ಬಹುಶಃ ಒಂದಷ್ಟು ಅಡೆತಡೆಗಳು ಬಾರದಿದ್ದಿದ್ದರೆ, ವಿಜಯ್ ರಾಜಕಾರಣದ ಅಖಾಡಕ್ಕಿಳಿದು, ಅಲ್ಲಿನ ಒಂದಷ್ಟು ಸ್ಥಿತ್ಯಂತರಗಳ ನಡುವೆ ಗೋಜಲಾಗದೇ ಇದ್ದಿದ್ದರೆ ಜನನಾಯಗನ್ ಚಿತ್ರಕ್ಕೆ ಮತ್ತೊಂದು ಮಟ್ಟದ ಓಪನಿಂಗ್ ಸಿಕ್ಕಿರುತ್ತಿತ್ತು. ಆದರೆ, ಪದೇ ಪದೆ ಮುಂದಕ್ಕೆ ಹೋದ ಬಿಡುಗಡೆ ದಿನಾಂಕ, ರೀಮೇಕ್ ಸರಕೆಂಬ ನಿರಾಸೆಯೂ ಸೇರಿ ಒಂದಷ್ಟು ಬಗೆಯಲ್ಲಿ ಜನನಾಯಗನ್ ಚಿತ್ರದ ಬಗ್ಗೆ ಸಿನಿಮಾಸಕ್ತರಲ್ಲೊಂದು ನಿರುತ್ಸಾಹ ಮೂಡಿಕೊಂಡಿತ್ತು. ಇಂಥಾ ಶುಷ್ಕ ವಾತಾವರಣದಲ್ಲಿ ಬಿಡುಗಡೆಗೊಂಡಿರುವ ಜನನಾಯಗನ್ ನಿರೀಕ್ಷಿತ ಮಟ್ಟದ ಕಲೆಕ್ಷನ್ನಿಲ್ಲದೆ ಸೊರಗಿದಂತಿದೆ. ಈ ನಡುವೆ ಸದರಿ ಸಿನಿಮಾದಲ್ಲಿ ವಿಜಯ್ ಜೊತೆ ನಟಿಸಿರೋ ಪೂಜಾ ಹೆಗ್ಡೆ ಪಾಲಿಗೂ ಜನನಾಯಗನ್ ನಿರಾಸೆ ತಂದಿಟ್ಟಿದೆ.
ಅಷ್ಟಕ್ಕೂ ಪೂಜಾ ಹೆಗ್ಡೆಯದ್ದು ಅತ್ಯಂತ ಕಡಿಮೆ ಅವಧಿಯ ಪಾತ್ರ. ಬಹುಶಃ ಬಹುತೇಕ ನಟಿಯರು ಅದನ್ನು ನಿರಾಕರಿಸುವ ಸಾಧ್ಯತೆಗಳೇ ಹೆಚ್ಚಾಗಿದ್ದವು. ಆದರೆ, ವಿಜಯ್ ಮೇಲಿನ ಅಭಿಮಾನದಿಂದ ಅದನ್ನು ಪೂಜ ಒಪ್ಪಿಕೊಂಡಿದ್ದದ್ದಾಗಿ ಅನೇಕ ಸಂ ದರ್ಶನಗಳಲ್ಲಿ ಹೇಳಿಕೊಂಡಿದ್ದಿದೆ. ಆದರೂ ಜನನಾಯಗನ್ ಬಿಗ್ ಬಜೆಟ್ ಚಿತ್ರವಾದ್ದರಿಂದ ಸಿಕ್ಕ ಅಲ್ಪಾವಕಾಶದಲ್ಲಿಯೇ ಮತ್ತೆ ಫಾರ್ಮಿಗೆ ಮರಳಬಹುದೆಂಬ ಸಣ್ಣ ಆಸೆ ಪೂಜಾಗಿದ್ದಂತಿತ್ತು. ಆದರೆ ರಾಜಕೀಯ ಅಜೆಂಡಾಗಳೂ ಬೆರೆತಿದ್ದರಿಂದಾಗಿ ಅತಿಯಾದ ನಾಯಕನ ವೈಭವೀಕರಣದ ನಡುವೆ ಪೂಜಾ ಕಳೆದುಹೋದಂತಾಗಿದ್ದಾಳೆ. ಹಾಗೆ ಬಂದು ಹೀಗೆ ಹೋಗೋ ಆ ಪಾತ್ರ ಪ್ರೇಕ್ಷಕರ ನೆನಪಲ್ಲುಳಿಯೋದು ಕಷ್ಟ. ಈ ಮೂಲಕ ಪೂಜಾಗೆ ಮತ್ತೆ ನಸೀಬು ಕೈಕೊಟ್ಟು ಬಿಟ್ಟಿದೆ!
೨೦೨೦ರಲ್ಲಿ ಅಲಾ ವೈಕುಂಟಪುರಾಲೋ ಅಂತೊಂದು ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಳು. ಅದು ಒಂದು ಮಟ್ಟಕ್ಕೆ ಗೆಲುವು ಕಂಡಿತ್ತು. ಆ ಕ್ಷಣದಿಂದ ಇಲ್ಲಿಯವರೆಗೂ ಪೂಜಾ ಹೆಗ್ಡೆ ಪಾಲಿಗೆ ಮತ್ತೊಂದು ಗೆಲುವು ಮರೀಚಿಕೆಯಾಗಿದೆ. ಎಲ್ಲಾ ಸಿನಿಮಾಗಳೂ ಗೆಲ್ಲುತ್ತವೆ ಎಂದೇನೂ ಅಲ್ಲ. ಒಂದು ಸೋಲಿನ ನಂತರ ಮತ್ತೊಂದು ಸುಮಾರಾದ ಗೆಲುವು ಸಿಕ್ಕರೂ ಆಕ್ಸಿಜನ್ನು ಸಿಕ್ಕಂತಾಗುತ್ತದೆ. ಆದರೆ, ಪೂಜಾ ಪಾಲಿಗೆ ಅದೇಕೋ ಅಂಥಾದ್ದೊಂದು ಅವಕಾಶವೇ ಸಿಗದಾಗಿ ಹೋಗಿದೆ. ಈ ನಡುವೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂಬ ಸಿನಿಮಾದಲ್ಲಿ ಪೂಜಾ ನಟಿಸಿದ್ದಳು. ಅದು ಹೀನಾಯವಾಗಿ ಸೋಲು ಕಂಡಿತ್ತು. ರಾಧೆ ಶ್ಯಾಮ್, ಬೀಸ್ಟ್, ದೇವಾ ಮುಂತಾದ ಸಿನಿಮಾಗಳಿಗೆ ಒಂದರ ಹಿಂದೊಂದರಂತೆ ಸೋಲೆದುರಾಗಿತ್ತು.
ಒಂದು ಕಾಲದಲ್ಲಿ ಪೂಜಾ ನಾಯಕಿಯಾಗಿ ನಟಿಸಿದ ಸಿನಿಮಾಗಳೆಲ್ಲವೂ ಗೆಲ್ಲುತ್ತದೆಂಬಂಥಾ ನಂಬಿಕೆ ಇತ್ತು. ಆಕೆಯ ನಟನೆ ಮತ್ತು ಗ್ಲಾಮರ್ಗೆ ಭಾಷಾತೀತವಾಗಿ ಅಭಿಮಾನಿಗಳಿದ್ದರು. ಈಗಲೂ ಅಭಿಮಾನಕ್ಕೇನು ತತ್ವಾರವಿಲ್ಲ. ಈಕೆಯ ದುರಾದೃಷ್ಟದಿಂದಲೇ ನಟಿಸಿದ ಸಿನಿಮಾಗಳೆಲ್ಲ ಕವುಚಿಕೊಂಡಿದೆ ಅನ್ನೋದೂ ಕೂಡಾ ಮೂರ್ಖತನ. ಯಾಕೆಂದರೆ, ತಪ್ಪಿರೋದು ಆಯ್ಕೆಯಲ್ಲಿ ಮಾತ್ರ. ಯಶದ ನಾಗಾಲೋಟದಲ್ಲಿದ್ದಾಗ ಆಯ್ಕೆಗೆ ವಿಪುಲ ಅವಕಾಶಗಳಿರುತ್ತವೆ. ಆದರೆ ಹೀಗೆ ಸೋಲಿನ ಕಾವಳ ಕವುಚಿಕೊಂಡಾಗ ಸಿಕ್ಕ ಅವಕಾಶವನ್ನೇ ಅಪ್ಪಿಕೊಳ್ಳುವ ಅನಿವಾರ್ಯತೆ ಎದುರಾಗುತ್ತೆ. ಸದ್ಯಕ್ಕೆ ಪೂಜಾಳ ಮುಂದೆಯೂ ಅಂಥಾ ಅನಿವಾರ್ಯತೆ ಇದ್ದಂತಿದೆ. ಈ ನಡುವೆ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಆ ಮೂಲಕ ಮಂಗಳೂರು ಹುಡುಗಿ ಮತ್ತೆ ಮಿಂಚಬಹುದಾ?
keywords: pooja hegde, jananayagan movie, thalapathy vijay

