ಡಾರ್ಲಿಂಗ್ ಕೃಷ್ಣ ಓರ್ವ ನಿರ್ದೇಶಕನಾಗಿ, ನಾಯಕನಾಗಿ ಅಕ್ಷರಶಃ ಮೋಡಿ ಮಾಡಿದ್ದಾರೆ. ಸಾಮಾನ್ಯವಾಗಿ ಅದೆಂಥಾದ್ದೇ ದೊಡ್ಡ ಗೆಲುವು ಕಂಡರೂ ಕೂಡಾ, ಒಂದು ಸಿನಿಮಾದ ಸೀಕ್ವೆಲ್ಗಳ ಮೂಲಕವೂ ಗೆಲುವು ದಕ್ಕಿಸಿಕೊಳ್ಳೋದು ತ್ರಾಸದಾಯಕ ವಿಚಾರ. ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಲ್ಲಿ ನಾಯಕ ನಟರೇ ನಿರ್ದೇಶಕರಾಗಿ ಬದಲಾದದ್ದಿದೆ. ನಿರ್ದೇಶಕರೇ ನಾಯಕನಾದದ್ದೂ ಇದೆ. ಆದರೆ, ಎರಡೆರಡು ಜವಾಬ್ದಾರಿಗಳನ್ನು ಏಕಕಾಲದಲ್ಲಿಯೇ ನಿಭಾಯಿಸುತ್ತಾ, ಮೂರು ಆವೃತ್ತಿಗಳಲ್ಲಿ ಒಂದನ್ನೊಂದು ಮೀರಿಸುವ ಗೆಲುವು ಕಂಡವರಿಲ್ಲ. ಅಂಥಾದ್ದೊಂದು ಮಹತ್ವದ ಗೆಲುವಿನ ದಾಖಲೆಯೀಗ ಡಾರ್ಲಿಂಗ್ ಕೃಷ್ಣ ಖಾತೆಗೆ ಜಮೆಯಾಗಿದೆ!
ಕನ್ನಡ ಮಾತ್ರವಲ್ಲ; ಒಂದಿಡೀ ಭಾರತೀಯ ಚಿತ್ರರಂಗದಲ್ಲಿಯೇ ಎರಡು ಸರಣಿ ಗೆಲುವುಗಳನ್ನು ಕಾಂತಾರ ಮೂಲಕ ತಮ್ಮದಾಗಿಸಿಕೊಂಡವರು ರಿಷಭ್ ಶೆಟ್ಟಿ. ಆದರೆ, ಡಾರ್ಲಿಂಗ್ ಕೃಷ್ಣ ರಿಷಭ್ಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ಯಾಕೆಂದರೆ, ಕೊರೋನಾದಂಥಾ ದುರಿತ ಕಾಲದಲ್ಲಿ ಧೈರ್ಯ ಮಾಡಿ ನಿರ್ದೇಶಕನಾಗಿದ್ದವರು ಕೃಷ್ಣ. ನಿರ್ದೇಶನದ ಜೊತೆ ನಾಯಕನಾಗಿಯೂ ನಟಿಸಲು ಕೃಷ್ಣ ಮುಂದಾದಾಗ ಅನೇಕರಲ್ಲಿ ಅನುಮಾನವಿತ್ತು. ಒಳಗೊಳಗೇ ನಕ್ಕವರು, ತಂತಮ್ಮಲ್ಲೇ ಕೊಂಕು ಮಾತಾಡಿದವರೆಷ್ಟೋ… ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಎರಡು ಸರಣಿಗಳಲ್ಲಿ ಗೆದ್ದಿದ್ದ ಡಾರ್ಲಿಂಗ್ ಕೃಷ್ಣ ಇದೀಗ ಮೂರನೇ ಆವೃತ್ತಿಯಲ್ಲಿ ಮಹಾ ಗೆಲುವನ್ನೇ ದಾಖಲಿಸಿದ್ದಾರೆ.
Love Mocktail3 Movie: ಕಾರ್ಗತ್ತಲ ಕಾಲದಲ್ಲಿ ಡಾರ್ಲಿಂಗ್ ಕೃಷ್ಣ ಹಚ್ಚಿದ್ದ ಕಂದೀಲು!
ಹಾಗೆ ನೋಡಿದರೆ, ಕನ್ನಡದಲ್ಲಿ ನಿರ್ದೇಶಕನಾಗಿಯೂ, ನಟನಾಗಿಯೂ ಅದೃಷ್ಟ ಪರೀಕ್ಷೆಗಿಳಿದವರ ಸಂಖ್ಯೆ ದೊಡ್ಡದಿದೆ. ಇಂಥಾದ್ದೊಂದು ಸಾಹಸದ ರೂವಾರಿಯಂತೆ ಕಾಣಿಸುವವರು ಶಂಕರ್ ನಾಗ್. ಆ ನಂತರದಲ್ಲಿ ಕಾಶೀನಾಥ್, ಉಪೇಂದ್ರ ಮುಂತಾದವರು ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದರು. ಹೊಸಾ ತಲೆಮಾರಿನಲ್ಲಿ ಪವನ್ ಕುಮಾರ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಮುಂತಾದವರೂ ಆ ಹಾದಿಯಲ್ಲಿ ತಮ್ಮದೇ ಆದೊಂದು ಗುರುತು ಮೂಡಿಸಿದ್ದಾರೆ. ಇಂಥಾದ್ದೊಂದು ಸಾಹಸದಲ್ಲಿ ಮೂರು ಸರಣಿಗಳಲ್ಲಿ ಭಾರೀ ಗೆಲುವು ದಾಖಲಿಸಿ ಅಚ್ಚರಿ ಮೂಡಿಸಿರೋದು ಡಾರ್ಲಿಂಗ್ ಕೃಷ್ಣ ಮಾತ್ರ!
ಕೇವಲ ಕನ್ನಡದಲ್ಲಿ ಮಾತ್ರವಲ್ಲ; ಭಾರತೀಯ ಚಿತ್ರರಂಗದಲ್ಲಿಯೇ ಒಂದು ಸಿನಿಮಾದ ಮೂರು ಆವೃತ್ತಿಗಳನ್ನು ನಿರ್ದೇಶಕನಾಗಿ, ನಟನಾಗಿ ಗೆದ್ದುಕೊಂಡವರು ಸಿಗೋದು ಕಷ್ಟ. ಆ ಸಾಲಿನಲ್ಲಿ ಲವ್ ಮಾಕ್ಟೇಲ್೩ ಸಮ್ಮೋಹಕ ಗೆಲುವಿನ ಮೂಲಕ ಡಾರ್ಲಿಂಗ್ ಕೃಷ್ಣ ಸೇರ್ಪಡೆಗೊಂಡಿದ್ದಾರೆ. ಅಷ್ಟಕ್ಕೂ ಈ ಬಾರಿ ಹಿಂದೆಂದಿಗಿಂತೂ ದೊಡ ಮಟ್ಟದ ಸವಾಲು ಕೃಷ್ಣ ಮುಂದಿತ್ತು. ಧುರಂಧರ್ ಥರದ ಸೂಪರ್ ಹಿಟ್ ಮೂವಿಯ ಮುಂದೆ ಕಾಲೂರಿ ನಿಂತು ಜಯಿಸೋದೇನೂ ಸಲೀಸಿನ ಸಂಗತಿಯಾಗಿರಲಿಲ್ಲ. ಧುರಂಧರ್ ಬಿರುಗಾಳಿಗೂ ಜಗ್ಗದೆ ಲವ್ ಮಾಕ್ಟೇಲ್೩ ಕಾಲೂರಿ ನಿಂತದ್ದರ ಹಿಂದೆ ಅದರೊಳಗಿನ ಕಸುವಲ್ಲದೇ ಬೇರ್ಯಾವ ಪವಾಡಗಳೂ ಇಲ್ಲ. ನೋಡಿದ ಮಂದಿ ಥ್ರಿಲ್ ಆಗಿ ಆಡಿದ ಮಾತುಗಳೇ ಲವ್ ಮಾಕ್ಟೇಲ್೩ ಹೌಸ್ ಫುಲ್ ಪ್ರದರ್ಶನ ಕಾಣುವಂತೆ ಮಾಡಿದೆ. ಈ ಗೆಲುವಿನ ಮೂಲಕ ಡಾರ್ಲಿಂಗ್ ಕೃಷ್ಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಯೊಂದರ ರೂವಾರಿಯಾಗಿದ್ದಾರೆ!
keywords: love mocktaile3 #darling krishna, great success of love mocktail, milana nagaraj

