ನ್ಯೂಸ್ ಚಾನೆಲ್ಲುಗಳು, ಮನೋರಂಜನಾತ್ಮಕ ವಾಹಿನಿಗಳು ಪ್ರವರ್ಧಮಾನಕ್ಕೆ ಬಂದ ನಂತರ ಕಳ್ಳ ಜ್ಯೋತಿಷಿಗಳ ಹಾವಳಿ ಮೇರೆ ಮೀರಿಕೊಂಡಿದೆ. ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಅರೆಬರೆ ಕಲಿತ ಜ್ಯೋತಿಷ್ಯ ಶಾಸ್ತ್ರವನ್ನೇ ಕಾಸು ಪೀಕುವ ದಂಧೆಗೆ ಬಳಸಿಕೊಳ್ಳುತ್ತಿರುವ ದಗಲ್ಬಾಜಿಗಳೇ ಮೆರೆದಾಡಲಾರಂಭಿಸಿದ್ದಾರೆ. ನಮ್ಮಲ್ಲಿ ಜೂಲುಗಡ್ಡದ ಆನಂದನಂಥಾ ಅಡ್ಡಕಸುಬಿಗಳಿದ್ದಾರಲ್ಲಾ? ಇವನಂಥಾದ್ದೇ ಬೇರೆ ಬೇರೆ ತಳಿಗಳು ನಾನಾ ರಾಜ್ಯಗಳಲ್ಲಿ ಪಿತಗುಡಲಾರಂಭಿಸಿವೆ. ಹಣವಂತರನ್ನು, ಸೆಲೆಬ್ರಿಟಿಗಳನ್ನು ಸುಲಿದು ಬದುಕುವ ಇಂಥಾ ಖದೀಮರ ಸಾಲಿನಲ್ಲಿ ಮುಂಚೂಣಿಯಲ್ಲಿರುವಾತ ನೆರೆಯ ಆಂಧ್ರಪ್ರದೇಶದ ವೇಣುಸ್ವಾಮಿ. ಸದಾ ಸಿನಿಮಾ ರಂಗದ ಮಂದಿಯ ಭವಿಷ್ಯ ಬೊಗಳುತ್ತಾ ಅಡ್ಡಾಡುವ ಈತನೀಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ನಾಲಿಗೆ ಹರಿಯಬಿಡುವ ಮೂಲಕ ಅಷ್ಟದಿಕ್ಕುಗಳಿಂದಲೂ ಉಗಿಸಿಕೊಳ್ಳುತ್ತಿದ್ದಾನೆ!
ಯಶ್ ಕೇಜಿಎಫ್ನಂಥಾ ಸಿನಿಮಾ ಹವಾವನ್ನು ಮುಂದುವರೆಸಲಾರದೆ ಖಿನ್ನತೆಗೊಳಗಾಗಿದ್ದಾನೆ ಅನ್ನೋದು ವೇಣುಸ್ವಾಮಿ ಮಾತಿನ ಸಾರಾಂಶ. ಮಾಧ್ಯಮಗಳ ಮುಂದೆ ಬಂದರೆ ಸಾಕು; ಕಂಡ ಕಂಡೋರ ಬಗ್ಗೆ ಒದರಾಡೋ ಈತ ಯಶ್ ಬಗ್ಗೆ ಮಾರುದ್ದ ಮಾತಾಡಿದ್ದಾನೆ. ಇದರ ಹಿಂದೆ ಸಹಜವಾಗಿಯೇ ಕನ್ನಡ ನಟನೋರ್ವ ಪ್ಯಾನಿಂಡಿಯಾ ಮಟ್ಟಕ್ಕೇರಿದ ಯಶ್ ಬಗ್ಗೆ ತೆಲುಗುವಾಳ್ಳು ವೇಣು ಸ್ವಾಮಿಯ ಮಾತುಗಳಲ್ಲಿ ಉರಿ ನಿಗಿನಿಗಿಸುತ್ತಿರೋದು ಸ್ಪಷ್ಟವಾಗಿದೆ. ಈಗ್ಗೆ ಎರಡು ತಿಂಗಳ ಹಿಂದೆ ಪಾಡ್ ಕಾಸ್ಟ್ ಒಂದರಲ್ಲಿ ವೇಣು ಸ್ವಾಮಿ ಮಾತಾಡಿರುವ ರೀತಿಯೀಗ ವೈರಲ್ ಆಗಿದೆ. ಯಶ್ ಅಭಿಮಾನಿಗಳೆಲ್ಲ ಸಾರಾಸಗಟಾಗಿ ಈ ಕಳ್ಳ ಜ್ಯೋತಿಷಿಯ ಜನ್ಮ ಜಾಲಾಡಲಾರಂಭಿಸಿದ್ದಾರೆ.
ಅಷ್ಟಕ್ಕೂ ಯಶ್ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಈತ ಸಿನಿಮಾ ಆಯ್ಕೆ ವಿಚಾರದಲ್ಲಿ ಪಕ್ಕಾ ಕಟ್ಟುನಿಟ್ಟಿನಿಂದ ಮುಂದುವರೆಯುತ್ತಿದ್ದಾರೆ. ಅದಿಲ್ಲದೇ ಹೋಗಿದ್ದರೆ ಯಾವುದ್ಯಾವುದೋ ಸಿನಿಮಾ ಒಪ್ಪಿಕೊಂಡು ಪ್ರಭಾಸ್ನಂತೆ ಹಳ್ಳ ಹಿಡಿಯಬೇಕಾಗಿ ಬರುತ್ತಿತ್ತೇನೋ. ಟಾಕ್ಸಿಕ್ ಈಗ ಪ್ಯಾನಿಂಡಿಯಾ ಮಟ್ಟದಲ್ಲಿ ಮೂಡಿಸಿರುವ ಕ್ರೇಜ್ ಸಣ್ಣ ಮಟ್ಟದ್ದೇನಲ್ಲ. ಅದರ ಬೆನ್ನಲ್ಲಿಯೇ ಬಹುನಿರೀಕ್ಷಿತ ಬಾಲಿವುಡ್ ರಾಮಾಯಣದಲ್ಲಿಯೂ ಕೂಡಾ ಯಶ್ ರಾವಣನಾಗಿ ಅಬ್ಬರಿಸಲು ಅಣಿಯಾಗಿದ್ದಾರೆ. ಯಾವತ್ತು ಪ್ಯಾನಿಂಡಿಯಾ ಏಣಿ ಹತ್ತಿದರೋ, ಆ ಕ್ಷಣದಿಂದಲೇ ದಿನದಿಂದ ದಿನಕ್ಕೆ ಒಂದಷ್ಟು ಹಂತಕ್ಕೆ ಮೇಲೇರುತ್ತಿದ್ದಾರೇ ವಿನಃ ಕೆಳಕ್ಕಿಳಿಯುವಂಥಾ ಪ್ರಮೇಯ ಬಂದಿಲ್ಲ. ಒಂದು ವೇಳೆ ಬಂದರೂ ಯಶ್ಗೆ ಅದನ್ನು ಸಂಭಾಳಿಸೋ ತಾಕತ್ತು ಖಂಡಿತಾ ಇದೆ. ಯಾಕೆಂದರೆ, ಆತ ಏಳು ಬೀಳುಗಳನ್ನು ಕಂಡುಂಡು ಬೆಳೆದು ಬಂದಿರುವ ನಟ.
ಹೀಗಿರುವಾಗ ಅದ್ಯಾವುದೋ ಪಾಡ್ಕಾಸ್ಟಿನಲ್ಲಿ ಕಳ್ಳ ಜ್ಯೋತಿಷಿ ವೇಣುಸ್ವಾಮಿ ಯಶ್ ಬಗ್ಗೆ ಹೀನಾಯವಾಗಿ, ಕಪೋಲಕಲ್ಪಿತ ಮಾತಾಡುತ್ತಾನೆಂದರೆ ಏನನ್ನಬೇಡ? ಬಹುಶಃ ಈ ಅಯೋಗ್ಯನ ಭವಿಷ್ಯವಾಣಿ ಕೇಳಿ ಬೆದರಿದ ಯಶ್ ಓಡೋಡಿ ಬಂದರೆ, ಯಾವುದೋ ಯಾಗದ ಮಂಕುಬೂದಿ ಎರಚಿ ಒಂದಷ್ಟು ಲಕ್ಷ ಪೀಕುವ ದರೋಡೆ ಮನಃಸ್ಥಿತಿ ಈತನದ್ದಿರಬಹುದು. ಯಶ್ ಬಗ್ಗೆ ಮಾತಾಡುವಾಗ ವೇಣುಸ್ವಾಮಿ ತೆಲುಗು ನಟನಾಗಿದ್ದರೆ ಮಾತಾಡುತ್ತಿರಲಿಲ್ಲ, ಕನ್ನಡದವನಾಗಿರುವುದಕ್ಕೆ ಪ್ರಸ್ತಾಪಿಸುತ್ತಿದ್ದೇನೆ ಎಂಬರ್ಥದಲ್ಲಿ ಮಾತಾಡಿದ್ದಾನೆ. ಈ ಹಿಂದೆ ಒಂದಷ್ಟು ವಿವಾದಾತ್ಮಕವಾಗಿ ಮಾತಾಡಿ ಕೇಸು ಜಡಿಸಿಕೊಂಡಿದ್ದವನು ವೇಣು ಸ್ವಾಮಿ. ಒಂದು ವೇಳೆ ತೆಲುಗು ನಟರ ಬಗ್ಗೆ ಈ ರೀತಿ ಮಾತಾಡಿದ್ದರೆ ವೇಣುಸ್ವಾಮಿಯ ಅಂಡಿಗೆ ಬಡಿಗೆ ಬೀಳುತ್ತಿತ್ತು. ಇಂಥಾ ಅಯೋಗ್ಯರನ್ನು ಈ ಸಿನಿಮಾ ಮಂದಿ ಅದ್ಯಾವ ಮೂರ್ಖತನದಿಂದ ನಂಬುತ್ತಾರೋ…
KEYWORDS: YASH, VENUSWAMY, TOLLYWOOD, SANDALWOOD, TOXIC
