ಮುಖ್ಯವಾಹಿನಿಯ ಹೀಓರೋಗಳೆಲ್ಲ ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಿ… ಇಂಥಾದ್ದೊಂದು ಆಶಯ ಸಿನಿಮಾಸಕ್ತರದ್ದು. ಹೀಗೆ ಸ್ಟಾರ್ ನಟರು ನಿಯಮಿತವಾಗಿ ಸಿನಿಮಾ ಮಾಡುವ ಶಿಸ್ತು ರೂಢಿಸಿಕೊಂಡರೆ ಸಿನಿಮಾರಂಗದ ಹರಿವಿಗೊಂದು ಹೊಸಾ ಓಘ ಬರುತ್ತದೆಂಬುದು ಅದರ ಹಿಂದಿರೋ ಉದ್ದೇಶ. ಆದರೆ, ಒಂದಷ್ಟು ಸ್ಟಾರ್ಗಳು ತಮ್ಮದೇ ಆದ ಜಗತ್ತಿನಲ್ಲಿ ಕಳೆದು ಹೋಗಿದ್ದಾರೆ. ಓರ್ವ ಸ್ಟಾರು ಮಾಡಬಾರದ್ದು ಮಾಡಿ ಜೈಲು ಪಾಲಾಗಿದ್ದರೆ, ಆತನ ಮಾಜಿ ಗೆಣೆಕಾರ ಸಿನಿಮಾ ದೃಷ್ಟಿಯಿಂದ ಹೊರಗಿದ್ದೂ ಪ್ರಯೋಜನ ಇಲ್ಲ ಎಂಬಂತಾಗಿದ್ದಾನೆ. ಸರಣಿ ಮಸಿಯಲ್ಲಿ ಮಿಂದೆದ್ದ ಮತ್ತೋರ್ವ ಗ್ಲೋಬಲ್ ಸ್ಟಾರು ಈಗಷ್ಟೇ ಮಕಾಡೆ ಮಲಗಿದ್ದಾನೆ. ಇಂಥಾ ಪಲ್ಲಟಗಳಾಚೆಗೆ ತಮ್ಮ ಪಾಡಿಗೆ ತಾವು ಒಂದಷ್ಟು ಹೊಸಾ ಪ್ರಯತ್ನಗಳಿಗೆ ಒಗ್ಗಿಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಬೆರಗಿನ ಜೊತೆಗೆ ಆಶಾವಾದವನ್ನೂ ಮೂಡಿಸಿದ್ದಾರೆ!
ಶಿವರಾಜ್ ಕುಮಾರ್ ಒಂದಿನಿತೂ ವಿರಾಮ ಕೊಡದಂತೆ ನಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಂಡು, ಅಷ್ಟೇ ಆಸ್ಥೆಯಿಂದ ಎಲ್ಲವನ್ನೂ ಸಮಾಪ್ತಿಗೊಳಿಸಿಕೊಂಡು ಸಾಗುತ್ತಿದ್ದಾರೆ. ಸದ್ಯಕ್ಕೆ ಅವರ ಬತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳಿದ್ದಾವಾದರೂ, ಪವನ್ ಒಡೆಯರ್ ನಿರ್ದೇಶನದ `ಬೇಲ್’ ಚಿತ್ರ ಇದೀಗ ಮುನ್ನೆಲೆಗೆ ಬಂದಿದೆ; ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಟೀಸರ್ ಮೂಲಕ. ಈ ಟೀಸರ್ ಬಗೆಗೀಗ ಅಭಿಮಾನದಾಚೆಗೂ ವ್ಯಾಪಕವಾಗಿ ಸದಭಿಪ್ರಾಯಗಳು ಕೇಳಿಬರುತ್ತಿವೆ. ಮಲ್ಟಿಸ್ಟಾರರ್ ಸಿನಿಮಾ ಅನ್ನಬಹುದಾದ ಬೇಲ್ ಚಿತ್ರದಲ್ಲಿ ಶಿವಣ್ಣನಿಗೆ ಸಾಯಿಕುಮಾರ್, ಜಯರಾಮ್, ಲೂಸ್ ಮಾದ ಯೋಗಿ ಮುಂತಾದವರು ಪ್ರಮುಖ ಪಾತ್ರಗಳ ಮೂಲಕ ಸಾಥ್ ಕೊಟ್ಟಿದ್ದಾರೆ.

ಇಲ್ಲಿ ಶಿವರಾಜ್ಕುಮಾರ್ ಕಾಣಿಸಿಕೊಂಡಿರುವ ಗೆಟಪ್ಪೂ ಕೂಡಾ ಒಂದಷ್ಟು ನಿರೀಕ್ಷೆಗಳು ಹುಟ್ಟುಹಾಕಿದೆ. ಪೊಲೀಸ್ ಅಧಿಕಾರಿಗಳ ಕುಟುಂಬವೊಂದರ ಸುತ್ತ ಘಟಿಸೋ ಈ ಕಥೆಯಲ್ಲಿ ಮಾಸ್ ಸನ್ನಿವೇಶಗಳ ಜೊತೆಗೆ, ಹಾಸ್ಯದ ಪ್ರಧಾನ್ಯತೆಯೂ ಇರುವ ವಿಚಾರವನ್ನು ನಿರ್ದೇಶಕರು ಟೀಸರ್ ಮೂಲಕ ಸ್ಪಷ್ಟಪಡಿಸಿದ್ದಾರತೆ. ಟ್ರ್ಯಾಕ್ ಕಾಮಿಡಿಯಾಚೆಗೆ ಮುಖ್ಯ ಪಾತ್ರಗಳ ಮೂಲಕವೇ ನಗು ಮೂಡಿಸುವಂಥಾ ಹಾದಿಯಲ್ಲಿ ಈ ಬಾರಿ ಪವನ್ ಒಡೆಯರ್ ಪ್ರೇಕ್ಷಕರ ಮನಗೆಲ್ಲಲು ತಯಾರಾಗಿದ್ದಾರೆ. ಪವನ್ ಒಡೆಯರ್ ಬಹುಕಾಲದ ನಂತರ ಬೇಲ್ ಚಿತ್ರದ ಮೂಲಕ ನಿರ್ದೇಶಕರಾಗಿ ಮರಳುತ್ತಿರೋದೂ ಕೂಡಾ ಪ್ರೇಕ್ಷಕರ ನಿರೀಕ್ಷೆ ನೂರ್ಮಡಿಸುವಂತೆ ಮಾಡಿರೋದು ಸುಳ್ಳಲ್ಲ!
keywords: shivarajkumar, pawan odeyar, bail mome

