್ರಧಾನ ಸೆಲೆಬ್ರಿಟಿ ಯುವನ್ ಶಂಕರ್ ರಾಜಾ. ಇನ್ನುಳಿದಂತೆ ಈ ಇವೆಂಟನ್ನು ಕಳೆಗಟ್ಟಿಸದುವ ಸಲುವಾಗಿ ಮತ್ತೊಂದಷ್ಟು ಮಂದಿ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಅಂಥಾ ಸೆಲೆಬ್ರಿಟಿಗಳ ಪಟ್ಟಿಯೀಗ ತಯಾರಾಗುತ್ತಿದೆ. ಇನ್ನುಳಿದಂತೆ ಈ ಮ್ಯೂಸಿಕ್ ಕಾನ್ಸರ್ಟ್ನಲ್ಲಿ ಇಪ್ಪತೈದು ಸಾವಿರಕ್ಕೂ ಹೆಚ್ಚಿನ ಸಂಗೀತಾಸಕ್ತರು ಭಾಗಿಯಾಗುವ ನಿರೀಕ್ಷೆ ಆಯೋಜಕರಲ್ಲಿದೆ.

