ಭಿನ್ನ ಹಾದಿ ಮತ್ತು ಕ್ರಿಯಾಶೀಲತೆಯ ಮಿಳಿತದೊಂದಿಗೆ ಇದೀಗ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿರುವ ಚಿತ್ರ `ಅ ಡೇಟ್’. ವಿಮಲ್ ರಾಜ್ ಎನ್ ನಿರ್ದೇಶನದ ಈ ಸಿನಿಮಾ ಟ್ರೈಲರ್ ಹಾಗೂ ಹಾಡಿನ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಿದೆ. ಎರಡು ಪಾತ್ರಗಳ ನಡುವೆ, ಒಂದು ದಿನದ ಅವಧಿಯಲ್ಲಿ ಘಟಿಸುವ ಕಥನವನ್ನೊಳಗೊಂಡಿರುವ ಸದರಿ ಚಿತ್ರ ಈ ವಾರ ಅಂದರೆ, ಸೆಪ್ಟೆಂಬರ್ ೪ರಂದು ಬಿಡುಗಡೆಗೊಳ್ಳಲಿದೆ. ಈ ಸಿನಿಮಾ ಮೂಲಕವೇ ಒಂದಷ್ಟು ಹೊಸಾ ಕನಸುಗಳೂ ಟಿಸಿಲೊಡೆಯುತ್ತಿವೆ. ವಿಮಲ್ ರಾಜ್ ಜೊತೆ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ನಂದೀಶ್ ಸದಾನಂದ್ ಕೂಡಾ ನಿರ್ದೇಶಕನಾಗಬೇಕೆಂಬ ಕನಸಿನ ಸಾಕಾರದತ್ತ ಮಹತ್ವದ ಹೆಜ್ಜೆಯಿಟ್ಟಂತಾಗಿದೆ.
ಒಂದು ಪುಟ್ಟ ತಂಡ ಕಟ್ಟಿಕೊಂಡು ಅ ಡೇಟ್ ಸಿನಿಮಾ ನಿರ್ದೇಶನಕ್ಕಿಳಿದಿದ್ದ ವಿಮಲ್ ರಾಜ್ ಎನ್, ಸಿನಿಮಾ ಧ್ಯಾನ ಹೊಂದಿರುವ, ಅದಕ್ಕಾಗಿ ಸಮರ್ಪಿಸಿಕೊಂಡಂತೆ ಕೆಲಸ ಮಾಡಬಲ್ಲ ಒಂದು ತಂಡ ಕಟ್ಟಿಕೊಳ್ಳುವ ನಿರ್ಧಾರ ಮಾಡಿದ್ದರು. ಆ ಕನಸಿಗೆ ಜೊತೆಯಾದವರು ನಂದೀಶ್. ಒಂದು ಕಾಲದಲ್ಲಿ ನಟನಾಗಬೇಕೆಂಬ ಕನಸು ಹೊಂದಿದ್ದ ನಂದೀಶ್, ಆ ನಂತರ ತನ್ನ ಕಸುವಿರೋದು ಕ್ಯಾಮೆರಾ ಹಿಂದಿನ ಕ್ರಿಯಾಶೀಲತೆಯಲ್ಲಿಯೇ ಎಂಬ ಸತ್ಯವನ್ನು ಕಂಡುಕೊಂಡಿದ್ದರು. ಆ ಬಳಿಕ ನಿರ್ದೇಶಕನಾಗಬೇಕೆಂಬ ನಿರ್ಧಾರ ತಳೆದು, ಅದಕ್ಕಾಗಿ ತಾಲೀಮು ಆರಂಭಿಸಿ, ಕಥೆಯೊಂದನ್ನು ಸಿದ್ಧಪಡಿಸಲಾರಂಭಿಸಿದ್ದರು. ಕೊರೋನಾ ಕಾಲಮಾನದ ಅನಿಶ್ಚಿತ ವಾತಾವರಣ ಕವುಚಿಕೊಂಡಿದ್ದ ಸಮಯದಲ್ಲಿಯೇ ಸ್ವತಂತ್ರ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದ ವಿಮಲ್ ರಾಜ್ರ ಪರಿಚಯವಾಗಿತ್ತು. ಆ ಪರಿಚಯವೇ ನಂದೀಶ್ ಕನಸಿನ ಹಾದಿಯ ಮೊದಲ ಹೆಜ್ಜೆಯಾದದ್ದು ಅನಿರೀಕ್ಷಿತ ಅಚ್ಚರಿ!
ಕುಟುಂಬದ ಮೂಲ ಕೋಡಿಹಳ್ಳಿಯಾದರೂ, ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದ ನಂದೀಶ್ ಪಾಲಿಗೆ ಸಿನಿಮಾ ಎಂಬುದು ಬುದ್ಧಿ ಬಲಿತಾಗಿನಿಂದಲೂ ಸೆಳೆಯುತ್ತಾ ಬಂದಿದ್ದ ಮಾಯೆ. ಸಹಜವಾಗಿಯೇ ಆರಂಭ ಕಾಲದಲ್ಲಿ ಅವರನ್ನು ಆವರಿಸಿಕೊಂಡಿದ್ದದ್ದು ಸಿನಿಮಾ ನಟನಾಗಿ ಮಿಂಚಬೇಕೆಂಬ ಕನಸು. ಬದುಕಿನ ಅನಿವಾರ್ಯತೆಗಳ ಸೆಳವಿಗೆ ಸಿಕ್ಕು ಇಂಜಿನಿಯರಿಂಗ್ ಮಾಡಿಕೊಂಡಿದ್ದ ನಂದೀಶ್ ಸದಾನಂದ್, ಕೈತುಂಬಾ ಸಂಬಳ ಬರುವ ಕೆಲಸವನ್ನು ದಕ್ಕಿಸಿಕೊಳ್ಳಬಹುದಾಗಿದ್ದ ತಿರುವಿನಲ್ಲಿಯೇ ಸಿನಿಮಾ ಪಥವನ್ನು ಆರಿಸಿಕೊಂಡಿದ್ದರು. ಸಂಬಳಕ್ಕೆ ಹೊಂದಿಕೊಂಡು, ಬದುಕು ಮತ್ತೆಲ್ಲೋ ಕಳೆದು ಹೋದೀತೆಂಬ ಆತಂಕದಿಂದ ಸಿನಿಮಾ ಕ್ಷೇತ್ರದಲ್ಲೊಂದು ಪ್ರಯತ್ನಹ ಮಾಡೋಣ ಎಂಬ ನಿರ್ಧಾರ ತಳೆದವರೇ ರಂಗಭೂಮಿ ತಂಡವೊಂದಕ್ಕೆ ಸೇರಿಕೊಂಡಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ನಟನಾಗೋ ಕಸರತ್ತು ಆರಂಭಿಸಿದ್ದ ನಂದೀಶ್, ಶ್ರೀಕೃಷ್ಣ ಸಂಧಾನ ಮುಂತಾದ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಅನುಭವ ತುಂಬಿಕೊಂಡಿದ್ದರು.
ಈ ನಡುವೆ ಒಂದಷ್ಟು ಸಿನಿಮಾಗಳಿಗೆ ಆಡಿಷನ್ ಕೊಟ್ಟರೂ ಅವಕಾಶವೆಂಬುದು ಒಲಿದಿರಲಿಲ್ಲ. ಈ ನಡುವೆ ಯಶ ಅಂತೊಂದು ಸಿನಿಮಾದಲ್ಲಿ ಪುಟ್ಟ ಪಾತ್ರವೊಂದು ಸಿಕ್ಕಿತ್ತು. ಅದಾದ ನಂತರ ಅವಕಾಶದ ಬೇಟೆಯ ಜೊತೆಗೇ ೯ ಟು ೫ ಅಂತೊಂದು ಕಿರುಚಿತ್ರವನ್ನು ತಾನೇ ಕಥೆ ಬರೆದು ನಿರ್ದೇಶನ ಮಾಡಿದ್ದ ನಂದೀಶ್ಗೆ ನಟನೆಗಿಂತಲೂ ನಿರ್ದೇಶನವೇ ಆಸಕ್ತಿ ಮೂಡಿಸಲಾರಂಭಿಸಿತ್ತು. ಹೀಗೆ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ ನಂತರ, ಕೋವಿಡ್ ಕಾಲಘಟ್ಟದಲ್ಲಿ ದೊಡ್ಡ ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದಿದ್ದ ನಂದೀಶ್, ಕಥೆ ಬರೆಯುವ ಕೆಲಸಕ್ಕೆ ಚಾಲನೆ ಕೊಟ್ಟಿದ್ದರು. ಆ ಹೊತ್ತಿನಲ್ಲಿ ಅ ಡೇಟ್ ಚಿತ್ರದ ಅಸೋಸಿಯೇಟ್ ಆಗಹಹಿ ಕೆಲಸ ಮಾಡೋ ಅವಕಾಶವೊಂದು ಅಚಾನಕ್ಕಾಗಿ ಒಲಿದು ಬಂದಿತ್ತು.
ವಿಮಲ್ ರಾಜ್ ಎನ್ ಅವರು ಪರಿಚಯವಾಗುತ್ತಲೇ, ತಾವು ನಿರ್ದೇಶನ ಮಾಡಿದ್ದ ಅ ಡೇಟ್ ಎಂಬ ಕಿರುಚಿತ್ರವನ್ನು ನಂದೀಶ್ಗೆ ತೋರಿಸಿದ್ದರಂತೆ. ಅದನ್ನು ರೂಪಿಸಿದ್ದ ರೀತಿ ಕಂಡು ಬೆರಗಾಗಿದ್ದ ನಂದೀಶ್ ಅತೀವ ಉತ್ಸಾಹದಿಂದಲೇ ಈ ಸಿನಿಮಾ ಭಾಗವಾಗಿದ್ದರು. ನಂತರ ವಿಮಲ್ ರಾಜ್ ನಂದೀಶ್ರನ್ನು ಅಸೋಸಿಯೇಟ್ ಡೈರೆಕ್ಟರ್ ಆಗಿ ಸೇರಿಸಿಕೊಂಡಿದ್ದರು. ಆ ನಂತರದಲ್ಲಿ ಕ್ಷಣ ಕ್ಷಣಕ್ಕೂ ಬೆರಗು ಮೂಡಿಸುವಂಥಾ ಅನುಭವವನ್ನು ಚಿತ್ರೀಕರಣದುದ್ದಕ್ಕೂ ತನ್ನ ದಾಗಿಸಿಕೊಂಡ ತೃಪ್ತ ಭಾವ ನಂದೀಶ್ರಲ್ಲಿದೆ. ಬೆಂ ಗಳೂರಿನ ಐವತೈದಕ್ಕೂ ಹೆಚ್ಚು ಲೊಕೇಷನ್ನುಗಳಲ್ಲಿ, ತಮ್ಮದೇ ಧಾಟಿಯಲ್ಲಿ ಚಿತ್ರೀಕರಣ ನಡೆಸುವ ಮೂಲಕ ವಿಮಲ್ ರಾಜ್ ನಂದೀಶ್ರನ್ನು ಅಚ್ಚರಿಗೀಡು ಮಾಡಿದ್ದರಂತೆ.
ಸಿದ್ಧಸೂತ್ರಗಳಾಚೆಗೆ ರೂಪುಗೊಂಡಿರುವ ಅ ಡೇಟ್ ಚಿತ್ರ ನೋಡುಗರಲ್ಲೂ ಅಂಥಾದ್ದೇ ಅಚ್ಚರಿ ಮೂಡಿಸಲಿದೆ, ಎಲ್ಲರಿಗೂ ಇಷ್ಟವಾಗಲಿದೆ ಎಂಬ ತುಂಬು ನಂಬಿಕೆ ನಂದೀಶ್ರಲ್ಲಿದೆ. ಈ ಚಿತ್ರದ ಮೂಲಕ ವಿಮಲ್ ರಾಜ್ರಿಂದ ಅನೇಕ ನಿರ್ದೇಶನದ ಪಟ್ಟುಗಳನ್ನೂ ನಂದೀಶ್ ಕರಗತ ಮಾಡಿಕೊಂಡಿದ್ದಾರೆ. ತಮ್ಮ ನಿರ್ದೇಶನದ ಕಸುವನ್ನು ಒರೆಗೆ ಹಚ್ಚಿ ನೋಡಿಕೊಂಡಿದ್ದಾರೆ. ಸದರಿ ಸಿನಿಮಾ ಮೂಲಕವೇ ನಿರ್ದೇಶಕನಾಗೋ ಕನಸನ್ನು ಮತ್ತಷ್ಟು ದೃಢವಾಗಿಸಿಕೊಂಡಿರುವ ನಂದೀಶ್, ಈಗಾಗಲೇ ಸ್ವತಂತ್ರ ನಿರ್ದೇಶನಕ್ಕಗಿ ತಯಾರಿ ಆರಂಭಿಸಿದ್ದಾರೆ. ಅ ಡೇಟ್ ಎಂಬುದು ಕನ್ನಡ ಚಿತ್ರರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲಿದೆ ಎಂಬ ತುಂಬು ನಂಬಿಕೆ ನಂದೀಶ್ರದ್ದು.
keywords: A DATE, vimalraj n, nandish sadanand, sandalwood

