ಹಾಡುಗಳು ಮತ್ತು ಟ್ರೈಲರ್ ಮೂಲಕ ಕುತೂಹಲ ಮೂಡಿಸಿರೋ `ಲವ್ ಸೀಸನ್ಸ್’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದು ಹೊಸಬರ ತಂಡದಿಂದ ರೂಪುಗೊಂಡಿರೋ ಸಿನಿಮಾವಾದ್ದರಿಂದ, ಹಾಡುಗಳು ಮತ್ತು ಟ್ರೈಲರಿನಲ್ಲಿ ಹೊಸತನದ ಹೊಳಹೊಂದು ಮಿಂಚಿರುವುದರಿಂದ ಲವ್ ಸೀಸನ್ಸ್ ಬಗ್ಗೆ ಪ್ರೇಕ್ಷಕರಲ್ಲೊಂದು ಕೌತುಕ ಮನೆ ಮಾಡಿದೆ. ಇದೇ ಜುಲೈ 3ರಂದು ಬಿಡುಗಡೆಗೊಳ್ಳಲಿರುವ ಈ ಸಿನಿಮಾ ಮೂಲಕ ಮುಕುಂದ ರಾಮಸ್ವಾಮಿ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಮೂಲಕ ಚಿಕ್ಕಂದಿನಿಂದಲೇ ಬೆನ್ನತ್ತಿದ್ದ ಸಿನಿಮಾ ಜಗತ್ತಿನ ಕನಸು, ಅದಕ್ಕಾಗಿ ವರ್ಷಗಟ್ಟಲೆ ಮಾಡಿದ್ದ ತಾಲೀಮು ಮತ್ತು ಅದಕ್ಕಾಗಿ ಪಟ್ಟ ಪರಿಶ್ರಮಗಳೆಲ್ಲವೂ ಸಾರ್ಥಕ್ಯ ಕಾಣುವ ಕ್ಷಣಗಳು ಹತ್ತಿರಾದ ಖುಷಿ ಮುಕುಂದ ರಾಮಸ್ವಾಮಿಯವರನ್ನು ಆವರಿಸಿಕೊಂಡಿದೆ!
ಸಿನಿಮಾ ಸೇರಿದಂತೆ ನಾನಾ ಕ್ಷೇತ್ರಗಳ ಬಗ್ಗೆ ಬಹುತೇಕರಿಗೊಂದು ಸೆಳೆತವಿರುವುದು ಮಾಮೂಲು. ಹೆಚ್ಚಿನ ಮಂದಿಗೆ ಅದೊಂದು ಹುಚ್ಚಿನಂತ ಆವರಿಸಿಕೊಂಡಿರುತ್ತದೆ. ಆದರೆ, ಕೆಲವೇ ಕೆಲ ಮಂದಿಯ ಪಾಲಿಗದು ಅಕ್ಷರಶಃ ಆತ್ಮಕ್ಕಂಟಿದ ಹಚ್ಚೆಯಿದ್ದಂತೆ. ಹುಚ್ಚು ಒಂದು ಹಂತದಲ್ಲಿ ಬಿಟ್ಟರೂ ಬಿಡಬಹುದು; ಆದರೆ ಆತ್ಮಕ್ಕಂಟಿದ ಹಚ್ಚೆ ಮಾಸಲಾಗಲು ಸಾಧ್ಯವಿಲ್ಲ. ಲವ್ ಸೀಸನ್ಸ್ ನಾಯಕ ಮುಕುಂದರಾಮಸ್ವಾಮಿ ಪಾಲಿಗೂ ಸಿನಿಮಾ ಸೆಳೆತವೆಂಬುದು ಹಚ್ಚೆಯಂತಿತ್ತು. ಬುದ್ಧಿ ಬಲಿಯುತ್ತಲೇ ಸಿನಿಮಾ ಲೋಕದತ್ತ ಬೆರಗುಗಣ್ಣಿನಿಂದ ನೋಡುತ್ತಿದ್ದ ಮುಕುಂದ್ ಪಾಲಿಗೆ, ಆ ವಯಸ್ಸಿನಿಂದಲೇ ಸಿನಿಮಾ ನಟನಾಗಬೇಕೆಂಬ ಹಂಬಲವೊಂದು ಶುರುವಾಗಿತ್ತು.
ಪ್ರತಿಯೊಂದು ಹಂತದಲ್ಲಿಯೂ ಸಿನಿಮಾ ಧ್ಯಾನದಲ್ಲಿ ಸಾಗಿ ಬಂದಿದ್ದ ಮುಕುಂದ ರಾಮಸ್ವಾಮಿ, ಆ ಮಾಯೆಯ ಜೊತೆ ಜೊತೆಗೇಬ ವ್ಯಾಸಂಗ ಮುಗಿಸಿಕೊಂಡ ಕ್ಷಣದಲ್ಲಿಯೇ ತನ್ನ ಭವಿಷ್ಯವೇನಿದ್ದರೂ ಚಿತ್ರರಂಗದಲ್ಲಿಯೇ ಎಂಬಂಥಾ ಗಟ್ಟಿಯಾದ ನಿಲುವು ತಳೆದಿದ್ದರು. ಅದರ ಭಾಗವಾಗಿಯೇ, ಓದು ಮುಕ್ತಾಯವಾದೇಟಿಗೆ ೨೦೧೮ರಲ್ಲಿ ನಟನಾಗಲು ಬೇಕಾದ ತಯಾರಿ ಆರಂಭಿಸಿದ್ದರು. ಹೈದರಾಬಾದಿನ ರಂಗಶಾಲೆಯಲ್ಲಿ ತರಬೇತಿ ಪಡೆದುಕೊಂಡು ನಾನಾ ಬೀದಿನಾಟಕಗಳಲ್ಲಿ ಪಾತ್ರ ಮಾಡುತ್ತಾ, ನಟನಾಗಿ ಹದಗೊಳ್ಳಲಾರಂಭಿಸಿದ್ದರು. ಹಾಗೆ ರಂಗಶಾಲೆಯಲ್ಲಿ ಅಭ್ಯಾಸ ಮುಗಿಸಿ ಬಂದಿದ್ದ ಮುಕುಂದ್ ರಾಮಸ್ವಾಮಿ, ಕೃತ್ವಿಕ್ ನಿರ್ದೇಶನದ ಎಂಆರ್ಎಫ್ ಎಂಬ ಕಿರುಚಿತ್ರವೊಂದರ ಮೂಲಕ ತಮ್ಮೊಳಗಿನ ನಟನೆಯ ಕಸುವನ್ನು ಒರೆಗೆ ಹಚ್ಚಿದ್ದರು.
ಇದಾದ ನಂತರ ಒಂದು ಪೂರ್ಣಪ್ರಮಾಣದ ಸಿನಿಮಾಕ್ಕಾಗಿ ತಯಾರಿ ಮಾಡಿಕೊಂಡರಾದರೂ ಬಜೆಟ್ ಜಾಸ್ತಿಯಾಗುತ್ತದೆಂಬ ಕಾರಣದಿಂದ ನಿರ್ಮಾಪಕರು ನಿರಾಕರಿಸಿದ್ದರು. ಆ ಬಳಿಕ ನಿರ್ದೇಸಕ ಕೃತ್ವಿಕ್ ಹಾಗೂ ಮುಕುಂದ ರಾಮಸ್ವಾಮಿ ಲವ್ ಸೀಸನ್ಸ್ ಚಿತ್ರದ ಕಥೆ ಚಿತ್ರಕಥೆಯತ್ತ ಗಮನ ಹರಿಸಿದ್ದರು. ಅದಕ್ಕೆ ನಿರ್ಮಾಪಕರ ಕಡೆಯಿಂದ ಸಕಾರಾತ್ಮಕ ಬೆಂಬಲ ಸಿಗುತ್ತಲೇ, ನಟನೆಯಲ್ಲಿ ಮತ್ತಷ್ಟು ಪರಿಪೂರ್ಣರಾಗುವ ಇರಾದೆಯಿಂದ ನಟನಾ ರಂಗಶಾಲೆಗೆ ಸೇರಿಕೊಂಡಿದ್ದರು. ಹಾಗೆ ಪ್ರತಿಯೊಂದರಲ್ಲಿಯೂ ತರಬೇತಿ ಪಡೆದುಕೊಂಡು, ತಯಾರಿ ಮಾಡಿಕೊಂಡೇ ಮುಕುಂದ ರಾಮಸ್ವಾಮಿ ಈ ಸಿನಿಮಾದ ರಾಮ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ.
ರಾಮ್ ಎಂಬ ಪಾತ್ರ ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳುವ ಗುಣ ಹೊಂದಿದೆಯಂತೆ. ನಾನಾ ಶೇಡುಗಳಿರುವ ಈ ಪಾತ್ರವನ್ನು ನಿರ್ವಹಿಸಲು ಮುಕುಂದ್ ಸಾಕಷ್ಟು ಶ್ರಮಪಟ್ಟಿದ್ದಾರೆ. ಸದರಿ ಪಾತ್ರದ ಸಣ್ಣ ಝಲಕ್ಕುಗಳು ಟ್ರೈಲರಿನಲ್ಲಿ ಕಾಣಿಸಿವೆ. ಅದಕ್ಕೂ ಕೂಡಾ ಪ್ರೇಕ್ಷಕರ ಕಡೆಯಿಂದ ಅತ್ಯುತ್ತಮ ಪ್ರತಿಕ್ರಿಯೆಗಳು ಕೇಳಿ ಬರುತ್ತಿರೋದರಿಂದ ಮುಕುಂದ ರಾಮಸ್ವಾಮಿ ಖುಷಿಗೊಂಡಿದ್ದಾರೆ. ಹೀಗೆ ಸರ್ವ ರೀತಿಯಿಂದಲೂ ತಯಾರಾಗಿ ಬಂದಿರುವ ಮುಕುಂದ ರಾಮಸ್ವಾಮಿ, ಲವ್ ಸೀಸನ್ಸ್ ನಿರ್ಮಾಪಕರಾದ ಎನ್.ಆರ್ ಮಂಜುನಾಥ ನೀಲೇರಿ ಅವರ ಪುತ್ರ. ಸ್ಥಿತಿವಂತ ಕುಟುಂಬದಿಂದ ಬಂದಿದ್ದರೂ ಕೂಡಾ, ಸೆಟ್ ಬಾಯ್ ಆಗಿ, ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿ ಎಲ್ಲದರಲ್ಲಿಯೂ ಕಾರ್ಯರೂಪದಲ್ಲಿಯೇ ಪಳಗಿಕೊಂಡಿರುವ ಮುಕುಂದ ರಾಮಸ್ವಾಮಿ, ಲವ್ ಸೀಸನ್ಸ್ ಮೂಲಕ ತನ್ನ ಕನಸಿನ ಹಾದಿ ರಂಗು ಪಡೆದುಕೊಳ್ಳುವ ಭರವಸೆ ಹೊಂದಿದ್ದಾರೆ. ಈ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿರುವಾಗಲೇ ಮತ್ತೊಂದಷ್ಟು ನವೀನ ಅವಕಾಶಗಳು ಅರಸಿ ಬರುತ್ತಿರೋದನ್ನು ಕಂಡು ಥ್ರಿಲ್ ಆಗಿರುವ ಅವರು, ಸದ್ಯಕ್ಕೆ ಲವ್ ಸೀಸನ್ಸ್ ಬಿಡುಗಡೆಪೂರ್ವ ಕೆಲಸ ಕಾರ್ಯಗಳ ಬಗ್ಗೆ ಗಮನಹರಿಸಿದ್ದಾರೆ. ಅಂದಹಾಗೆ, ಈ ಚಿತ್ರ ಇದೇ ಜುಲೈ ೩ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
keywords: mukunda ramaswamy, love seasons movie, sandalwood

