ಮಾಸ್ ಪಾತ್ರಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿರುವ ಶ್ರೇಯಸ್ ಮಂಜು ಅವರಿಗಿಂದು ಹಟ್ಟುಹಬ್ಬದ ಸಂಭ್ರಮ. ಈ ಬಾರಿ ವಾಡಿಕೆಗಿಂತಲೂ ತುಸು ಹೆಚ್ಚೇ ಸಂಭ್ರಮ ಶ್ರೇಯಸ್ರನ್ನು ಆವರಿಸಿಕೊಂಡಿದೆ. ಅದಕ್ಕೆ ಕಾರಣವಾಗಿರೋದು ದಿಲ್ದಾರ್ ಚಿತ್ರತಂಡ ಕೊಟ್ಟಿರುವ ವಿಶಿಷ್ಟವಾದ ಗಿಫ್ಟು. ದಿಲ್ದಾರ್ ನಾಯಕ ಶ್ರೇಯಸ್ ಹುಟ್ಟುಹಬ್ಬಕ್ಕೆ ಉಡುಗೊರೆ ಎಂಬಂತೆ ಚಿತ್ರತಂಡ ಬರ್ತ್ಡೇ ಟೀಸರ್ ಒಂದನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಮಿಂಚಿರುವ ಪಕ್ಕಾ ಮಾಸ್ ಶೈಲಿಯ ಗ್ಲಿಂಪ್ಸ್ ನೋಡಿ ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಇದಕ್ಕೆ ಕೇಳಿ ಬರುತ್ತಿರುವ ಅತ್ಯುತ್ತಮ ಪ್ರತಿಕ್ರಿಯೆ ಕಂಡು ಒಂದಿಡೀ ಚಿತ್ರತಂಡ ಥ್ರಿಲ್ ಆಗಿದೆ!
ಮಧು ಗೌಡ ಗಂಗೂರ್ ನಿರ್ದೇಶನ ಮಾಡಿರುವ ದಿಲ್ದಾರ್ ಚಿತ್ರತಂಡ ಆರಂಭದಿಂದಲೂ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿತ್ತು. ಚಿತ್ರೀಕರಣವನ್ನೆಲ್ಲ ಸದ್ದಿಲ್ಲದೇ ಮುಗಿಸಿಕೊಂಡಿದ್ದ ತಂಡ, ಅಷ್ಟೇ ಸಲೀಸಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳನ್ನೂ ಸಮಾಪ್ತಿಗೊಳಿಸಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ ಈ ಘಳಿಗೆಯಲ್ಲಿ ಬಿಡುಗಡೆಗೊಂಡಿರುವ ಈ ಬರ್ತ್ಡೇ ಟೀಸರ್ ದಿಲ್ದಾರ್ ಪ್ರಭೆಯನ್ನು ಮತ್ತಷ್ಟು ತೀವ್ರವಾಗಿಸಿದೆ. ಶ್ರೇಯಸ್ ಮಂಜು ಪಡ್ಡೆಹುಲಿ ಚಿತ್ರದ ಮೂಲಕ ಪ್ರೇಕ್ಷಕರಲ್ಲೊಂದು ಭರವಸೆ ಮೂಡಿಸಿದ್ದರು. ದಿಲ್ದಾರ್ ಮೂಲಕ ಪಕ್ಕಾ ಆಕ್ಷನ್ ಮೂಡಿಗೆ ಜಾರಿರುವ ಸ್ಪಷ್ಟ ಸುಳಿವು ಸದರಿ ಟೀಸರ್ ಮೂಲಕ ಸಿಕ್ಕಿದೆ.
ಹೀಗೆ ಹೀರೋನಾ ಬರ್ತ್ಡೇ ಸಂದರ್ಭದಲ್ಲಿ ಮೂಡಿಕೊಂಡಿರುವ ಪಾಸಿಟಿವ್ ವಾತಾವರಣ ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿದೆ. ಇನ್ನೇನು ಅತೀ ಶೀಘ್ರದಲ್ಲಿಯೇ ಒಂದೊಳ್ಳೆ ಮುಹೂರ್ತ ನೋಡಿ ದಿಲ್ದಾರ್ ಚಿತ್ರವನ್ನು ಬಿಡುಗಡೆಗೊಳಿಸುವ ತಯಾರಿಗೂ ಮತ್ತಷ್ಟು ಓಘ ಸಿಕ್ಕಿದೆ. ಏನ್ಸಿಯೆಂಟ್ ಮೂವೀಸ್ ಬ್ಯಾನರ್ನಡಿಯಲ್ಲಿ ಡಾ.ಆರ್ ಸಂತೋಷ್ ಕುಮಾರ್ (ಎಸ್ವಿಟಿ) ದಿಲ್ದಾರ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಈ ಚಿತ್ರದ ಮೂಲಕವೇ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದ ಹಾಸ್ಯ ನಟರ ದಂಡೇ ಈ ಚಿತ್ರದಲ್ಲಿದೆ. ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಖಳ ನಟರಾಗಿ ಅಬ್ಬರಿಸಿದ್ದಾರೆ.
keywords: shreyas manju, dildar movie, paddehuli, sandalwood

